More

    ಜಿಪಂ, ತಾಪಂ ‘ಟಿಕೆಟ್ ಖಾತ್ರಿ’ ಕಸರತ್ತು

    ಬೆಳಗಾವಿ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕ್ಷೇತ್ರಗಳ ಚುನಾವಣೆ ದಿನಾಂಕ, ಮೀಸಲಾತಿ ಘೋಷಣೆ ಮುನ್ನವೇ ‘ಟಿಕೆಟ್ ಖಾತ್ರಿ’ಗಾಗಿ ಆಕಾಂಕ್ಷಿಗಳು ಸಚಿವರು ಹಾಗೂ ಶಾಸಕರ ಬೆನ್ನುಬಿದಿದ್ದಾರೆ.

    90 ಸದಸ್ಯ ಬಲಹೊಂದಿರುವ ಬೆಳಗಾವಿ ಜಿಪಂನಲ್ಲಿ ಕಾಂಗ್ರೆಸ್-29, ಬಿಜೆಪಿ-54, ಜೆಡಿಎಸ್-1, ಇನ್ನಿತರ 6 ಸ್ಥಾನ ಹಾಗೂ ಹತ್ತು ತಾಪಂನ 345 ಸದಸ್ಯರ ಪೈಕಿ ಬಿಜೆಪಿ-165, ಕಾಂಗ್ರೆಸ್-120, ಇತರೆ 60 ಸ್ಥಾನ ಹೊಂದಿದ್ದಾರೆ. 2016 ಫೆಬ್ರವರಿಯಲ್ಲಿ ಜರುಗಿದ ಜಿಪಂ, ತಾಪಂ ಚುನಾವಣೆಯಲ್ಲಿ ಆಯ್ಕೆಗೊಂಡಿರುವ ಸದಸ್ಯರ ಅಧಿಕಾರ ಅವಧಿ 2021ಮೇ ನಲ್ಲಿ ಪೂರ್ಣ ಗೊಳ್ಳಲಿದ್ದು, ಏಪ್ರಿಲ್‌ನಲ್ಲಿ ಚುನಾವಣೆ ಘೋಷಣೆ ಯಾಗುವ ಸಾಧ್ಯತೆಯಿದೆ. ಹೀಗಾಗಿ ಈಗಿಂದಲೇ ಪಕ್ಷದ ಮುಖಂಡರ ಮನ ವೊಲಿಕೆಯ ಕಸರತ್ತು ಆರಂಭಗೊಂಡಿದೆ.

    ಆಕಾಂಕ್ಷಿಗಳ ಪಟ್ಟಿ ಸಂಗ್ರಹ: ಬಿಜೆಪಿ ಮತ್ತು ಕಾಂಗ್ರೆಸ್ ಹೈಕಮಾಂಡ್, ಪಕ್ಷ ಸಂಘಟನೆಗಾಗಿ ದಶಕಗಳಿಂದ ಶ್ರಮಿಸು ತ್ತಿರುವ ಕಾರ್ಯಕರ್ತರಿಗೆ ಜಿಪಂ, ತಾಪಂ ಟಿಕೆಟ್ ನೀಡಲು ಅರ್ಹರನ್ನು ಗುರುತಿಸುತ್ತಿವೆ. ಹಾಲಿ, ಮಾಜಿ ಶಾಸಕರು, ವಾರ್ಡ್, ತಾಲೂಕು, ಜಿಲ್ಲಾ ಮಟ್ಟದ ಮುಖಂಡ ರಿಂದ ಪ್ರತ್ಯೇಕವಾಗಿ ಆಕಾಂಕ್ಷಿಗಳ ಪಟ್ಟಿ ಪಡೆದುಕೊಳ್ಳುತ್ತಿದೆ. ಹಾಲಿ ಜಿಪಂ, ತಾಪಂ ಸದಸ್ಯರಿಗೆ ಎರಡನೇ ಬಾರಿ ಸ್ಪರ್ಧಿಸಲು ಅವಕಾಶ ನೀಡುವ ಕುರಿತು ಮಾಹಿತಿ ಪಡೆಯುತ್ತಿದೆ. ಚುನಾ ವಣಾ ಆಯೋಗ ಜಿಪಂ, ತಾಪಂ ಕ್ಷೇತ್ರಗಳ ಮೀಸಲಾತಿ ಅಂತಿಮಗೊಳಿಸಿದ ಬಳಿಕ ಆಕಾಂಕ್ಷಿಗಳ ಪಟ್ಟಿ ಅಂತಿಮಗೊಳಿಸಲು ಪ್ರಮುಖ ಪಕ್ಷಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ.

    ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ಏರಿಕೆ: ಈಗಾಗಲೆ ರಾಜ್ಯ ಚುನಾವಣಾ ಆಯೋಗವು ಜಿಪಂ ಹಾಗೂ ತಾಪಂ ಸದಸ್ಯ ಸ್ಥಾನದ ಕ್ಷೇತ್ರಗಳ ಪುನರ್ ರಚನೆಗೆ ಮುಂದಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993 ಪ್ರಕರಣ 121 ಮತ್ತು 160ರ ತಿದ್ದುಪಡಿಗಳ ಅನ್ವಯ ಜಿಪಂ ಮತ್ತು ತಾಪಂ ಕ್ಷೇತ್ರ ವ್ಯಾಪ್ತಿಯ ಜನಸಂಖ್ಯೆ, ಗ್ರಾಮಗಳು, ಗ್ರಾಪಂಗಳು ಹಾಗೂ ನಕ್ಷೆ ಸಮೇತ ಫೆ.22ರ ಒಳಗೆ ಮಾಹಿತಿ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ. ಬೆಳಗಾವಿ ಜಿಪಂ ಸದಸ್ಯ ಸ್ಥಾನಗಳ ಸಂಖ್ಯೆಯನ್ನು 90 ರಿಂದ 101ಕ್ಕೆ ಏರಿಸಿದೆ. ತಾಪಂ ಸದಸ್ಯ ಸ್ಥಾನಗಳ ಸಂಖ್ಯೆಯನ್ನು 345 ರಿಂದ 278ಕ್ಕೆ ಇಳಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ರಚನೆಯಾಗುತ್ತಿರುವ ಜಿಲ್ಲಾ ಪಂಚಾಯಿತಿ, ತಾಪಂ ಕ್ಷೇತ್ರಗಳಲ್ಲಿ ಹಾಗೂ ಹಾಲಿ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳು ಓಡಾಡುತ್ತಿದ್ದಾರೆ.

    ಕ್ಷೇತ್ರಗಳ ಮೇಲೆ ಬಲಿಷ್ಠರ ಕಣ್ಣು

    ಜಿಲ್ಲೆಯಲ್ಲಿ ಜಿಪಂ ಕ್ಷೇತ್ರಗಳ ಸಂಖ್ಯೆ 90 ರಿಂದ 101ಕ್ಕೆ ಏರಿಕೆ ಕಂಡಿರುವ ಬೆನ್ನಲ್ಲೇ ಆಕಾಂಕ್ಷಿಗಳ ಸಂಖ್ಯೆ ಏರಿಕೆ ಕಂಡಿದೆ. ಜಿಪಂ ಕ್ಷೇತ್ರಗಳ ಮೇಲೆ ಆರ್ಥಿಕವಾಗಿ ಬಲಿಷ್ಠರು ಮತ್ತು ಶಾಸಕರ ಬೆಂಬಲಿತರು ಕಣ್ಣಿಟ್ಟಿದ್ದಾರೆ. ಈ ನಡುವೆ ಹಾಲಿ ಜಿಪಂ ಸದಸ್ಯರು ಎರಡನೇ ಭಾರಿ ಸ್ಪರ್ಧಿಸಲು ಸಚಿವ, ಶಾಸಕರ ಮನವೊಲಿಸುವ ಕೆಲಸ ಆರಂಭಿಸಿದ್ದಾರೆ. ಒಟ್ಟಿನಲ್ಲಿ ಪಕ್ಷದ ರಾಜ್ಯ ಮಟ್ಟದ ನಾಯಕರು ಕೈಗೊಳ್ಳುವ ನಿರ್ಧಾರದ ಮೇಲೆ ಆಕಾಂಕ್ಷಿಗಳಿಗೆ ಟಿಕೆಟ್ ಖಾತ್ರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಗ್ರಾಮೀಣ ಭಾಗದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ದಶಕಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವವರನ್ನು ಹೈಕಮಾಂಡ್ ಗುರುತಿಸುತ್ತಿದೆ. ಟಿಕೆಟ್ ವಿಚಾರದಲ್ಲಿ ಸಚಿವರು, ಶಾಸಕರು, ಪಕ್ಷದ ಸ್ಥಳೀಯ ಮಟ್ಟದ ಮುಖಂಡರೊಂದಿಗೆ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
    | ಈರಣ್ಣ ಕಡಾಡಿ ರಾಜ್ಯಸಭಾ ಸದಸ್ಯ

    ಮುಂಬರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ, ಜಿಪಂ, ತಾಪಂ ಚುನಾವಣೆ ಪೂರ್ವತಯಾರಿ ಕುರಿತು ಕಾರ್ಯಕರ್ತರ, ಶಾಸಕರ ಜತೆ ಬೆಳಗಾವಿಯಲ್ಲಿ ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಟಿಕೆಟ್ ಪಕ್ಷದ ಕಾರ್ಯಕರ್ತರಿಗಷ್ಟೇ ಮೀಸಲು.
    | ವಿನಯ ನಾವಲಗಟ್ಟಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts