More

    ಯೋಜನೆ ಹಸ್ತಾಂತರಕ್ಕೆ ಗ್ರಾಪಂ ತಕರಾರು

    ಗೋಕರ್ಣ: ಹಿರೇಗುತ್ತಿ ಗ್ರಾಪಂನಲ್ಲಿ ಜೆಜೆಎಂ (ಜಲ ಜೀವನ)ಯೋಜನೆಯಡಿ ನಡೆದಿರುವ ಕಾಮಗಾರಿ ಕುರಿತು ಗ್ರಾಪಂ ಮತ್ತು ಸಂಬಂಧಿಸಿದ ಯೋಜನಾ ಅಧಿಕಾರಿಗಳ ಮಧ್ಯೆ ವಿವಾದ ತಲೆದೋರಿದೆ.

    ನಿಗದಿತ ಯೋಜನೆಯಂತೆ ಗ್ರಾಪಂ ವ್ಯಾಪ್ತಿಯ ಎಲ್ಲ 1041 ಮನೆಗಳಿಗೆ ನೀರು ಮುಟ್ಟಿಸುವವರೆಗೆ ಮತ್ತು ಕೆಲವೆಡೆ ನಡೆಸಲಾದ ಅಸಮರ್ಪಕ ಕಾಮಗಾರಿ ಸರಿಪಡಿಸುವ ತನಕ ಯೋಜನೆ ಹಸ್ತಾಂತರಿಸಿಕೊಳ್ಳಲಾಗದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಉಮೇಶ ಗಾಂವಕರ, ಉಪಾಧ್ಯಕ್ಷ ಶಾಂತ ಎನ್. ನಾಯಕ ಮತ್ತು ಕೆಲ ಸದಸ್ಯರು ಪತ್ರಿಕೆಗೆ ತಿಳಿಸಿದ್ದಾರೆ.

    ಈ ಸಂಬಂಧ ಕುಮಟಾದ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರಿಗೆ ಲಿಖಿತ ಮನವಿಯನ್ನು ಗ್ರಾಮ ಪಂಚಾಯಿತಿಯಿಂದ ಅಧ್ಯಕ್ಷರು ನೀಡಿದ್ದಾರೆ.

    ನಾಲ್ಕೂವರೆ ಕೋಟಿ ರೂ.ಯೋಜನೆ

    ಜಲ ಜೀವನ ಅಭಿಯಾನದಡಿ ಒಟ್ಟು 4.50 ಕೋಟಿ ರೂ. ಅಂದಾಜು ಯೋಜನೆಯನ್ನು ಈ ಗ್ರಾಪಂನ ಹಿರೇಗುತ್ತಿ, ಕೋಳಿ ಮಂಜಗುಣಿ, ಮೊರಬಾ ಮತ್ತು ಎಣ್ಣೆಮಡಿ ಮಜರೆಗಳಲ್ಲಿನ 1041 ಮನೆಗಳಿಗೆ ನೀರೊದಗಿಸುವ ಗುರಿ ಹೊಂದಲಾಗಿದೆ.

    ಈ ಯೋಜನೆಯಡಿ ಹಿರೇಗುತ್ತಿಯ 692, ಕೋಳಿಮಂಜಗುಣಿಯ 67, ಮೊರಬಾದ 235 ಮತ್ತು ಎಣ್ಣೆಮಡಿಯ 47 ಮನೆಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಆದರೆ, ಗ್ರಾಪಂಗೆ ಸೇರಿದ ನವಗ್ರಾಮದ 60 ಮತ್ತು ಸಾಯಿಗ್ರಾಮದ 15 ಮನೆಗಳಿಗೆ ಯೋಜನೆಯಡಿ ಅವಕಾಶ ನೀಡದಿರುವ ಕುರಿತು ಗ್ರಾಪಂ ವತಿಯಿಂದ ಅಸಮಾಧಾನ ವ್ಯಕ್ತವಾಗಿದೆ.

    ಅಪೂರ್ಣ ಕಾಮಗಾರಿ

    ಕಾಮಗಾರಿ ಸಂಬಂಧ ಸಮಗ್ರ ಮಾಹಿತಿ ಒದಗಿಸಿದ ಅವರು ಹಿರೇಗುತ್ತಿಯಲ್ಲಿ ನೀರಿನ ಟ್ಯಾಂಕ್ ಕಟ್ಟಲಾಗಿದೆ.

    ಆದರೆ, ನಾಡೋರಕೊಪ್ಪ, ಕುಂಬಾರಕೊಪ್ಪ ಭಾಗಗಳಲ್ಲಿ ಪೈಪ್​ಲೈನ್ ಪೂರ್ಣಗೊಳಿಸುವುದು ಬಾಕಿಯಿದೆ. ಕೋಳಿಮಂಜಗುಣಿಯಲ್ಲಿ ಟ್ಯಾಂಕ್ ನಿರ್ಮಾಣ ಮತ್ತು ಕೊಳವೆ ಕೆಲಸ ಮಾಡಲಾಗಿಲ್ಲ.

    ಮೊರಬಾದಲ್ಲಿ ಕೊಳವೆ ಜೋಡಣೆ ಪೂರ್ತಿಯಾಗಿದೆ ಎಂದು ಹೇಳಲಾಗಿದೆ. ಆದರೆ, ನೀರು ಬಿಡದಿರುವ ಬಗ್ಗೆ ಅಲ್ಲಿನ ನಿವಾಸಿಗಳು ಗ್ರಾಪಂಗೆ ದೂರಿಕೊಂಡಿದ್ದಾರೆ. ನುಶಿಕೋಟೆ ಮತ್ತು ಪಡ್ತಿಕೇರಿಯಲ್ಲಿನ 85 ಮನೆಗಳಲ್ಲಿನ ಕಾಮಗಾರಿ ಉಳಿದ ಮಜರೆಗಳಿಗಿಂತ ತೃಪ್ತಿಕರ ಎನ್ನಲಾಗಿದೆ.

    ಇನ್ನು ಎಣ್ಣೆಮಡಿ ಗ್ರಾಮದಲ್ಲಿ ಯೋಜನೆಯಡಿ ಬರುವ ಕೆಲವು ದೂರದಲ್ಲಿರುವ ಮನೆಗಳಿಗೆ ಪೈಪ್ ಜೋಡಿಸಲಾಗಿಲ್ಲ ಎಂಬ ದೂರಿದೆ.

    ಜೆಜೆಎಂ ಸಮಸ್ಯೆಯ ಸಂಪೂರ್ಣ ತೊಂದರೆಗಳ ಬಗ್ಗೆ ಕಳೆದ ಜು. 3ರಂದು ಗ್ರಾಪಂ ವತಿಯಿಂದ ಯೋಜನೆಗೆ ಸಂಬಂಧಿಸಿದ ಕುಮಟಾ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರಿಗೆ ಲಿಖಿತ ಪತ್ರ ನೀಡಿ ಕಾಮಗಾರಿ ಹಾಳಾಗಲು ಯೋಜನಾ ಸಂಬಂಧಿ ಅಧಿಕಾರಿಗಳು ಕಾರಣರಾಗಿದ್ದಾರೆ.

    ಈ ಮೊದಲೇ ಈ ಬಗ್ಗೆ ರ್ಚಚಿಸಲು ಗ್ರಾಪಂ ಸಭಾಂಗಣದಲ್ಲಿ ಸಭೆ ಆಯೋಜಿಸಿದಾಗ ಯಾವುದೇ ಅಧಿಕಾರಿಗಳು ಸಭೆಗೆ ಹಾಜರಾಗದೆ ನಿರ್ಲಕ್ಷ ತೋರಿದ್ದಾರೆ. ಇವುಗಳ ಜತೆಗೆ ಕಳೆದ ಜನವರಿ 2023ರಲ್ಲಿ ಜೆಜೆಎಂ ಅವ್ಯವಸ್ಥೆಯನ್ನು ಲಿಖಿತವಾಗಿ ತಾಲೂಕು ಪಂಚಾಯಿತಿಗೆ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಲಾಗಿದೆ.

    ಜೆಜೆಎಂ ಯೋಜನೆಯ ಕರಡು ಪ್ರತಿ ಪ್ರಕಾರ ಯಾವುದೇ ನಿಯಮ ಉಲ್ಲಂಘನೆ ಆಗದಂತೆ ಕಾಮಗಾರಿ ಕೈಗೊಂಡು ಮನೆ ಮನೆಗೆ ನೀರು ತಲುಪುವಂತಾಗಲಿ. ಈ ಬಗ್ಗೆ ಗ್ರಾಮಸ್ಥರಿಂದ ಯಾವುದೇ ಆಕ್ಷೇಪ ಬರದಂತೆ ಅಧಿಕಾರಿಗಳು ಕರ್ತವ್ಯ ಪರರಾಗಲಿ. ಅಲ್ಲಿಯವರೆಗೆ ಯೋಜನೆಯ ಹಸ್ತಾಂತರ ನಡೆಸಬಾರದು ಎಂದು ಆಗ್ರಹಿಸುತ್ತಿದ್ದೇನೆ
    | ಶಾಂತ ಎನ್. ನಾಯಕ ಉಪಾಧ್ಯಕ್ಷ, ಹಿರೇಗುತ್ತಿ ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts