More

    ಉತ್ಸಾಹ ತೋರಿದ ಗ್ರಾಮೀಣ ಮತದಾರ, ಶೇ.75.05 ಮತದಾನ

    ಮಂಗಳೂರು: ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಮಂಗಳವಾರ ಶಾಂತಿಯುತವಾಗಿ ಕೊನೆಗೊಂಡಿದ್ದು, ಮಂಗಳೂರು, ಬಂಟ್ವಾಳ, ಮೂಡುಬಿದಿರೆ ಮೂರು ತಾಲೂಕಿನಲ್ಲಿ ಒಟ್ಟು ಶೇ.75.05 ಮತದಾನವಾಗಿದೆ. ಮತದಾರರು ನಿರಾತಂಕವಾಗಿ ಮತದಾನದಲ್ಲಿ ಭಾಗವಹಿಸಿದರು. ಮುಂಜಾನೆ 7ಕ್ಕೆ ಮತದಾನ ಆರಂಭಗೊಂಡಿದ್ದು, ಸಾಯಂಕಾಲ 5ರವರೆಗೂ ಚುರುಕಿನಿಂದ ನಡೆಯಿತು.

    ಮೂರು ತಾಲೂಕಿನ 106 ಗ್ರಾಪಂಗಳ 1631 ಸ್ಥಾನಗಳಿಗೆ 817 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, 3854 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮತದಾನದ ಬಳಿಕ ಮತಪೆಟ್ಟಿಗೆಗಳನ್ನು ಸೀಲ್ ಮಾಡಿ ಮಂಗಳೂರಿನ ಬೋಂದೆಲ್ ಮಹಾತ್ಮ ಗಾಂಧಿ ಸೆಂಟನರಿ ಶಾಲೆ, ಮೂಡುಬಿದಿರೆಯ ಮಹಾವೀರ ಕಾಲೇಜು ಮತ್ತು ಬಂಟ್ವಾಳದ ಮೊಡಂಕಾಪು ಇನ್ಫೆಂಟ್ ಜೀಸಸ್ ವಿದ್ಯಾಸಂಸ್ಥೆಯ ಸ್ಟ್ರಾಂಗ್ ರೂಂನಲ್ಲಿ ಪೊಲೀಸ್ ಭದ್ರತೆಯೊಂದಿಗೆ ಇರಿಸಲಾಗಿದೆ. ಮೂಲ್ಕಿಗೆ ಸಂಬಂಧಿಸಿದ ಏಳು ಗ್ರಾಪಂಗಳ ಮತಪೆಟ್ಟಿಗೆಗಳನ್ನು ಮೂಲ್ಕಿ ಮೆರಿಡಿಯನ್ ಶಾಲೆಯಲ್ಲಿ ಡಿ ಮಸ್ಟರಿಂಗ್ ಮಾಡಿ ಮತಪೆಟ್ಟಿಗೆಗಳನ್ನು ಮಂಗಳೂರಿನ ಬೋಂದೆಲ್ ಶಾಲೆಗೆ ತರಲಾಗಿದೆ. ಡಿ.27ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, 30ರಂದು ಮತ ಎಣಿಕೆ ನಡೆಯಲಿದೆ.

    ಬೆಳಗ್ಗಿನ ಅವಧಿಯಲ್ಲಿ ಹೆಚ್ಚು ಮತದಾನ: ಮೊದಲ ಹಂತದಲ್ಲಿ ಮತದಾರರು ಉತ್ಸಾಹದಿಂದ ಭಾಗವಹಿಸಿದರು. ಮತದಾನ ಆರಂಭಕ್ಕೂ ಮುನ್ನವೇ ಕೆಲವು ಮತಗಟ್ಟೆಗಳಲ್ಲಿ ಉದ್ದದ ಸಾಲು ಕಂಡು ಬಂತು. ಬೆಳಗ್ಗೆ 7ರಿಂದ 9ರ ಅವಧಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನ ನಡೆದಿದೆ. ಕಚೇರಿ ಕೆಲಸಗಳಿಗೆ ತೆರಳುವವರು ಬೆಳಗ್ಗೆ ಬೇಗ ಬಂದು ಮತ ಚಲಾಯಿಸಿ ತೆರಳಿದ್ದರು. ಬೆಳಗ್ಗಿನ ಅವಧಿಯಲ್ಲಿ ಹೆಚ್ಚಿದ್ದ ದಟ್ಟಣೆ ಮಧ್ಯಾಹ್ನವಾಗುತ್ತಲೇ ಕಡಿಮೆಯಾಗಿದೆ. ನಾಲ್ಕು ಗಂಟೆ ಬಳಿಕ ಮತದಾನ ಮಾಡುವವರ ಸಂಖ್ಯೆ ಹೆಚ್ಚಾಯಿತು. ಕಾಸರಗೋಡು ಜಿಲ್ಲೆ ಗಡಿಭಾಗ ಹೊಂದಿರುವ ತಲಪಾಡಿಯ ದ.ಕ ಜಿಲ್ಲಾ ಪಂಚಾಯಿತಿ ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆಗಳಲ್ಲಿ ಮೊದಲ ಎರಡು ಗಂಟೆಯ ಅವಧಿಯಲ್ಲಿ ಶೇ.21 ಮತದಾನ ದಾಖಲಾಗಿದೆ. ಉಳಿದಂತೆ ಕುರ್ನಾಡು ಸರ್ಕಾರಿ ಪಪೂ ಕಾಲೇಜು, ಬಾಳೆಪುಣಿ ಹೂಹಾಕುವ ಕಲ್ಲು ಸರ್ಕಾರಿ ಉನ್ನತೀಕರಿಸಿದ ಹಿ.ಪ್ರಾ ಶಾಲೆ ಸಜಿಪನಡು, ಸಜಿಪಮೂಡ, ಅರಳ, ಎರ್ಮಾಳುಪದವು ಶಾಲಾ ಮತಗಟ್ಟೆಗಳಲ್ಲೂ ಮತದಾನ ಪ್ರಕ್ರಿಯೆ ಉತ್ತಮವಾಗಿಯೇ ನಡೆಯಿತು. ಎಲ್ಲ ಕಡೆಗಳಲ್ಲಿ ಜನರು ಕರೊನಾ ಭೀತಿ ಇಲ್ಲದೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

    ಅಂತರ ಲೆಕ್ಕಕ್ಕಿಲ್ಲ: ಮತದಾನ ಮಾಡುವವರು ಅಂತರ ಕಾಪಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಚುನಾವಣಾ ಇಲಾಖೆ ನಿರ್ದೇಶನ ನೀಡಿದ್ದರೂ, ಯಾವ ಮತಗಟ್ಟೆಯಲ್ಲೂ ಇದು ಕಂಡುಬರಲಿಲ್ಲ. ಮಾಸ್ಕ್ ಧರಿಸಿದ್ದರೂ, ದೈಹಿಕ ಅಂತರ ಪಾಲಿಸಿಲ್ಲ. ಅಂತರ ಪಾಲನೆಗಾಗಿ ನೆಲದ ಮೇಲೆ ಗುರುತುಗಳೂ ಇರಲಿಲ್ಲ. ಎಲ್ಲರೂ ಒತ್ತೊತ್ತಾಗಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ಕೆಲವು ಮತಗಟ್ಟೆಗಳಲ್ಲಿ ಆಶಾ ಕಾರ್ಯಕರ್ತರು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನರ್ಸ್‌ಗಳು ಕೈಗೆ ಸ್ಯಾನಿಟೈಸರ್ ಹಾಕಿ, ಥರ್ಮಲ್ ಸ್ಕ್ರೀನಿಂಗ್ ಮಾಡಿ ಮತಗಟ್ಟೆಯೊಳಗೆ ಬಿಡುತ್ತಿದ್ದರು. ಉಳಿದಂತೆ ಕೆಲವು ಮತಗಟ್ಟೆಗಳಲ್ಲಿ ಸ್ಯಾನಿಟೈಸ್ ಸ್ಟಾೃಂಡ್‌ಗಳನ್ನು ಇರಿಸಿದ್ದರೂ ಮತದಾರರು ಉಪಯೋಗಿಸುವುದು ಕಂಡು ಬಂದಿಲ್ಲ.

    ಊಟೋಪಚಾರದಲ್ಲಿ ನಿರ್ಲಕ್ಷೃ: ಕೆಲವು ಮತಗಟ್ಟೆಗಳ ಚುನಾವಣಾ ಸಿಬ್ಬಂದಿ ಮತ್ತು ಪೊಲೀಸರಿಗೆ ಸೋಮವಾರ ರಾತ್ರಿಯ ಊಟ ನೀಡುವಲ್ಲಿ ನಿರ್ಲಕ್ಷೃವಾಗಿದೆ. ಈ ಕುರಿತು ಕೆಲವು ಸಿಬ್ಬಂದಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ಆಯಾ ಗ್ರಾಪಂ ಪಿಡಿಒಗಳು ವಾಸ್ತವ್ಯ, ಊಟ-ಉಪಾಹಾರದ ವ್ಯವಸ್ಥೆ ಮಾಡಬೇಕಾಗಿದ್ದರೂ ನಿರ್ಲಕ್ಷೃ ಮಾಡಲಾಗಿದೆ. ಸಿಬ್ಬಂದಿಯೇ ಊಟ ತರಿಸಿಕೊಂಡಿದ್ದಾರೆ. ಬೆಳಗ್ಗಿನ ತಿಂಡಿಯನ್ನೂ ಸರಿಯಾಗಿ ನೀಡಿಲ್ಲ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.

    ಮದ್ಯದಂಗಡಿ ಓಪನ್: ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲೂ ಮದ್ಯದಂಗಡಿಗಳನ್ನು ಬಂದ್ ಮಾಡಲು ಜಿಲ್ಲಾಡಳಿತ-ಪೊಲೀಸ್ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ನಗರ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳು ತೆರೆದಿರುವುದು ಕಂಡು ಬಂದಿದೆ.

    ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸಹಾಯಕ ಆಯುಕ್ತ ಮದನ್ ಮೋಹನ್ ಜತೆ ಹಳೆಯಂಗಡಿ ಮತ್ತು ಪಡುಪಣಂಬೂರು ಗ್ರಾಮ ಪಂಚಾಯಿತಿ ಮತಗಟ್ಟೆಗಳಿಗೆ ಭೇಟಿ ನೀಡಿ ಕೋವಿಡ್ ಮುಂಜಾಗ್ರತೆ ಕ್ರಮಗಳ ಪರಿಶೀಲನೆ ನಡೆಸಿದರು. ಎಲ್ಲ ಮತಗಟ್ಟೆಗಳಲ್ಲಿ ದೈಹಿಕ ಅಂತರ ಮತ್ತು ಸ್ಯಾನಿಟೈಸರ್ ಮಾಸ್ಕ್ ಬಳಕೆ ಜಾಗೃತಿಗಾಗಿ ಆರೋಗ್ಯ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರನ್ನು ನಿಯೋಜಿಸಲಾಗಿತ್ತು.

    ಉಳ್ಳಾಲದಲ್ಲಿ ಬೆಳಗ್ಗಿನ ಉತ್ಸಾಹ ಮಧ್ಯಾಹ್ನ ಮಾಯ: ಮಂಗಳೂರು ಕ್ಷೇತ್ರ ವ್ಯಾಪ್ತಿಯ 19 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆ ವೇಳೆ ಬಹುತೇಕ ಮತಗಟ್ಟೆಗಳಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆಯಿತು. ಹಿಂದೆಂದಿಗಿಂತಲೂ ಈ ಬಾರಿ ಮತದಾರರ ಉತ್ಸಾಹ ಇಮ್ಮಡಿಯಾಗಿತ್ತು.
    ಹಿಂದೆಲ್ಲ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನೀರಸ ಪ್ರತಿಕ್ರಿಯೆ ಕಂಡು ಬರುತ್ತಿತ್ತು. ಈ ಬಾರಿ ಮತಗಟ್ಟೆಗಳಲ್ಲಿ ಬೆಳಗ್ಗೆಯೇ ಸರತಿ ಸಾಲು ಕಂಡು ಬಂತು. ಮಧ್ಯಾಹ್ನವಾಗುತ್ತಲೇ ಬಿಸಿಲ ಬೇಗೆಯಿಂದ ಮತದಾರರ ಸಂಖ್ಯೆ ಕ್ಷೀಣವಾಗಿ ಮತಗಟ್ಟೆಗಳು ಖಾಲಿಯಾದವು, ಮಧ್ಯಾಹ್ನ ಬಳಿಕ ಮತ್ತೆ ಜನ ಮತದಾನಕ್ಕೆ ಧಾವಿಸಿದರು.

    ವಿದ್ಯುತ್ ಇಲ್ಲದೆ ಪರದಾಟ: ಮುನ್ನೂರು ಗ್ರಾಮದ ಮತಗಟ್ಟೆ ಕುತ್ತಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಬೆಳಗ್ಗೆಯೇ ವಿದ್ಯುತ್ ಕೈಕೊಟ್ಟಿತ್ತು. ಇದರಿಂದ ಬೂತ್ ಅಧಿಕಾರಿಗಳು ಮೊಬೈಲ್ ಟಾರ್ಚ್ ಮತ್ತು ಕ್ಯಾಂಡಲ್ ಹಿಡಿದುಕೊಂಡು ಮತದಾರರ ಪಟ್ಟಿ ನೋಡಬೇಕಾದ ದುಸ್ಥಿತಿ ಎದುರಾಯಿತು. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್‌ಹೌಸ್ ಮೆಸ್ಕಾಂ ಇಲಾಖೆಯ ಗಮನಕ್ಕೆ ತಂದಿದ್ದು, ತಕ್ಷಣ ಸ್ಪಂದಿಸಿದ ಇಲಾಖೆ ಕೂಡಲೇ ಶಾಲೆಗೆ ವಿದ್ಯುತ್ ಸಂಪರ್ಕ ನೀಡಿದೆ.

    ಮತಪತ್ರದಲ್ಲಿ ಕಾಣದ ಶಾಯಿ: ಬಾಳೆಪುಣಿ ಶಾಲೆಯಲ್ಲಿ ಮತ ಚಲಾಯಿಸಲು ಆಗಮಿಸಿದ ಮಹಿಳೆಯೊಬ್ಬರು ಬ್ಯಾಲೆಟ್ ಪತ್ರಕ್ಕೆ ಸೀಲ್ ಹಾಕಿದರೂ ಶಾಯಿ ಕಾಣದ ಹಿನ್ನೆಲೆಯಲ್ಲಿ ಗಲಿಬಿಲಿಗೊಂಡು ಮತ ಯಾವುದಕ್ಕೆ ಹಾಕಬೇಕು ಎಂದು ಬ್ಯಾಲೆಟ್ ಪತ್ರ ತೋರಿಸಿ ಅಧಿಕಾರಿಗಳಲ್ಲೇ ಪ್ರಶ್ನಿಸಿದರು. ಇದೇ ಸಮಸ್ಯೆ ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್ ಬಾಳೆಪುಣಿ ಅವರಿಗೂ ಎದುರಾಗಿದೆ. ತಕ್ಷಣವೇ ಅವರು ಪೊಲೀಸರು ಮತ್ತು ಅಧಿಕಾರಿಗಳ ಗಮನ ಸೆಳೆದ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸಲಾಯಿತು.

    ಕುತೂಹಲದ ಕೇಂದ್ರ:  ಹರೇಕಳ ಗ್ರಾಮದ ಒಂದನೇ ವಾರ್ಡ್ ಕುತೂಹಲದ ಕೇಂದ್ರವಾಗಿದೆ. ಈ ವಾರ್ಡ್‌ನಲ್ಲಿ ಕಳೆದ ಬಾರಿ ಮಂಗಳೂರು ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಮೋಹನ್‌ದಾಸ್ ಶೆಟ್ಟಿ ಉಳಿದೊಟ್ಟು ಆಯ್ಕೆಯಾಗಿದ್ದರು. ಈ ಬಾರಿ ಅವರು ಸ್ಪರ್ಧಿಸದೆ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸ್ಥಾನ ಉಳಿಸುವ ಪ್ರಯತ್ನದಲ್ಲಿದ್ದಾರೆ. ಇದೇ ವೇಳೆ ಈ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವೂ ಅನಿವಾರ್ಯ ಎನಿಸಿದೆ. ಮೋಹನ್ ದಾಸ್ ಅವರ ಸಹೋದರ ರವೀಂದ್ರ ಶೆಟ್ಟಿ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದ ಅಧ್ಯಕ್ಷರೂ ಆಗಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದಾರೆ. ಇವರ ಮನೆಯವರ ಮತವೂ ಇದೇ ವಾರ್ಡ್‌ನಲ್ಲಿರುವುದು ಇನ್ನೊಂದು ವಿಶೇಷ.

    ಮತ ಚಲಾಯಿಸಿದ ಶಾಸಕ, ಮುಖಂಡರು: ಶಾಸಕ ಯು.ಟಿ.ಖಾದರ್ ಬೋಳಿಯಾರ್ ಗ್ರಾಮದ ಜಾರದಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪತ್ನಿಯೊಂದಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಈ ಸಂದರ್ಭ ಮಾರುದ್ದದ ಸಾಲಿದ್ದರೂ ಸರತಿ ಸಾಲಿನಲ್ಲೇ ಸುಮಾರು 30 ನಿಮಿಷ ನಿಂತರೆ, ಅವರ ಪತ್ನಿ ಅದಕ್ಕಿಂತ ಹೆಚ್ಚು ಹೊತ್ತು ನಿಂತು ಮತ ಚಲಾಯಿಸಿದರು. ಅಲೆಮಾರಿ-ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ ರಾಜಗುಡ್ಡೆ ಶಾಲೆಯಲ್ಲಿ ಮತದಾನ ಮಾಡಿದರು. ಮೈಸೂರ್ ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಪಾನೇಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು

    ಹರೇಕಳದಲ್ಲಿ ಹಲ್ಲೆ, ಲಾಠಿಚಾರ್ಜ್: ಮಂಗಳೂರು ತಾಲೂಕಿನ ಹರೇಕಳ ಗ್ರಾಮದ ನಾಲ್ಕನೇ ವಾರ್ಡ್‌ನಲ್ಲಿ ಮತ ಚಲಾಯಿಸುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಬೆಂಬಲಿತರ ನಡುವೆ ಮಾತಿನ ಚಕಮಕಿ, ಹಲ್ಲೆ ನಡೆದಿದ್ದು, ಪೊಲೀಸರು ಲಘು ಲಾಠಿಚಾರ್ಜ್ ಮಾಡಿದ್ದಾರೆ. ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ಮತಗಟ್ಟೆಗೆ ಎಸ್‌ಡಿಪಿಐ ಬೆಂಬಲಿತರೊಬ್ಬರು ಹಲವರನ್ನು ಕರೆತರುತ್ತಿದ್ದು, ಕಾಂಗ್ರೆಸ್ ಮುಖಂಡ ಝಕರಿಯಾ ಮಲಾರ್ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ಇದನ್ನು ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿ ಬಶೀರ್ ಆಕ್ಷೇಪಿಸಿ ಮೊಬೈಲ್ ಕಸಿದಾಗ ಮಾತಿನ ಚಕಮಕಿ ನಡೆಯಿತು. ಎರಡೂ ಪಕ್ಷದ ಬೆಂಬಲಿತರು ಸ್ಥಳದಲ್ಲಿ ಜಮಾಯಿಸಿದಾಗ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದರು. ಈ ವೇಳೆ ಎಸ್‌ಡಿಪಿಐ ಬೆಂಬಲಿತರಾದ ನೌಮಾನ್, ಉಬೈದ್, ಮುಬಾರಕ್ ಮತ್ತು ಅಯ್ಯೂಬ್ ಎಂಬುವರು ಝಕರಿಯಾ ಮಲಾರ್ ಅವರಿಗೆ ಹಿಂದಿನಿಂದ ಬಂದು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಬೋಳಿಯಾರ್ ಗ್ರಾಮದ ಅಮ್ಮೆಂಬಳದಲ್ಲೂ ಸೋಮವಾರ ರಾತ್ರಿ ಎಸ್‌ಡಿಪಿಐ ಮತ್ತು ಕಾಂಗ್ರೆಸ್ ಬೆಂಬಲಿತರ ನಡುವೆ ಮಾತಿನ ಚಕಮಕಿ ನಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts