More

    ಗ್ರಾಪಂ ಮಟ್ಟದಲ್ಲಿ ಸಮಿತಿ ರಚಿಸಿ

    ಮದ್ದೂರು: ಗ್ರಾಮೀಣ ಭಾಗದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಯುವ ಸಂಬಂಧ ಶೀಘ್ರವೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚಿಸಿ ಸಭೆ ನಡಾವಳಿ ತಯಾರಿಸಿ ತಾಲೂಕು ಪಂಚಾಯಿತಿಗೆ ಸಲ್ಲಿಸಬೇಕು ಎಂದು ತಹಸೀಲ್ದಾರ್ ಸೋಮಶೇಖರ್ ಪಂಚಾಯಿತಿ ಮಟ್ಟದ ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು.

    ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಹೆಣ್ಣು ಭ್ರೂಣ ಹತ್ಯೆ ಸಮಿತಿ ಸಭೆ ಹಾಗೂ ಕ್ಷಯರೋಗ ನಿರ್ಮೂಲನಾ ಅಭಿಯಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ತಾಲೂಕಿನಲ್ಲಿ ಈಗಾಗಲೇ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಭ್ರೂಣ ಹತ್ಯೆ ಮತ್ತು ಪತ್ತೆ ಎರಡು ಕೂಡ ಅಪರಾಧವಾಗಿದ್ದು, ಈ ಸಂಬಂಧ ಗ್ರಾಮೀಣ ಭಾಗಗಳಲ್ಲಿ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದರು.

    ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಎಲ್.ಸಂದೀಪ್ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ ಅತಿ ಹೆಚ್ಚಿನ ಪ್ರಕರಣಗಳು ಮಂಡ್ಯ ಜಿಲ್ಲೆಯಲ್ಲಿ ವರದಿಯಾಗಿವೆ. ಶಾಲಾ-ಕಾಲೇಜುಗಳು ಹಾಗೂ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು. ಹೆಣ್ಣು ಭ್ರೂಣ ಹತ್ಯೆ ತಡೆಯುವ ಸಂಬಂಧ ಎಲ್ಲ ಇಲಾಖೆಗಳು ಸಹಕಾರ ನೀಡಬೇಕು. ಪ್ರತಿ 15 ದಿನಗಳಿಗೊಮ್ಮೆ ಗ್ರಾಮ ಪಂಚಾಯಿತಿ ಮಟ್ಟದ ಸಮಿತಿಗಳು ಸಭೆ ಮಾಡಿ ಸಭೆಯಲ್ಲಿ ಚರ್ಚಿತ ವಿಷಯಗಳನ್ನು ತಾಲೂಕು ಪಂಚಾಯಿತಿಗೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
    ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಆಶಾಲತಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ 2025ರ ವೇಳೆಗೆ ಭಾರತವನ್ನು ಕ್ಷಯಮುಕ್ತ ಭಾರತವನ್ನಾಗಿ ರೂಪಿಸಲು ಪಣ ತೊಟ್ಟಿದ್ದಾರೆ. ಅದರಂತೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ಷಯ ರೋಗಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಹಾಗೂ ಮುಂದಿನ ದಿನಗಳಲ್ಲಿ ಕ್ಷಯರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
    ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ್, ತಾಲೂಕು ಆರೋಗ್ಯ ಅಧಿಕಾರಿ ಡಾ.ರವೀಂದ್ರ ಬಿ. ಗೌಡ, ವಿಮೋಚನ ಮಹಿಳಾ ಸಂಸ್ಥೆಯ ಹೂತಕೆರೆ ಜನಾದರ್ನ್, ತಾಲೂಕು ಮಟ್ಟದ ಅಧಿಕಾರಿಗಳಾದ ಪ್ರಕಾಶ್ ಕೋರ್ಜಿ, ಸಿ.ನಾಗಲಕ್ಷ್ಮೀ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts