More

    ಪಿಂಚಣಿ ಕೊಡಿಸಿ, ಇಲ್ಲವೆ ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ನಿವೃತ್ತ ಶಿಕ್ಷಕ

    ರಾಯಚೂರು: ಪಿಂಚಣಿ ಇಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಸರ್ಕಾರದ ತಾರತಮ್ಯ ಮತ್ತು ವಿಳಂಬ ಧೋರಣೆಯಿಂದಾಗಿ ಇಂಥ ಪರಿಸ್ಥಿತಿ ಬಂದಿದೆ. ಪಿಂಚಣಿ ಕೊಡಿಸಿ, ಇಲ್ಲವೆ ದಯಾಮರಣಕ್ಕೆ ಅನುಮತಿ ನೀಡಿ ಎಂದು ರಾಷ್ಟ್ರಪತಿಗೆ ಸ್ಥಳೀಯ ಎನ್‌ಜಿಒ ಶಾಲೆ (ಅನುದಾನಿತ) ನಿವೃತ್ತ ಶಿಕ್ಷಕ ಸಂಗಯ್ಯ ಸೊಪ್ಪಿಮಠ ಪತ್ರ ಬರೆದಿದ್ದಾರೆ.

    ಪ್ರಾಥಮಿಕ ಶಾಲಾ ಶಿಕ್ಷಕನಾಗಿ 1988ರ ಜೂ.1ರಂದು ನೇಮಕ ಹೊಂದಿದ್ದೇನೆ. ನೇಮಕ ಹೊಂದಿದ ಶಾಲಾ ಪ್ರಾರಂಭಕ್ಕೆ ಅನುಮತಿ ಆದೇಶವನ್ನು ಇಲಾಖೆ ಅನುಸಂಹಿತೆ ನಿಯಮದ ಪ್ರಕಾರ ನೀಡಿದೆ. ಶಾಲೆ ಪ್ರಾರಂಭವಾದ ಏಳು ವರ್ಷಗಳವರೆಗೆ ಅನುದಾನ ಪಡೆಯುತ್ತಿಲ್ಲ ಎಂದು ಉಲ್ಲೇಖವಿದೆ. ಆದೇಶ ಮತ್ತು ಷರತ್ತಿನ ಅನುಸಾರ ನನ್ನ ನೇಮಕವಾಗಿದೆ. ನಿಯಮಾವಳಿ ಪ್ರಕಾರ ನನ್ನ ನೇಮಕ 1992ರ ಜ.31ರಂದು ಶಿಕ್ಷಣ ಇಲಾಖೆ ಸಹಾಯಕ ಶಿಕ್ಷಣಾಧಿಕಾರಿ ಆದೇಶ ನೀಡಿದ್ದಾರೆ. ಆದರೆ, ಸರ್ಕಾರವು ಕೇವಲ ಪ.ಜಾತಿ, ವರ್ಗದ ಆಡಳಿತ ಮಂಡಳಿ ಶಾಲೆಗಳಿಗೆ 1994ರ ಜ.30ರಂದು ವೇತನಾನುದಾನಕ್ಕೆ ಒಳಪಡಿಸಿದೆ. ಆದರೆ, ಇತರೆ ಹಿಂದುಳಿದ ವರ್ಗದ ಶಾಲೆಗಳಿಗೆ 2008ರಿಂದ ಅನುದಾನ ನೀಡಲು ಪ್ರಾರಂಭಿಸಿತು. ಇದರ ಪ್ರಕಾರ ನನ್ನ ಹುದ್ದೆಗೆ ಸರ್ಕಾರದಿಂದ 2011ರ ಡಿ.30ಕ್ಕೆ ಅನುದಾನ ಲಭಿಸಿದೆ. ಯಾವುದೇ ವರ್ಗದ ಶಾಲೆಗಳಲ್ಲಿ ಮೀಸಲು ಬಿಂದುವಿನ ಪ್ರಕಾರ ನೇಮಕಗಳು ನಡೆದಿರುತ್ತವೆ. ಆದರೆ, ಕೇವಲ ಪಜಾತಿ, ವರ್ಗದ ಆಡಳಿತ ಮಂಡಳಿ ಶಾಲೆಗಳಿಗೆ ಅನುದಾನ ನೀಡಿದ 13 ವರ್ಷಗಳ ನಂತರ ಇತರೆ ಹಿಂದುಳಿದ ವರ್ಗದ ಶಾಲೆಗಳಿಗೆ ಅನುದಾನ ನೀಡಲಾಗಿದೆ. ಹಾಗಾದರೆ ನಮ್ಮಲ್ಲಿರುವ ಪಜಾತಿ ಮತ್ತು ವರ್ಗದ ಹಿಂದುಳಿದ ವರ್ಗಗಳ ಮೀಸಲಿಗೆ ಸಂವಿಧಾನದಲ್ಲಿ ಬೆಲೆಯಿಲ್ಲವೇ ?

    ಸಾಮಾಜಿಕ ನ್ಯಾಯದಿಂದ ವಂಚಿತನಾದ ನಾನು ಪ್ರಸಕ್ತ ವರ್ಷದ ಮೇ 31ರಂದು ನಿವೃತ್ತಿಯಾಗಿದ್ದು, ಪಿಂಚಣಿ ಇರುವುದಿಲ್ಲ. ಇದರಿಂದ 61 ವರ್ಷದ ನಾನು ಸಂಸಾರ ನಡೆಸಲು ಭದ್ರತೆಯಿಲ್ಲದ ಕಾರಣ ಸಮಸ್ಯೆ ಎದುರಾಗಿದೆ. ಪಿಂಚಣಿ ಕೊಡಿಸಿ ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಿ ಎಂದು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts