More

    ಕಚೇರಿ ನಿರ್ವಿುಸಲು ಗಡುವು

    ರೋಣ: ಗ್ರಾಮದ ಹತ್ತಿರವಿರುವ ಸರ್ಕಾರಿ ಜಾಗದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ನಿರ್ವಿುಸಲು ಡಿ.10 ರೊಳಗೆ ಲಿಖಿತ ದಾಖಲೆ ನೀಡಬೇಕು. ಇಲ್ಲದಿದ್ದರೆ, ಡಿ.11 ರಿಂದ ಜಿಗಳೂರ ಗ್ರಾಮದ ಜನ-ಜಾನುವಾರುಗಳೊಂದಿಗೆ ತಹಸೀಲ್ದಾರ್ ಕಾರ್ಯಾಲಯದ ಮುಂದೆ ಧರಣಿ ನಡೆಸುತ್ತೇವೆ ಎಂದು ತಾಲೂಕಿನ ಜಿಗಳೂರ ಗ್ರಾಮಸ್ಥರು ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಅವರಿಗೆ ಎಚ್ಚರಿಕೆ ನೀಡಿದ ಘಟನೆ ಸೋಮವಾರ ಸಂಜೆ ನಡೆಯಿತು.

    ಡಿ.2 ರಂದು ‘ಚುನಾವಣೆಯ ಬಹಿಷ್ಕಾರದ ಎಚ್ಚರಿಕೆ’ ಎಂಬ ಶೀರ್ಷಿಕೆಯಡಿ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಈ ವರದಿ ಹಿನ್ನೆಲೆಯಲ್ಲಿ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ ಜಿಗಳೂರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.

    ಗ್ರಾಮದ ಮುಖಂಡ ಬಾಬುಗೌಡ ಪಾಟೀಲ ಮಾತನಾಡಿ, ‘ಇಟಗಿ ಗ್ರಾಮ ಪಂಚಾಯಿತಿಯನ್ನು ಒಡೆದು 2015 ರಲ್ಲಿ ಹೊಸದಾಗಿ ಹೊಸಳ್ಳಿ ಗ್ರಾಮ ಪಂಚಾಯಿತಿ ಸೃಷ್ಟಿಸಲಾಗಿತ್ತು, ಅದರ ವ್ಯಾಪ್ತಿಗೆ ಹೊಸಳ್ಳಿ, ಜಿಗಳೂರ, ಕಳಕಾಪೂರ ಗ್ರಾಮಗಳನ್ನು ಸೇರಿಸಲಾಯಿತು. ಈ ಸಂದರ್ಭದಲ್ಲಿ ಜಿಗಳೂರ ಗ್ರಾಮಕ್ಕೆ ಗ್ರಾಪಂ ಸ್ಥಾನಮಾನ ನೀಡಿ ಗ್ರಾಮದಲ್ಲಿ ಪಂಚಾಯಿತಿ ಸ್ಥಾಪಿಸಲು ತಿರ್ವನ ಕೈಗೊಳ್ಳಲಾಗಿತ್ತು. ಆದರೆ, ಅಂದಿನ ಜಿಲ್ಲಾಧಿಕಾರಿ ಪ್ರಸನ್ನಕುಮಾರ ಮಾಡಿದ ತಪ್ಪಿನಿಂದ ಕಡಿಮೆ ಜನಸಂಖ್ಯೆ ಹೊಂದಿರುವ ಹೊಸಳ್ಳಿ ಗ್ರಾಮಕ್ಕೆ ಪಂಚಾಯತಿ ಸ್ಥಾನಮಾನ ನೀಡಲಾಯಿತು’ ಎಂದರು.

    ಇದನ್ನು ವಿರೋಧಿಸಿ ಕಳೆದ ಬಾರಿಯ ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಿ ಕಳೆದ ಐದು ವರ್ಷಗಳ ಕಾಲ ನೀರು, ವಿದ್ಯುತ್ ಹೊರತುಪಡಿಸಿ ಯಾವುದೇ ಸೌಲಭ್ಯ ಪಡೆಯದೆ ಹೋರಾಟ ಮಾಡಿದ್ದೇವೆ. ಎರಡು ವರ್ಷಗಳ ಕಾಲ ನೀರು ಮತ್ತು ವಿದ್ಯುತ್ ನಿರ್ವಹಣೆಗೆ ಗ್ರಾಮದ ವಂತಿಗೆಯಿಂದ ಹಣ ಕಟ್ಟಿದ್ದೇವೆ. ಆದರೂ ನಮ್ಮ ಗ್ರಾಮಕ್ಕೆ ಯಾವೊಬ್ಬ ಅಧಿಕಾರಿಯೂ ಸೌಜನ್ಯಕ್ಕೂ ಭೇಟಿ ನೀಡಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಆದದ್ದು ಆಗಿ ಹೋಯಿತು, ಈಗಲಾದರೂ ನಮ್ಮ ಗ್ರಾಮದ ಹತ್ತಿರವಿರುವ ಒಂದು ಎಕರೆ ಸರ್ಕಾರಿ ಜಮೀನಿನಲ್ಲಿ ಹೊಸಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯ ನಿರ್ವಿುಸಿ ಎಂದು ಮನವಿ ಮಾಡಿದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗುತ್ತದೆ. ಅದಕ್ಕೆ ಸಮಯ ಬೇಕು ಎಂದರು. ಈ ಮಾತಿಗೆ ರೊಚ್ಚಿಗೆದ್ದ ಗ್ರಾಮಸ್ಥರು, ‘ಡಿ.10 ರೊಳಗೆ ನಿಮ್ಮ ಮೇಲಧಿಕಾರಿ ಜೊತೆ ಮಾತನಾಡಿ, ನಮ್ಮ ಗ್ರಾಮದಲ್ಲಿ ಪಂಚಾಯಿತಿ ನಿರ್ವಿುಸುವುದಾಗಿ ಬರವಣಿಗೆಯಲ್ಲಿ ನೀಡಿ, ಇಲ್ಲದಿದ್ದರೆ, ನಿಮ್ಮ ಕಚೇರಿಯ ಮುಂದೆ ಧರಣಿ ನಡೆಸುವ ಮೂಲಕ ಗ್ರಾಪಂ ಚುನಾವಣೆ ಬಹಿಷ್ಕರಿಸುತ್ತೇವೆ’ ಎಂದು ಹೇಳಿದರು.

    ನಾವು ಯಾವುದೇ ಕಾರಣಕ್ಕೂ ಹೊಸಳ್ಳಿ ಗ್ರಾಮದ ಹೊಸ್ತಿಲು ತುಳಿಯುವುದಿಲ್ಲ. ಗ್ರಾಮ ಪಂಚಾಯಿತಿಗೆ ಹೊಸಳ್ಳಿ ಹೆಸರೇ ಇರಲಿ, ಆದರೆ, ಗ್ರಾಪಂ ಕಟ್ಟಡ ಮಾತ್ರ ನಮ್ಮ ಗ್ರಾಮದಲ್ಲಿರಬೇಕು.
    ಶೇಖರಗೌಡ ಪಾಟೀಲ, ಜಿಗಳೂರ ಗ್ರಾಮಸ್ಥ

    ಹೊಸಳ್ಳಿ ಗ್ರಾಮ ಪಂಚಾಯಿತಿ ಪ್ರಾರಂಭವಾದ ನಂತರ ಕಳೆದ ಐದು ವರ್ಷಗಳಲ್ಲಿ 20 ಜನ ಪಿಡಿಒಗಳು ಅಲ್ಲಿಂದ ವರ್ಗ ಮಾಡಿಸಿಕೊಂಡು ಹೋಗಿದ್ದಾರೆ. ಅಲ್ಲಿನ ವ್ಯವಸ್ಥೆ ಹೇಗಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಅಂತಹ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಮ್ಮ ಗ್ರಾಮಸ್ಥರು ಚುನಾವಣೆ ಮಾಡುವುದಿಲ್ಲ.
    | ಶರಣಪ್ಪಾ ಸಿಪ್ರಿ, ಜಿಗಳೂರ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts