More

    ಹುದ್ದೆ ಜತೆಗೆ ಸೇವಾ ಗುಣವೂ ಇರಲಿ : ವಿದ್ಯಾರ್ಥಿಗಳಿಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕರೆ

    ಚಿಕ್ಕಬಳ್ಳಾಪುರ: ಉತ್ತಮ ಶಿಕ್ಷಣ ಮತ್ತು ಉನ್ನತ ಹುದ್ದೆ ಗಳಿಕೆಯ ಗುರಿ ಜತೆಗೆ ಸಾಮಾಜಿಕ ಸೇವಾ ಮನೋಭಾವನೆಯ ತುಡಿತವನ್ನೂ ಹೊಂದಿರಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಯುವಜನತೆಗೆ ಕರೆ ನೀಡಿದರು.

    ಇಲ್ಲಿನ ಎಸ್‌ಜೆಸಿ ತಾಂತ್ರಿಕ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜಿಎಸ್ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ವಿದ್ಯಾರ್ಥಿಗಳು ಸೃಜನಾತ್ಮಕ ಚಿಂತನೆ, ಪ್ರಯೋಗಶೀಲತೆ ಜತೆಗೆ ನಿರಂತರ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು, ಕಾಲಕ್ಕೆ ಅನುಗುಣವಾಗಿ ಹೊಸ ಕೌಶಲಗಳನ್ನು ಸಿದ್ಧಿಸಿಕೊಳ್ಳಬೇಕೆಂದರು.

    ಕೇವಲ ಶಿಕ್ಷಣವನ್ನು ಪಡೆದರಷ್ಟೇ ಸಾಲದು, ಸಾಮಾಜಿಕ ಜವಾಬ್ದಾರಿ ಮತ್ತು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು, ಸ್ವಯಂ ಪ್ರಗತಿಯ ಜತೆಗೆ ಇತರರ ಕಷ್ಟ ಕಾರ್ಪಣ್ಯಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ, ಸಮಾಜ ಸೇವೆಯ ಮೂಲಕ ಪರೋಪಕಾರಿ ಸಾರ್ಥಕ ಜೀವನ ನಡೆಸಬೇಕೆಂದು ಶ್ರೀಗಳು ಹೇಳಿದರು.

    ಈ ಹಿಂದೆ ಸಾಕಷ್ಟು ಸವಲತ್ತುಗಳು ಸಕಾಲಕ್ಕೆ ಸಿಗದಿದ್ದರೂ ಅನೇಕ ಮಹನೀಯರು ವಿಶೇಷ ಸಾಧನೆ ಮೂಲಕ ಗಮನ ಸೆಳೆದಿದ್ದಾರೆ. ಈಗ ಪರಿಸ್ಥಿತಿ ಬದಲಾಗಿದೆ. ಪರಸ್ಪರ ಪೈಪೋಟಿಯಲ್ಲಿ ಶಿಕ್ಷಣ ಸಂಸ್ಥೆಗಳು ಒಳ್ಳೆಯ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿಜನ್‌ಗ್ರೂಫ್ ಆಫ್ ಸ್ಟಾರ್ಟಪ್‌ನ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಸಲಹೆಯಿತ್ತರು.

    ವಿದ್ಯಾರ್ಥಿಗಳು ಸಮಾಜಮುಖಿ ಚಿಂತನೆಯೊಂದಿಗೆ ಆತ್ಮಾವಲೋಕನ ಮಾಡಿಕೊಂಡು ಜವಾಬ್ದಾರಿಯನ್ನು ನಿರ್ವಹಿಸಬೇಕು. ಮಕ್ಕಳು ಒಳ್ಳೆಯ ಉದ್ಯೋಗ ಪಡೆದು ಉತ್ತಮ ಜೀವನ ಸಾಗಿಸಬೇಕೆಂಬ ಪಾಲಕರ ಕನಸನ್ನು ನನಸಾಗಿಸಬೇಕು ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಎನ್. ಶಿವರಾಮರೆಡ್ಡಿ ಹೇಳಿದರು.
    ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಎಸ್‌ಜೆಸಿ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಟಿ.ರಾಜು ಮತ್ತಿತರರು ಇದ್ದರು.

    ಇತರರಿಗೂ ಮಾದರಿಯಾಗಲಿ: ಅನೇಕರು ಉನ್ನತ ಶಿಕ್ಷಣ ಮತ್ತು ಉನ್ನತ ಹುದ್ದೆಯನ್ನು ಪಡೆದಿದ್ದರೂ ಆತ್ಮಸಂತೃಪ್ತಿಯನ್ನು ಹೊಂದಿರುವುದಿಲ್ಲ. ಕೇವಲ ವೈಯಕ್ತಿಕ ಬೆಳವಣಿಗೆಯ ಬಗ್ಗೆ ಸದಾ ಯೋಚಿಸುವುದೇ ಇದಕ್ಕೆ ಪ್ರಮುಖ ಕಾರಣ. ನಮ್ಮ ಜೀವನ ಶೈಲಿ ಆತ್ಮತೃಪ್ತಿ ನೀಡುವುದರ ಜತೆಗೆ ಇತರರಿಗೂ ಸಂತಸವನ್ನುಂಟು ಮಾಡುವ ರೀತಿಯಲ್ಲಿರಬೇಕು ಎಂದು ನಿರ್ಮಲಾನಂದನಾಥ ಶ್ರೀಗಳು ಕಿವಿಮಾತು ಹೇಳಿದರು.

    ಶಿಕ್ಷಣದಿಂದ ಸಾಧ್ಯ: ಸಾಮಾಜಿಕ ಪರಿವರ್ತನೆಯೊಂದಿಗೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಶಿಕ್ಷಣದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಶೈಕ್ಷಣಿಕ ಸವಲತ್ತುಗಳನ್ನು ನೀಡುವ ಜತೆಗೆ ಪರಿಣಾಮಕಾರಿಯಾಗಿ ಕಲಿಸುವ ಕೆಲಸವೂ ಆಗಬೇಕಿದೆ ಎಂದು ಟಿಸಿಎಸ್ ಮುಖ್ಯಸ್ಥ ಇ.ಎಸ್.ಚಕ್ರವರ್ತಿ ಅಭಿಪ್ರಾಯಪಟ್ಟರು. ಎಲೆಮರೆ ಕಾಯಂತಿರುವ ಯುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವಲ್ಲಿ ಬಿಜಿಎಸ್ ಸಂಸ್ಥೆ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    542 ಮಂದಿಗೆ ಪದವಿ ಪ್ರದಾನ: ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ಬಿಜಿಎಸ್ ಸೈನ್ಸ್ ಅಕಾಡೆಮಿ, ಬಿಜಿಎಸ್ ಇನ್ಸ್‌ಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಬಿಜಿಎಸ್ ಬಿಪಿಎಡ್ ಕಾಲೇಜು, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬಿಜಿಎಸ್ ಸ್ಕೂಲ್ ಆಫ್ ಬಿಜಿನೆಸ್ ಮ್ಯಾನೇಜ್‌ಮೆಂಟ್, ಮಾಲೂರು ತಾಲೂಕಿನ ಬಿಜಿಎಸ್ ಕಾಲೇಜ್ ಆಫ್ ಕಾಮರ್ಸ್ ಕಾಲೇಜುಗಳ 542 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts