More

    ಜಿಲ್ಲೆಯಲ್ಲಿ ಶೇ. 79 ಮತದಾನ

    ಗದಗ: ಮೊದಲ ಹಂತದಲ್ಲಿ ಜಿಲ್ಲೆಯ ಗದಗ, ಲಕ್ಷೆ್ಮೕಶ್ವರ, ಶಿರಹಟ್ಟಿ ತಾಲೂಕಿನ 53 ಗ್ರಾಮ ಪಂಚಾಯಿತಿಗಳ 743 ಸ್ಥಾನಗಳಿಗೆ ಮಂಗಳವಾರ ಶಾಂತಿಯುತವಾಗಿ ಮತದಾನ ನಡೆಯಿತು. ಕಣದಲ್ಲಿ ಒಟ್ಟು 2216 ಅಭ್ಯರ್ಥಿಗಳಿದ್ದಾರೆ. ಒಟ್ಟು ಶೇ. 79.12 ರಷ್ಟು ಮತದಾನವಾಗಿದೆ.

    ಗದಗ ತಾಲೂಕು ಶೇ.80.03, ಲಕ್ಷ್ಮೇಶ್ವರ ತಾಲೂಕು ಶೇ.78.23 ಹಾಗೂ ಶಿರಹಟ್ಟಿ ತಾಲೂಕಿನಲ್ಲಿ ಶೇ.79.09 ರಷ್ಟು ಮತದಾನವಾಗಿದೆ.

    ಬೆಳಗ್ಗೆ 7ರಿಂದಲೇ ಮತದಾನ ಕಾರ್ಯ ಶುರುವಾದರೂ ಚಳಿ ಇದ್ದುದರಿಂದ ಆರಂಭದಲ್ಲಿ ಕೆಲವೆಡೆ ಮತದಾರರು ಮತಗಟ್ಟೆ ಕಡೆ ಸುಳಿಯಲಿಲ್ಲ. ಹಲವಾರು ಮತಗಟ್ಟೆ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಪೂಜೆ ಸಲ್ಲಿಸಿದರು. 10 ಗಂಟೆ ನಂತರ ಮತದಾನ ಪ್ರಕ್ರಿಯೆ ಚುರುಕುಗೊಂಡಿತು. ಬಹುತೇಕರು ಹಕ್ಕು ಚಲಾಯಿಸಿ ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ತೆರಳುವ ಧಾವಂತದಲ್ಲಿದ್ದರು.

    ಗದಗ ತಾಲೂಕಿನ ಹರ್ತಿ, ಬೆಳಧಡಿ, ನಾಗಾವಿ ಮತ್ತು ತಾಂಡಾಗಳಲ್ಲಿ ಬೆಳಗ್ಗೆಯಿಂದಲೇ ಜನರು ಗುಂಪಾಗಿ ಬಂದು ಹಕ್ಕು ಚಲಾಯಿಸಿದರು. ಮಧ್ಯಾಹ್ನ 3 ಗಂಟೆ ಹೊತ್ತಿಗೆ ಜನರು ಮತಗಟ್ಟೆಗೆ ಆಗಮಿಸುವುದು ಹೆಚ್ಚಾಯಿತು. ವೃದ್ಧರನ್ನು ದ್ವಿಚಕ್ರ ವಾಹನ, ಅಟೋ, ಟ್ರ್ಯಾಕ್ಟರ್​ಹಾಗೂ ಇತರ ವಾಹನಗಳ ಮೂಲಕ ಕರೆದುಕೊಂಡು ಬಂದು ಮತ ಹಾಕಿಸಲಾಯಿತು. ಕೆಲ ವೃದ್ಧೆಯರು ನಡೆದುಕೊಂಡು ಬಂದು ಹಕ್ಕು ಚಲಾಯಿಸಿದರು. ಮಧ್ಯಾಹ್ನ ನಂತರ ಶಿರಹಟ್ಟಿ ತಾಲೂಕಿನ ವಡವಿಹೊಸೂರ, ಕೊಂಚಿಗೇರಿ, ಬೆಳ್ಳಟ್ಟಿ, ಕಡಕೋಳ, ಛಬ್ಬಿ, ಮಾಗಡಿ, ಹೆಬ್ಬಾಳ, ಕಡಕೋಳ, ಬನ್ನಿಕೊಪ್ಪ ಗ್ರಾಮದಲ್ಲಿ ತುರುಸಿನ ಮತದಾನ ನಡೆಯಿತು. ಮತಗಟ್ಟೆಗಳ ಹೊರಗಡೆ ನಿಂತು ತಮ್ಮ ಪರ ಮತ ಚಲಾಯಿಸುವಂತೆ ಅಭ್ಯರ್ಥಿಗಳು ಕೈ ಮುಗಿದು ಮನವಿ ಮಾಡಿಕೊಳ್ಳುತ್ತಿದ್ದರು.

    ಕೋವಿಡ್-19 ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಮತದಾನ ಮಾಡಿದರು. ಆದರೆ, ಗದಗ ತಾಲೂಕಿನ ಹರ್ತಿ, ಶಿರಹಟ್ಟಿ ತಾಲೂಕಿನ ಮಾಗಡಿ ಮತ್ತಿತರ ಕಡೆಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳದಿರುವುದು ಕಂಡು ಬಂತು. ಸ್ಥಳದಲ್ಲಿದ್ದ ಪೊಲೀಸರು, ಚುನಾವಣಾಧಿಕಾರಿಗಳೂ ಗಮನ ಹರಿಸಲಿಲ್ಲ. ಮತದಾನಕ್ಕೂ ಮುನ್ನ ಪ್ರತಿಯೊಬ್ಬರ ಕೈಗೆ ಸ್ಯಾನಿಟೈಸರ್ ಸಿಂಪಡಿಸಿ ಥರ್ಮಲ್ ಸ್ಕ್ರೀನಿಂಗ್​ಗೆ ಒಳಪಡಿಸಲಾಯಿತು.

    381 ಮತಗಟ್ಟೆಗಳಲ್ಲಿ 244 ಸಾಮಾನ್ಯ, 61 ಸೂಕ್ಷ್ಮ ಹಾಗೂ 76 ಅತೀಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪದ ಮತಗಟ್ಟೆಯಲ್ಲಿ ಬೃಹನ್ಮಠದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ಗದಗ ತಾಲೂಕಿನ ಹುಲಕೋಟಿ ಗ್ರಾಮದ 2ನೇ ವಾರ್ಡ್​ನ 53ನೇ ಬೂತ್​ನಲ್ಲಿ ಶಾಸಕ ಎಚ್.ಕೆ. ಪಾಟೀಲ ಮತ ಚಲಾಯಿಸಿದರು.

    ಮೊಬೈಲ್ ನಿಷೇಧ: ಮತಗಟ್ಟೆ ಇರುವ ಶಾಲಾ ಆವರಣದಲ್ಲಿ ಮೊಬೈಲ್​ಫೋನ್ ಬಳಕೆ ನಿಷೇಧಿಸಲಾಗಿತ್ತು. ಗದಗ ತಾಲೂಕಿನ ಕುರ್ತಕೋಟಿ, ಬಿಂಕದಕಟ್ಟಿ ಸೇರಿ ಇತರೆಡೆ ಮತಗಟ್ಟೆ ಆವರಣದೊಳಗೆ ಮೊಬೈಲ್​ಫೋನ್ ಹಿಡಿದು ಓಡಾಡುತ್ತಿದ್ದ ಜನರಿಗೆ ಎಚ್ಚರಿಕೆ ನೀಡಲಾಯಿತು.

    ಭದ್ರತೆ: ಮೊದಲನೇ ಹಂತದ ಗ್ರಾಪಂ ಚುನಾವಣೆಗೆ ಒಟ್ಟಾರೆ 53 ಚುನಾವಣಾಧಿಕಾರಿಗಳು, 57 ಸಹಾಯಕ ಚುನಾವಣಾಧಿಕಾರಿಗಳು, 419 ಪಿಆರ್​ಒಗಳು, 1258 ಮತಗಟ್ಟೆ ಅಧಿಕಾರಿಗಳು, 381 ಗ್ರುಪ್ ಡಿ ಸಿಬ್ಬಂದಿ ಸೇರಿ ಇತರ 19 ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು.

    ಮತಗಟ್ಟೆ ಬಳಿ ವ್ಯಾಪಾರ: ಗದಗ, ಲಕ್ಷೆ್ಮೕಶ್ವರ ಮತ್ತು ಶಿರಹಟ್ಟಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಮತಗಟ್ಟೆ ಸಮೀಪದ ಹೋಟೆಲ್​ಗಳಲ್ಲಿ ವ್ಯಾಪಾರ ಭರ್ಜರಿಯಾಗಿತ್ತು. ಕೆಲವೆಡೆ ಟೆಂಟ್ ಹಾಕಿಕೊಂಡು ಉಪ್ಪಿಟ್ಟು, ಮಂಡಕ್ಕಿ ಮತ್ತು ಚಹಾ ಮಾರಾಟ ಮಾಡಲಾಯಿತು.

    ಜಿಲ್ಲಾಧಿಕಾರಿ ಭೇಟಿ: ಗೊಜನೂರ, ಮಾಗಡಿ ಸೇರಿ ವಿವಿಧ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು. ಮತಗಟ್ಟೆ ಪ್ರವೇಶದಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಪರಿಶೀಲಿಸಿದರು. ಮತಗಟ್ಟೆ ಕೇಂದ್ರದ ಹೊರಗೆ ಜನ ಗುಂಪು ಸೇರದಂತೆ, ಮತದಾನಕ್ಕೆ ಬಂದವರು ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಯುವಂತೆ ನೋಡಿಕೊಳ್ಳಬೇಕು ಎಂದು ಆಯಾ ಮತಗಟ್ಟೆ ಚುನಾವಣಾಧಿಕಾರಿಗಳಿಗೆ, ಪೊಲೀಸ್ ಸಿಬ್ಬಂದಿಗೆ ಸೂಚಿಸಿದರು. ಜಿಲ್ಲಾ ಉಪವಿಭಾಗಾಧಿಕಾರಿ

    ಮತಗಟ್ಟೆಯಲ್ಲಿ ಗಜಿಬಿಜಿ: ಲಕ್ಷೆ್ಮೕಶ್ವರ ತಾಲೂಕಿನಲ್ಲಿಯೂ ಕೋವಿಡ್ ಮಾರ್ಗಸೂಚಿಗಳು ಪಾಲನೆಯಾಗಲಿಲ್ಲ. ಬಹುತೇಕ ಮತಗಟ್ಟೆಗಳಲ್ಲಿ ಈ ನಿಯಮ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿತ್ತು. ಬೆಳಗ್ಗೆ ಮತದಾನ ಪ್ರಕ್ರಿಯೆ ಆರಂಭದಲ್ಲಿ ಮಾಸ್ಕ್ ಧರಿಸುವಂತೆ ಆರೋಗ್ಯ, ಪೊಲೀಸ್ ಮತ್ತು ಗ್ರಾಪಂ ಸಿಬ್ಬಂದಿ ಸೂಚನೆ ನೀಡಿದರು. ಮತದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ನಿಯಮ ಪಾಲನೆಯಾಗಲಿಲ್ಲ. ಮತ ಕೇಂದ್ರದ ಹೊರಗೆ ಬೆಳಗ್ಗೆಯಿಂದ ಸಂಜೆವರೆಗೂ ಜನಜನಂಗುಳಿ ಸೇರಿತ್ತು. ಮತಕೇಂದ್ರದಲ್ಲಿ ಪೋಲಿಂಗ್ ಏಜೆಂಟರ ಸಂಖ್ಯೆ ಹೆಚ್ಚಳದಿಂದ ಒಂದಿಷ್ಟು ಕಿರಿಕಿರಿ ಉಂಟಾಯಿತು. ರಾಮಗೇರಿ ಗ್ರಾಪಂನ ವಾರ್ಡ್ 2ರಲ್ಲಿ 4 ಸದಸ್ಯ ಸ್ಥಾನಕ್ಕೆ 22 ಅಭ್ಯರ್ಥಿಗಳಿದ್ದಾರೆ. ಪ್ರತಿ ಅಭ್ಯರ್ಥಿಗೆ ಒಬ್ಬರಂತೆ 24 ಏಜೆಂಟರು ಜತೆಗೆ ನಾಲ್ವರು ಸಿಬ್ಬಂದಿ ಒಂದೇ ಕೊಠಡಿಯಲ್ಲಿದ್ದರು. ತಾಲೂಕಿನ ಶಿಗ್ಲಿ ಗ್ರಾಪಂನಲ್ಲಿ 28 ಸದಸ್ಯ ಸ್ಥಾನಕ್ಕೆ 95 ಅಭ್ಯರ್ಥಿಗಳು ಕಣದಲ್ಲಿದ್ದು, ತುರುಸಿನ ಮತದಾನ ನಡೆಯಿತು.

    ಚುನಾವಣೆ ಬಹಿಷ್ಕಾರ ಎಚ್ಚರಿಕೆ: ಲಕ್ಷೆ್ಮೕಶ್ವರ ತಾಲೂಕಿನ ದೊಡ್ಡೂರ ಗ್ರಾಪಂ ವ್ಯಾಪ್ತಿಯ ಮುನಿಯನ ತಾಂಡಾದಲ್ಲಿ 211 ಮತದಾರರಿದ್ದು 6 ಕಿ.ಮೀ ದೂರ ಮತ್ತು ದೊಡ್ಡೂರ ತಾಂಡಾದಲ್ಲಿ 265 ಮತದಾರರಿದ್ದು 4 ಕಿ.ಮೀ ದೂರದ ದೊಡ್ಡೂರ ಗ್ರಾಮಕ್ಕೆ ಬಂದು ಮತದಾನ ಮಾಡಬೇಕು. ಮತದಾನಕ್ಕೆ ಅಭ್ಯರ್ಥಿಗಳು ವ್ಯವಸ್ಥೆ ಮಾಡಿದ ವಾಹನದಲ್ಲಿ ಹೋಗಬೇಕು. ಈ ಎರಡೂ ತಾಂಡಾಗಳಿಗೆ ಬಸ್ ಸೌಕರ್ಯವೂ ಇಲ್ಲ. ‘ನಮ್ಮ ತಾಂಡಾದಲ್ಲಿಯೇ ಮತದಾನ ಕೇಂದ್ರ ಆರಂಭಿಸಬೇಕು ಎಂದು ಅನೇಕ ವರ್ಷಗಳಿಂದ ಆಗ್ರಹಿಸುತ್ತ ಬಂದರೂ ಪ್ರಯೋಜನವಾಗಿಲ್ಲ. ಮುಂಬರುವ ಯಾವುದೇ ಚುನಾವಣೆಯಲ್ಲಿ ನಮ್ಮೂರಲ್ಲಿ ಮತಗಟ್ಟೆ ಆರಂಭವಾಗದಿದ್ದರೆ ಮತದಾನ ಬಹಿಷ್ಕರಿಸುತ್ತೇವೆ’ ಎಂದು ದೊಡ್ಡೂರ ತಾಂಡಾದ ಟೋಪಣ್ಣ ಲಮಾಣಿ, ತಿಪ್ಪಣ್ಣ ಲಮಾಣಿ, ಲಕ್ಷ್ಮಪ್ಪ ಲಮಾಣಿ, ಹಾಲಪ್ಪ ಲಮಾಣಿ, ಫಕ್ಕಪ್ಪ ಲಮಾಣಿ ಮತ್ತು ಮುನಿಯನ ತಾಂಡಾದ ಕಿರಪ್ಪ ಲಮಾಣಿ, ಶಿವಪ್ಪ ಲಮಾಣಿ, ಜಾನಪ್ಪ ಲಮಾಣಿ ಸೇರಿ ಎಚ್ಚರಿಸಿದರು.

    ಹೊಡೆದಾಟದಲ್ಲಿ ಇಬ್ಬರಿಗೆ ಗಾಯ: ಚುನಾವಣೆ ವೈಷಮ್ಯದಿಂದ ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಗ್ರಾಪಂ ವ್ಯಾಪ್ತಿಯ ಕೊಂಡಿಕೊಪ್ಪ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಹೊಡೆದಾಟವಾಗಿ ಇಬ್ಬರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಬಸವರಾಜ ನೀರಲಗಿ, ಬಸವರಾಜ ಬನ್ನಿಮಟ್ಟಿ ಎಂಬುವರು ಗಾಯಗೊಂಡಿದ್ದು, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಚುನಾವಣೆಗೆ ಸಂಬಂಧಿಸಿ ತಮ್ಮ ಪರವಾಗಿ ಕೆಲಸ ಮಾಡಲಿಲ್ಲ ಎಂಬ ಕಾರಣದಿಂದ ಅಭ್ಯರ್ಥಿಯೊಬ್ಬರ ಪತಿ ಮತ್ತು ಆತನ ಸಹೋದರ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಮತದಾನ ಪ್ರಕ್ರಿಯೆ ಮುಗಿಯುವ ಹೊತ್ತಿಗೆ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts