More

    18 ಪಂಚಾಯಿತಿಗಳಿಗೆ ಚುನಾವಣೆ

    ಮುಂಡರಗಿ: ಗ್ರಾ.ಪಂ. ಚುನಾವಣೆ ದಿನಾಂಕ ನಿಗದಿಯಾಗಿದೆ. ಪಕ್ಷಗಳ ಚಿಹ್ನೆಯಡಿ ಈ ಚುನಾವಣೆ ನಡೆಯದಿದ್ದರೂ ಬಿಜೆಪಿ, ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರ ನಡುವೆ ಹಣಾಹಣಿ ಏರ್ಪಟ್ಟಿದೆ.

    ತಾಲೂಕಿನ ಕದಾಂಪೂರ, ಡೋಣಿ, ಡಂಬಳ, ಪೇಠಾಲೂರ, ಹಳ್ಳಿಕೇರಿ, ಮೇವುಂಡಿ, ಹಿರೇವಡ್ಡಟ್ಟಿ, ಕಲಕೇರಿ, ಬಾಗೇವಾಡಿ, ಬಿದರಳ್ಳಿ, ಕೊರ್ಲಹಳ್ಳಿ, ಹಮ್ಮಿಗಿ, ಶಿಂಗಟಾಲೂರ, ಹೆಸರೂರ, ಹಾರೋಗೇರಿ, ಬೀಡನಾಳ, ಶಿವಾಜಿನಗರ (ಶಿಂಗಟರಾಯನಕೇರಿ), ಜಂತ್ಲಿಶಿರೂರ, ಮುರುಡಿ ಸೇರಿ ಒಟ್ಟು 19 ಗ್ರಾ.ಪಂ.ಗಳಿದ್ದು, ಈ ಪೈಕಿ 18 ಗ್ರಾ.ಪಂ.ಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಮುರುಡಿ ಗ್ರಾ.ಪಂ.ನ ಅಧಿಕಾರ ಅವಧಿ ಇನ್ನೂ ಪೂರ್ಣಗೊಳ್ಳದ ಕಾರಣ ಅಲ್ಲಿ ಸದ್ಯ ಚುನಾವಣೆ ಇಲ್ಲ.

    ಬಾಗೇವಾಡಿ ಗ್ರಾ.ಪಂ. ಅನ್ನು ಒಡೆದು 2015ರಲ್ಲಿ 7 ಗ್ರಾಮಗಳನ್ನು ಒಳಗೊಂಡ ಮುರುಡಿ ಗ್ರಾ.ಪಂ. ಸೃಷ್ಟಿಸಲಾಯಿತು. ಮುರುಡಿ ಗ್ರಾ.ಪಂ.ಗೆ ಮುರುಡಿ ತಾಂಡಾ, ಗುಡ್ಡದಬೂದಿಹಾಳ, ಚಿಕ್ಕವಡ್ಡಟ್ಟಿ ಗ್ರಾಮಗಳನ್ನು ಸೇರಿಸಲಾಯಿತು. ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಹೆಚ್ಚು ಜನಸಂಖ್ಯೆ ಇದ್ದು, ಚಿಕ್ಕವಡ್ಡಟ್ಟಿ ಗ್ರಾಮದಲ್ಲೇ ಗ್ರಾ.ಪಂ. ಸ್ಥಾಪಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದು ಗ್ರಾಮದ 6 ಸ್ಥಾನಗಳಿಗೆ ಚುನಾವಣೆ ಬಹಿಷ್ಕರಿಸಿದರು. ಪುನಃ ಐದು ಬಾರಿ ಚುನಾವಣೆ ನಿಗದಿ ಮಾಡಿದರೂ ಗ್ರಾಮಸ್ಥರು ಪಟ್ಟು ಸಡಿಲಿಸಿರಲಿಲ್ಲ. ಎಪಿಎಂಸಿ, ತಾ.ಪಂ, ಜಿ.ಪಂ. ಚುನಾವಣೆಗಳನ್ನು ಸಹ ಬಹಿಷ್ಕರಿಸಿದ್ದರು. ನಂತರ ಗ್ರಾಮಸ್ಥರು 2018ರಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಮಾಡಿದರು. ತದನಂತರ ಗ್ರಾ.ಪಂ.ನ 6 ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು. ಹೀಗಾಗಿ, ಮುರುಡಿ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಅಧಿಕಾರ ಅವಧಿ 2023ರವರೆಗೂ ಇದೆ.

    ಮತದಾರರ ವಿವರ: ತಾಲೂಕಿನ 18 ಗ್ರಾ.ಪಂ. ವ್ಯಾಪ್ತಿಗೆ ಒಟ್ಟು 55 ಗ್ರಾಮಗಳು, 97ವಾರ್ಡ್​ಗಳು ಬರಲಿವೆ. 97 ವಾರ್ಡ್​ಗಳಿಗೆ ಒಟ್ಟು 12 3ಮತಗಟ್ಟೆ ತೆರೆಯಲಾಗುತ್ತಿದೆ. 41,116 ಪುರುಷ ಮತದಾರರಿದ್ದು, 39,511 ಮಹಿಳಾ ಮತದಾರರಿದ್ದಾರೆ. ಒಟ್ಟು 80,627 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

    ಗ್ರಾ.ಪಂ. ವ್ಯಾಪ್ತಿಯಲ್ಲಿ ಸಭೆ ಮಾಡಿ ಎಲ್ಲರ ಅಭಿಪ್ರಾಯದ ಮೇರೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮ ವಹಿಸಲಾಗುವುದು.
    | ಹೇಮಗಿರೀಶ ಹಾವಿನಾಳ, ಬಿಜೆಪಿ ಮಂಡಳ ಅಧ್ಯಕ್ಷ, ಮುಂಡರಗಿ

    ಪ್ರತಿ ಗ್ರಾಮದಲ್ಲಿ 5ರಿಂದ 10 ಜನರ ಸಮಿತಿ ಹಾಗೂ ಪ್ರತಿ ಬೂತ್ ಮಟ್ಟದಲ್ಲಿ 25 ಜನರ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಆಕಾಂಕ್ಷಿ ಪಟ್ಟಿಯನ್ನು ತಯಾರಿಸಲಿದ್ದು ನಂತರ ಮುಖಂಡರ ಒಮ್ಮತದ ಮೇರೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
    | ರಾಮಚಂದ್ರ ಕಲಾಲ, ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ, ಮುಂಡರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts