More

    ನಿಮ್ಮ ನಾಯಕರೇ ನಮ್ಮ ನಾಯಕರು ; ಗೆಲುವಿಗಾಗಿ ಅಭ್ಯರ್ಥಿಗಳ ಪ್ರಹಸನ

    ಚಿಕ್ಕಬಳ್ಳಾಪುರ : ಗ್ರಾಮಪಂಚಾಯಿತಿ ಚುನಾವಣೆಗೆ ಪಕ್ಷದ ಚಿಹ್ನೆ ಇಲ್ಲದಿರುವುದನ್ನೇ ಲಾಭವನ್ನಾಗಿಸಿಕೊಳ್ಳುತ್ತಿರುವ ಬಹುತೇಕ ಅಭ್ಯರ್ಥಿಗಳು, ಮತಯಾಚನೆ ಸಂದರ್ಭದಲ್ಲಿ ಮನೋಜ್ಞ ನಟನೆ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ. ಯಾರ ಒಲವು ಯಾವ ನಾಯಕರ ಕಡೆಗಿದೆ ಎಂಬುದನ್ನು ತಿಳಿದುಕೊಂಡು ಅದೇ ನಾಯಕರ ಹೆಸರು ಹೇಳಿಕೊಂಡು ಹೋಗತೊಡಗಿದ್ದಾರೆ. ನಿಮ್ಮ ನಾಯಕರೇ ನಮ್ಮ ನಾಯಕರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.

    ಜನರ ಒಲವು ಯಾವ ಪಕ್ಷ, ನಾಯಕರ ಮೇಲಿದೆ ಎಂಬುದನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ದಾಳ ಉರುಳಿಸುತ್ತಿದ್ದಾರೆ. ಅವರ ಹತ್ತಿರ ಅವರಂತೆ, ಇವರ ಹತ್ತಿರ ಇವರಂತೆ ವೇಷ ಬದಲಿಸುತ್ತ, ಸ್ವಪಕ್ಷ ಮತ್ತು ಪ್ರತಿಪಕ್ಷ ಎನ್ನದೆ ಎಲ್ಲ ರಾಜಕೀಯ ಪಕ್ಷ ಮತ್ತು ಶಾಸಕರು, ನಾಯಕರ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ರಹಸ್ಯವಾಗಿ ಆಂತರಿಕ ಮತ್ತು ಬಾಹ್ಯ ಒಪ್ಪಂದವಾಗಿದೆ ಎನ್ನುತ್ತ ಮರುಳು ಮಾಡುತ್ತಿದ್ದು ಪಕ್ಷ ಮತ್ತು ಗುಂಪಿನಲ್ಲಿ ಗುರುತಿಸಿಕೊಂಡು ಗೊಂದಲ ಸೃಷ್ಟಿಸಿ ಲಾಭ ಪಡೆಯಲು ಯತ್ನಿಸುತ್ತಿರುವುದು ಲೋಕಲ್ ೈಟ್ ಅಖಾಡದ ರಂಗನ್ನು ಹೆಚ್ಚಿಸಿದೆ.

    ಜಿಲ್ಲೆಯ 152 ಗ್ರಾಪಂಗಳ 2443 ಸ್ಥಾನಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, 9 ಸಾವಿರಕ್ಕೂ ಹೆಚ್ಚು ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಪಕ್ಷದ ಬೆಂಬಲಿಗರು ಮತ್ತು ಬಂಡಾಯ ಮತ್ತು ವೈಯಕ್ತಿಕ ಬಲದೊಂದಿಗೆ ಹಲವು ಮಂದಿ ಕಣಕ್ಕಿಳಿದಿದ್ದಾರೆ. ಗೆಲ್ಲಲೇಬೇಕೆಂದು ಹಣ, ಜಾತಿ, ಸ್ವಸಾಧನೆಯ ಪ್ರಚಾರದ ಜತೆಗೆ ಪ್ರತಿಸ್ಪರ್ಧಿಯ ವಿಚಾರವಾಗಿ ಗೊಂದಲ ಮೂಡಿಸುವ ಮೂಲಕ ಗೆಲುವಿಗೆ ಮಸಲತ್ತು ನಡೆಸಿದ್ದಾರೆ.

    ಹೊಸ, ಹಳೇ ಪಕ್ಷ ಗೊಂದಲ : ಪಂಚಾಯಿತಿ ೈಟ್‌ನಲ್ಲೂ ಪಕ್ಷಾಂತರ ಪರ್ವ ಜೋರಾಗಿದೆ. ಆದರೂ ಹೊಸ ಮತ್ತು ಹಳೇ ಪಕ್ಷ ಗೊಂದಲ ಮಾತ್ರ ಹೋಗುತ್ತಿಲ್ಲ. ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ ಕೆ.ಸುಧಾಕರ್ ಬೆಂಬಲಿಗರು ಒಂದು ಕಡೆ ಮತಯಾಚಿಸುತ್ತಿದ್ದಾರೆ. ಮತ್ತೊಂದೆಡೆ ಇತರ ಪಕ್ಷದ ಹಲವರು ಗೆದ್ದ ಬಳಿಕ ಬಿಜೆಪಿ ಸೇರುವ, ನಾವೆಲ್ಲರೂ ಒಂದೇ ಎನ್ನುತ್ತಿರುವುದು ಕಮಲ ಪಾಳಯದವರ ಕೆಂಗಣ್ಣಿಗೆ ಕಾರಣವಾಗಿದೆ. ಇನ್ನೂ ಕೆಲವರು ಕಾಂಗ್ರೆಸ್-ಜೆಡಿಎಸ್ ಒಂದೇ ಎಂದು ಎರಡು ಕಡೆಯಿಂದ ಮತ ಬಾಚಿಕೊಳ್ಳಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಜಿಗಿತವೀರರ ಸವಾರಿ ನಡೆಯುತ್ತಲೇ ಇದ್ದು, ಲಾಭಕ್ಕಾಗಿ ಹೊಸ ಮತ್ತು ಹಳೇ ಪಕ್ಷ ಹೆಸರು ಬಳಕೆಯಾಗುತ್ತಿದೆ. ಆದರೆ ಮತದಾರರು ಮಾತ್ರ ಎಲ್ಲವನ್ನೂ ಶಾಂತವಾಗಿ ಗಮನಿಸುತ್ತಿದ್ದು ಅಭ್ಯರ್ಥಿಯ ವ್ಯಕ್ತ್ತಿತ್ವ, ಸಾಚಾತನ ಇತ್ಯಾದಿ ವಿಚಾರವಾಗಿ ತಮ್ಮದೇ ಆದ ಲೆಕ್ಕಾಚಾರದಲ್ಲಿದ್ದಾರೆ.

    ಸ್ಥಳೀಯವಾಗಿ ಘೋಷಣೆಗೆ ಪಟ್ಟು : ಚುನಾವಣಾ ಆಯೋಗ ಗ್ರಾಪಂ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷದ ಚಿಹ್ನೆಯಡಿ ಪ್ರಚಾರ ಕೈಗೊಳ್ಳಬಾರದು ಎಂಬ ಆದೇಶ ನೀಡಿರುವುದು ಅಧಿಕೃತವಾಗಿ ಪಕ್ಷ ಮತ್ತು ನಾಯಕರ ಬೆಂಬಲ ಘೋಷಿಸಿಕೊಳ್ಳಲು ಅಭ್ಯರ್ಥಿಗಳಿಗೆ ತೊಡಕಾಗಿದೆ. ಆದರೆ ಸಭೆಗಳಲ್ಲಿ ನಾಯಕರ ಜತೆಗೆ ತೆಗೆದುಕೊಂಡಿರುವ ಫೋಟೋಗಳನ್ನು ಜನರಿಗೆ ತೋರಿಸುವ ಮೂಲಕ ಆಯೋಗ ನೀಡಿರುವ ಆದೇಶಕ್ಕೆ ಸವಾಲೆಸೆದಿದ್ದಾರೆ.

    ವಿಪಕ್ಷದ ಕೆಲ ಅಭ್ಯರ್ಥಿಗಳು ನಮ್ಮ ಪಕ್ಷ, ನಾಯಕರ ಹೆಸರು ಹೇಳಿಕೊಂಡು ಮತಯಾಚಿಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಇದರ ಬಗ್ಗೆಯೂ ಜನರಿಗೆ ಸ್ಪಷ್ಟನೆ ನೀಡುತ್ತ ಪ್ರಚಾರ ಕೈಗೊಳ್ಳಲಾಗುತ್ತಿದೆ.
    ಕೆ.ಎಸ್.ಕೃಷ್ಣಾರೆಡ್ಡಿ, ಕೇತೇನಹಳ್ಳಿ ಗ್ರಾಪಂ ಅಭ್ಯರ್ಥಿ

    ಗ್ರಾಪಂ ಚುನಾವಣೆಗೆ ಯಾವುದೇ ರಾಜಕೀಯ ಪಕ್ಷದ ಚಿಹ್ನೆ ಇರುವುದಿಲ್ಲ. ಆದರೆ, ಎಲ್ಲ ಪಕ್ಷ ಮತ್ತು ನಾಯಕರ ಬೆಂಬಲ ಇರುವುದನ್ನು ಹೇಳಿಕೊಳ್ಳುತ್ತಿದ್ದಾರೆ. ಇದರಿಂದ ಅವರು ನಿಜವಾಗಲೂ ಯಾರ ಪರವಾಗಿ ಗುರುತಿಸಿಕೊಂಡಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ.
    ನರಸಿಂಹಮೂರ್ತಿ, ಮತದಾರ, ಗೌರಿಬಿದನೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts