More

    ಗ್ರಾಮ ಪಂಚಾಯಿತಿ ದರ್ಬಾರ್ ಆರಂಭ ; ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಾರುಪತ್ಯ

    ರಾಮನಗರ : ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಬಹುತೇಕ ಪೂರ್ಣಗೊಂಡಿದ್ದು, ಕಳೆದ 6-7 ತಿಂಗಳಿಂದ ಪಂಚಾಯಿತಿಗೆ ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ. ಇನ್ನೊಂದು ವಾರದಲ್ಲಿ ಎಲ್ಲ ಗ್ರಾಪಂಗಳಲ್ಲಿ ಜನಪ್ರತಿನಿಧಿಗಳ ದರ್ಬಾರ್ ಆರಂಭವಾಗಲಿದೆ.

    ಗ್ರಾಪಂಗಳಲ್ಲಿ ಈ ಬಾರಿ ಕಾಂಗ್ರೆಸ್ ಪಾರುಪತ್ಯ ಮೆರೆದಿದೆ. ಚನ್ನಪಟ್ಟಣ ಹೊರತುಪಡಿಸಿ ಉಳಿದ ಮೂರು ತಾಲೂಕುಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಪಂಚಾಯಿತಿಗಳಲ್ಲಿ ಬೆಂಬಲಿಗರು ಅಧಿಕಾರ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ ಚನ್ನಪಟ್ಟಣದಲ್ಲಿ ಮಾತ್ರ ನಿರೀಕ್ಷೆಗೂ ಮೀರಿದ ಹಿನ್ನೆಡೆಯನ್ನು ಕಾಂಗ್ರೆಸ್ ಅನುಭವಿಸಿದ್ದು, ಇದು ಮುಂದಿನ ಚುನಾವಣೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವ ಮಾತುಗಳು ಪಕ್ಷದ ವಲಯದಲ್ಲಿಯೇ ಕೇಳಿ ಬಂದಿದೆ. ಜೆಡಿಎಸ್ ಶಾಸಕರಿದ್ದರೂ ಮಾಗಡಿ ಮತ್ತು ರಾಮನಗರ ತಾಲೂಕುಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಪಂಚಾಯಿತಿ ವಶಕ್ಕೆ ಪಡೆದುಕೊಂಡಿದ್ದು, ಇದು ಜೆಡಿಎಸ್ ಪಾಳಯಕ್ಕೆ ನಡುಕ ಹುಟ್ಟುವಂತೆ ಮಾಡಿದೆ.

    ಆತ್ಮಾವಲೋಕನ ಸಮಯ: ಜೆಡಿಎಸ್ ಪಾಲಿಗೆ ಗ್ರಾಪಂ ಚುನಾವಣೆ ಆತ್ಮವಲೋಕನ ಸಮಯವಾಗಿದೆ. ರಾಮನಗರ, ಚನ್ನಪಟ್ಟಣ ಮತ್ತು ಮಾಗಡಿಯಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಇದರ ಜತೆಗೆ ಚನ್ನಪಟ್ಟಣ ಎಚ್.ಡಿ.ಕುಮಾರಸ್ವಾಮಿ ಅವರ ಕ್ಷೇತ್ರವಾಗಿದ್ದರೆ, ರಾಮನಗರ ಅವರ ಕರ್ಮಭೂಮಿ ಚನ್ನಪಟ್ಟಣದಲ್ಲಿ ಹೆಚ್ಚಿನ ಗ್ರಾಪಂಗಳನ್ನು ಜೆಡಿಎಸ್ ಹಿಡಿದಿದೆಯಾದರೂ , ರಾಮನಗರ ಮತ್ತು ಮಾಗಡಿಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸದಿರುವುದು ಸಂಘಟನೆಯ ಹಿಡಿತ ತಪ್ಪುತ್ತಿರುವ ಮುನ್ಸೂಚನೆಯಾಗಿದೆ. ಮುಂದಿನ ತಾಪಂ ಮತ್ತು ಜಿಪಂ ಚುನಾವಣೆಗೆ ಪಕ್ಷವನ್ನು ಸಂಘಟಿಸಲು ಒತ್ತು ನೀಡಬೇಕಿದೆ. ಇಲ್ಲವಾದರೆ ಹೆಚ್ಚಿನ ಗ್ರಾಪಂಗಳು ಕೈ ತಪ್ಪಿದಂತೆ, ತಾಪಂ, ಜಿಪಂನಲ್ಲಿ ಅಧಿಕಾರ ಕೈ ತಪ್ಪಿದರೂ ಅಚ್ಚರಿಪಡಬೇಕಿಲ್ಲ.

    ಬಿಜೆಪಿ ಕಮಾಲ್: ಜಿಲ್ಲೆಯ ಮಟ್ಟಿಗೆ ಬಿಜೆಪಿ ಬೆಳೆಯುತ್ತಿರುವ ಪಕ್ಷ. ಆದರೆ, ಈ ಬಾರಿ ಪಕ್ಷ ಅಭೂತ ಪೂರ್ವ ಸಾಧನೆ ಮಾಡಿದೆ. ಚನ್ನಪಟ್ಟಣದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ನಿರೀಕ್ಷಿತ ಪ್ರಮಾಣದಲ್ಲಿ ಅಧಿಕಾರ ಹಿಡಿಯುವಲ್ಲಿ ವಿಲರಾಗಿರುವುದು ಪಕ್ಷಕ್ಕೆ ಆತಂಕ ತಂದಿದೆಯಾದರೂ ಉಳಿದ ಕಡೆಗಳಲ್ಲಿ ಪಕ್ಷದ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಮಾಗಡಿ, ರಾಮನಗರದಲ್ಲಿ ತಲಾ ಎರಡು ಗ್ರಾಪಂ ಬಿಜೆಪಿ ಪಾಲಾಗಿವೆ. ಕನಕಪುರದಲ್ಲೂ ಎರಡು ಗ್ರಾಪಂಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಸ್ಥಾನ ಪಡೆದುಕೊಂಡರೂ ಅಲ್ಲಿ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ವಿಲವಾಗಿದೆ.

    ಆಭಿವೃದ್ಧಿಗೆ ಆದ್ಯತೆ ನೀಡಲಿ : ರಾಜಕಾರಣದ ಹೊರತಾದ ಮೈತ್ರಿಗಳು ನಡೆದು ಅಧಿಕಾರ ಹಿಡಿದಿರುವ ಈ ಸಂದರ್ಭದಲ್ಲಿ ಕಳೆದ ಹಲವು ತಿಂಗಳಿಂದಲೂ ಜಿಡ್ಡುಗಟ್ಟಿರುವ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಹೊಸ ಚುನಾಯಿತಿ ಪ್ರತಿನಿಧಿಗಳು ನೂತನ ಅಭಿವೃದ್ಧಿ ಆಯಾಮ ನೀಡಬೇಕಿದೆ. ಈ ಮೂಲಕ ಗ್ರಾಮೀಣ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುವ ಮೂಲಕ ಹೊಸ ಭರವಸೆಯನ್ನು ಚುನಾಯಿತ ಆಡಳಿತ ಮೂಡಿಸಬೇಕಿದೆ.

    ಮೈತ್ರಿ ಎಂಬ ಮಾಯಾಜಾಲ : ಗ್ರಾಪಂ ಚುನಾವಣೆ ಪಕ್ಷದ ಹಿಡಿತದಿಂದ ಮುಕ್ತವಾಗಿರಬೇಕು ಎನ್ನುವ ನಿಯಮವಿದ್ದರೂ, ಪಕ್ಷಗಳ ನೆರಳಿನಲ್ಲಿಯೇ ಚುನಾವಣೆ ನಡೆಯುತ್ತದೆ. ಆದರೆ, ಯಾವ ಪಕ್ಷಗಳು ಪರಸ್ಪರ ವಿರೋಧ ಮಾಡಿಕೊಂಡು ಚುನಾವಣೆ ಎದುರಿಸಿದವೋ ಅದೇ ಪಕ್ಷಗಳು ಸ್ಥಳೀಯ ರಾಜಕಾರಣಕ್ಕೆ ತಕ್ಕಂತೆ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಜಕಾರಣದಲ್ಲಿ ಸಮಯಕ್ಕೆ ತಕ್ಕಂತೆ ಎಲ್ಲವೂ ಸರಿ ಇರುತ್ತದೆ ಎನ್ನುವ ಸಂದೇಶ ಸಾರಿವೆ. ಕೆಲವು ಕಡೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಬೆಂಬಲಿತರು ಮೈತ್ರಿ ಮಾಡಿಕೊಂಡಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ, ಬಿಜೆಪಿ – ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts