More

    ಜಿಲ್ಲೆಯ 7 ಸ್ಥಾನಗಳಿಗಿಲ್ಲ ಸ್ಪರ್ಧೆ

    ಕಾರವಾರ: ಯಾವುದೇ ಚುನಾವಣೆಯಲ್ಲಾದರೂ ಮೀಸಲಾತಿ ಇಲ್ಲದ ಸಾಮಾನ್ಯ ಸ್ಥಾನಕ್ಕೆ ಎಲ್ಲಿಲ್ಲದ ಪೈಪೋಟಿ ಇರುತ್ತದೆ. ಆದರೆ, ಈ ಬಾರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಗ್ರಾಪಂ ಮೊದಲ ಹಂತದ ಚುನಾವಣೆಯಲ್ಲಿ ಮಾತ್ರ ವಿಭಿನ್ನ ಪರಿಸ್ಥಿತಿ ಇದೆ. ಜಿಲ್ಲೆಯ ಮೂರ್ನಾಲ್ಕು ಕಡೆ ಸಾಮಾನ್ಯ ಸ್ಥಾನಕ್ಕೇ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ.

    ಮೀಸಲಾತಿಯ ಗೊಂದಲ ಹಾಗೂ ವಿವಿಧ ಕಾರಣಗಳಿಗೆ ಜಿಲ್ಲೆಯ ಕರಾವಳಿಯ ಏಳು ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಅದರಲ್ಲಿ ಮೂರು ಸ್ಥಾನಗಳು ಸಾಮಾನ್ಯ ಹಾಗೂ ಒಂದು ಸಾಮಾನ್ಯ ಮಹಿಳಾ ಕ್ಷೇತ್ರವಾಗಿದ್ದವು ಎಂಬುದು ವಿಶೇಷ.

    ಮುಗ್ವಾ ಗ್ರಾಮ ಪಂಚಾಯಿತಿಯ ನಗರೆ ವಾರ್ಡ್​ನಲ್ಲಿ ಒಟ್ಟು ಮೂರು ಸ್ಥಾನಗಳಿದ್ದು, ಅದರಲ್ಲಿ ಒಂದು ಕ್ಷೇತ್ರಕ್ಕೆ ಮೀಸಲಾತಿ ಇಲ್ಲ. ಆದರೆ, ಮೀಸಲು ಕ್ಷೇತ್ರಕ್ಕೆ ಸ್ಪರ್ಧಿಸುವ ಬರದಲ್ಲಿ ಸಾಮಾನ್ಯ ಕ್ಷೇತ್ರಕ್ಕೇ ಯಾರೂ ಸ್ಪರ್ಧಿಸದೇ ಖಾಲಿ ಬಿಡಲಾಗಿದೆ. ಭಟ್ಕಳ ಮಾವಳ್ಳಿ ಗ್ರಾಪಂನ ಮಾವಳ್ಳಿ 2 ವಾರ್ಡ್​ನಲ್ಲಿಯೂ ಯಾವುದೇ ಮೀಸಲಾತಿ ಇಲ್ಲದ ಸಾಮಾನ್ಯ ಸ್ಥಾನಕ್ಕೆ ನಾಮಪತ್ರವೇ ಸಲ್ಲಿಕೆಯಾಗಿಲ್ಲ. ಅಂಕೋಲಾ ಬಾವಿಕೇರಿ ಗ್ರಾಪಂನ ಗಾಂವಕರ ಕೇರಿಯ ಮೂರು ಸ್ಥಾನಗಳ ಪೈಕಿ ಸಾಮಾನ್ಯಕ್ಕೆ ತೆರೆದುಕೊಂಡಿರುವ ಒಂದು ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲ.

    ಅಂಕೋಲಾದ ಬೆಳಸೆ ಗ್ರಾಪಂನ ತೆಂಕನಾಡ ವಾರ್ಡ್​ನಲ್ಲಿ ಒಟ್ಟು 5 ಸ್ಥಾನಗಳಿದ್ದು, ಅದರಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾದ ಒಂದು ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಮೀಸಲಾತಿಯ ಗೊಂದಲದ ನಡುವೆ ಹೀಗಾಗಿದೆ ಎನ್ನುತ್ತಾರೆ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಶಂಕರ ಗೌಡ.

    ಅಂಕೋಲಾದ ಡೋಂಗ್ರಿ ಗ್ರಾಪಂ ವ್ಯಾಪ್ತಿಯ ಕನಕನಹಳ್ಳಿಯ 3 ಸ್ಥಾನಗಳಲ್ಲಿ ಹಿಂದುಳಿದ ಅ ವರ್ಗ ಅ ಮಹಿಳೆಗೆ ಮೀಸಲಾದ ಒಂದು ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದು, ದಾಖಲೆ ಕೊರತೆಯಿಂದ ಅದೂ ತಿರಸ್ಕೃತವಾಗಿದೆ ಇದರಿಂದ ಒಂದು ಸ್ಥಾನ ಹಾಗೇ ಉಳಿದಿದೆ.

    ಕಾರವಾರದ ಕಿನ್ನರ ಗ್ರಾಪಂನಲ್ಲಿ ಎಸ್​ಟಿ ಜನರೇ ಇಲ್ಲ. ಆದ್ದರಿಂದ ಆ ಮೀಸಲಾತಿಯ ಒಂದು ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ವೈಲವಾಡ ಗ್ರಾಪಂನಲ್ಲಿ ಎಸ್​ಸಿ ಮೀಸಲಾದ ವೈಲವಾಡ ವಾರ್ಡ್​ನ ಒಂದು ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ತಮ್ಮ ವಾರ್ಡ್​ಗೆ ಎರಡು ಸ್ಥಾನ ಬೇಕು ಎಂಬ ಬೇಡಿಕೆ ಇಟ್ಟು ಗ್ರಾಮಸ್ಥರು ಪ್ರತಿಭಟನಾರ್ಥ ಚುನಾವಣೆಯಿಂದ ದೂರ ಉಳಿದಿದ್ದಾರೆ.

    ಫಲಕೊಡದ ಸಚಿವರ ಸಂಧಾನ

    ಶಿರಸಿ: ನಿವೇಶನ ಜಾಗದ ಡಿಸ್​ಫಾರೆಸ್ಟ್ ಸಮಸ್ಯೆ ಬಗೆಹರಿಯದ ಕಾರಣ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದ ಇಲ್ಲಿನ ನಾರಾಯಣಗುರು ನಗರದ ನಿವಾಸಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮನವೊಲಿಸಲು ಪ್ರಯತ್ನಿಸಿದರೂ ಸಫಲತೆ ಕಾಣಲಿಲ್ಲ.

    ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಸಚಿವರ ಎದುರು ಸಮಸ್ಯೆ ಹೇಳಿಕೊಂಡ ನಾರಾಯಣಗುರು ನಗರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗೌರೀಶ ನಾಯ್ಕ, ‘ಮೈಸೂರು ಸರ್ಕಾರ ಇದ್ದ ಕಾಲದಲ್ಲೇ ನಾರಾಯಣಗುರು ನಗರ ನಿವಾಸಿಗಳಿಗೆ ಭೂಮಿ ಹಕ್ಕು ಮಂಜೂರು ಮಾಡಲಾಗಿತ್ತು. ಆದರೆ, ಡಿಸ್ ಫಾರೆಸ್ಟ್ ಮಾಡದ ಕಾರಣ ಭೂಮಿ ಹಕ್ಕಿನಿಂದ ಜನರು ವಂಚಿತರಾಗಿದ್ದಾರೆ. ಈ ಸಮಸ್ಯೆ ಬಗೆಹರಿಸುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೆ ಯಾರೊಬ್ಬರೂ ಸ್ಪಂದಿಸಿಲ್ಲ. ಸಮಸ್ಯೆ ಬಗೆಹರಿಸದಿದ್ದರೆ ಇಲ್ಲಿರುವ 497 ಮನೆಗಳ ಮತದಾರರು ಚುನಾವಣೆಗಳಲ್ಲಿ ಮತದಾನ ಮಾಡದಿರಲು ನಿರ್ಣಯಿಸಿದ್ದೇವೆ’ ಎಂದರು.

    ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಹೆಬ್ಬಾರ ಅವರು, ಪ್ರಸ್ತುತ ಗ್ರಾಮ ಪಂಚಾಯಿತಿ ಚುನಾವಣೆ ನೀತಿ ಸಂಹಿತೆ ಜಾರಿ ಇರುವುದರಿಂದ ನಿವಾರಣೋಪಾಯ ಕಷ್ಟಸಾಧ್ಯ. ಹಾಗಾಗಿ ಚುನಾವಣೆ ಮುಗಿದ ಮೇಲೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಆದರೆ, ಪಟ್ಟುಬಿಡದ ನಿವಾಸಿಗಳು ಸಮಸ್ಯೆ ಬಗೆಹರಿಯುವವರೆಗೆ ಚುನಾವಣೆ ಬಹಿಷ್ಕರಿಸುವುದಾಗಿ ತಿಳಿಸಿದರು. ಉಮೇಶ ಬಂಕಾಪುರ, ಜೀವನ ಪೈ ಇತರರು ಇದ್ದರು.

    ಕೇಂದ್ರ, ರಾಜ್ಯ ಸರ್ಕಾರದಿಂದ ವೃಥಾ ಕಾಲಹರಣ

    ಸಿದ್ದಾಪುರ: ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತ ಅನ್ನದಾತರನ್ನು ಬೀದಿಗೆ ತಳ್ಳಲು ಮುಂದಾಗಿದೆ ಎಂದು ಮಾಜಿ ಸಚಿವ ಎ.ಎಂ.ಹಿಂಡಸಗೇರಿ ದೂರಿದರು.

    ಗ್ರಾಪಂ ಚುನಾವಣೆ ನಿಮಿತ್ತ ಪಟ್ಟಣದ ರಾಘವೇಂದ್ರಮಠದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಕೆಂದ್ರ ಹಾಗೂ ರಾಜ್ಯ ಸರ್ಕಾರ ವೃಥಾ ಕಾಲ ಕಳೆಯುತ್ತಿವೆ. ಕೇಂದ್ರ ಸರ್ಕಾರ ಏಳು ವರ್ಷದಲ್ಲಿ ದೇಶವನ್ನು ಸಂಕಷ್ಟಕ್ಕೆ ದೂಡಿದೆ’ ಎಂದರು.

    ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ‘ಗ್ರಾಪಂನ ಎಲ್ಲ ವಾರ್ಡ್​ಗಳಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಅಭ್ಯರ್ಥಿ ಆಯ್ಕೆಯ ಜವಾಬ್ದಾರಿಯನ್ನು ಸ್ಥಳೀಯ ಪ್ರಮುಖರಿಗೆ ಹಾಗೂ ಕಾರ್ಯಕರ್ತರಿಗೆ ನೀಡಿದ್ದರಿಂದ ಯಾವುದೇ ಗೊಂದಲ ಉಂಟಾಗಿಲ್ಲ’ ಎಂದರು.

    ಬಿಜೆಪಿ ಹಾಗೂ ಜೆಡಿಎಸ್​ನ ಕೆಲ ಕಾರ್ಯಕರ್ತರು ಕಾಂಗ್ರೆಸ್​ಗೆ ಸೇರ್ಪಡೆಗೊಂಡರು. ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ನಾಯ್ಕ, ಆರ್.ಎಂ. ಹೆಗಡೆ ಬಾಳೇಸರ, ಸಿ.ಆರ್. ನಾಯ್ಕ, ವಿ.ಎನ್. ನಾಯ್ಕ, ಸುಷ್ಮಾ ರಾಜಗೋಪಾಲ ರೆಡ್ಡಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಮಹಿಳಾಧ್ಯಕ್ಷೆ ಸೀಮಾ ಹೆಗಡೆ, ಸತೀಶ ನಾಯ್ಕ, ಗಾಯತ್ರಿ ನೇತ್ರೇಕರ್, ಜಿಪಂ ಸದಸ್ಯೆ ಸುಮಂಗಲಾ ವಸಂತ ನಾಯ್ಕ, ರಿಯಾಜ್ ಸಾಬ್ ಇತರರಿದ್ದರು. ಮಧುಕೇಶ್ವರ ಭಟ್ಟ ಗೊದ್ಲಬೀಳ, ರವೂಪ್ ಸಾಬ್ ಹೇರೂರು ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts