More

  ಬಿಜೆಪಿಯಲ್ಲಿ ನಿಷ್ಠಾವಂತರ ಕಡೆಗಣನೆ: ರಘುಪತಿ ಭಟ್

  ಶಿವಮೊಗ್ಗ: ಬಿಜೆಪಿಯಿಂದ ಸ್ಪರ್ಧಿಸಿರುವ ಡಾ. ಧನಂಜಯ ಸರ್ಜಿ ಸೌಜನ್ಯಕ್ಕಾದರೂ ನನ್ನನ್ನು ಭೇಟಿ ಮಾಡಲಿಲ್ಲ. ಅವರ ಹೊರತಾಗಿ ಪಕ್ಷಕ್ಕೆ ದುಡಿದ ಎಸ್.ದತ್ತಾತ್ರಿ, ಗಿರೀಶ್ ಪಟೇಲ್ ಇಲ್ಲವೇ ಯಾವುದೇ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದರೆ ನಾನು ಅವರ ಪರವಾಗಿ ನಿಲ್ಲುತ್ತಿದ್ದೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ರಘುಪತಿ ಭಟ್ ಹೇಳಿದರು.

  ಬಿಜೆಪಿಯಲ್ಲಿ ಪರಿವಾರದ ಜತೆ ಮಾತನಾಡುವ ಸಂಪ್ರದಾಯ ಮತ್ತು ಸೌಜನ್ಯ ಈಗ ಇಲ್ಲವಾಗಿದೆ. ಮೊದಲು ಪಕ್ಷದ ಮಂಡಲ ಮಟ್ಟದಿಂದ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತಿತ್ತು. ಈಗ ಆ ಪದ್ಧತಿಯೇ ಇಲ್ಲ. ತಮಗೆ ಬೇಕಾದವರಿಗೆ ಟಿಕೆಟ್ ಕೊಡಲಾಗುತ್ತಿದೆ. ಇದು ಬಿಜೆಪಿ ಸಂಸ್ಕೃತಿಯಲ್ಲ. ಇದೇ ವ್ಯವಸ್ಥೆ ಮುಂದುವರಿದರೆ ಮುಂದೊಂದು ದಿನ ಬೆಲೆ ತೆರಬೇಕಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
  ಬಿಜೆಪಿಯಲ್ಲಿ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಏಕೋ ಟಿಕೆಟ್ ತಪ್ಪಿದೆ. ನಾಯಕರ ಸುತ್ತ ಸುತ್ತುವವರಿಗೆ ಆದ್ಯತೆ ನೀಡುತ್ತಿರುವುದರಿಂದ ಬೇಸರವಾಗಿದೆ. ನನಗೆ ಟಿಕೆಟ್ ನೀಡುವುದಾಗಿ ಹೇಳಿದ್ದರು. ಹೋಗಲಿ ನಿಷ್ಠಾವಂತ ಕಾರ್ಯಕರ್ತರಿಗೆ ಸಿಕ್ಕಿದ್ದರೂ ನಾನು ಚುನಾವಣೆಗೆ ಸ್ಪರ್ಧಿಸುತ್ತಿರಲಿಲ್ಲ ಎಂದರು.
  ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ನನಗೆ ಗೊತ್ತು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಕೆಲಸಗಳನ್ನು ನಾನು ಮಾಡಿದ್ದೇನೆ. ಇದು ನನ್ನ ಆಸಕ್ತಿಯ ವಲಯ. ಸಾಧಕ ಶಿಕ್ಷಕ ಪ್ರಶಸ್ತಿ ಆರಂಭಿಸಿದವನು ನಾನು. ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ಎಲ್ಲ ಪ್ರೌಢಶಾಲೆಗಳಲ್ಲಿ ಯಕ್ಷಗಾನ ತರಬೇತಿ ಒದಗಿಸಿದ್ದೇನೆ. ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ನನ್ನ ಮೊದಲ ಆದ್ಯತೆ. ಪದವೀಧರರಿಗೆ ಕೌಶಲ ತರಬೇತಿ, ಉದ್ಯಮ ವಲಯಗಳನ್ನು ಸ್ಥಾಪಿಸುವುದು ಸೇರಿ ಹಲವು ಅಭಿವೃದ್ಧಿಗಳನ್ನು ಸರ್ಕಾರದ ಮಟ್ಟದಲ್ಲಿ ಜಾರಿಗೆ ತರಲು ನಾನು ಪರಿಷತ್‌ನಲ್ಲಿ ಧ್ವನಿ ಎತ್ತುವೆ ಎಂದರು.
  ಬಿಜೆಪಿ ಪ್ರಮುಖರಾದ ದೇವದಾಸ್ ನಾಯಕ್, ಎಂ.ಶಂಕರ್, ಕಾಚಿನಕಟ್ಟೆ ಸತ್ಯನಾರಾಯಣ, ವಕೀಲ ವಾಗೀಶ್, ಅ.ಮ.ಪ್ರಕಾಶ್, ರಾಜಯ್ಯ, ಪ್ರದೀಪ ಚಂದ್ರ, ಮೋಹನ್ ಜಾಧವ್, ಎಚ್.ಶಂಕರ್ ಇತರರಿದ್ದರು.

  See also  ಪಟಾಕಿ ಗೋದಾಮಿಗೆ ಅಧಿಕಾರಿಗಳ ದಿಢೀರ್ ಭೇಟಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts