More

    ಗೋವು ಕಟ್ಟೆಗಳಿಗೆ ಪುನಶ್ಚೇತನ ಭಾಗ್ಯ

    ಬೆಳಗಾವಿ : ಗ್ರಾಮೀಣ ಭಾಗದ ಜನರ ಜೀವನಾಡಿಗಳಾಗಿದ್ದ, ನಿರ್ವಹಣೆ ಇಲ್ಲದೆ ಅವಸಾನದ ಅಂಚಿನಲ್ಲಿರುವ ಗೋವು ಕಟ್ಟೆಗಳಿಗೆ ಇದೀಗ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಪುನಶ್ಚೇತನ ಭಾಗ್ಯ ಲಭಿಸಿದೆ.

    ಪುರಾಣ ಕಾಲದಿಂದಲೂ ಹಳ್ಳಿಗಳಿಗೆ ಜನ, ಜಾನುವಾರುಗಳಿಗೆ ಕುಡಿಯುವ ನೀರು, ಕೃಷಿ ಜಮೀನುಗಳಿಗೆ ನೀರಾವರಿ ಚಟುವಟಿಕೆಗಳಿಗೆ ಮೀಸಲಾಗಿಟ್ಟಿದ್ದ ಗೋಕಟ್ಟೆ, ಕಟ್ಟೆಗಳ ನಿರ್ವಹಣೆ ಇಲ್ಲದೆ ನಿರ್ಲಕ್ಷೃಕ್ಕೆ ಒಳಗಾಗಿವೆ. ಅಲ್ಲದೆ ಹೂಳು ಕಳೆಯಿಂದ ಮುಚ್ಚಿ ಹೋಗಿವೆ. ಕೆಲವೆಡೆಯಂತೂ ಗ್ರಾಮದ ಕಸ ತುಂಬುವ ತೊಟ್ಟಿಯಾಗಿ ಮಾರ್ಪಾಡಾಗಿವೆ. ಇದೀಗ ಸರ್ಕಾರವು ’ಉದ್ಯೊಗ ಖಾತ್ರಿ’ ಯೋಜನೆಯಡಿ ಗೋವು ಕಟ್ಟೆಗಳಿಗೆ ಮರುಜೀವ ನೀಡುವ ಕೆಲಸ ಕೈಗೊಂಡಿದೆ. ಅಲ್ಲದೆ, ಗೋವು ಕಟ್ಟೆ ಪತ್ತೆ ಹಚ್ಚಲು ಗ್ರಾಪಂನಲ್ಲಿ ವಿಶೇಷ ತಂಡ ಕಾರ್ಯನಿರ್ವಹಿಸುತ್ತಿದೆ.

    ರಾಜ್ಯದ 30 ಜಿಲ್ಲೆಗಳಲ್ಲಿ ಕಲ್ಯಾಣಿಗಳು-5520, ಕುಂಟೆಗಳು- 34260, ಗೋಕಟ್ಟೆಗಳು- 7840 , ಕಟ್ಟೆಗಳು- 17805 ಸೇರಿ 40 ಸಾವಿರಕ್ಕೂ ಅಧಿಕ ಸಾಂಪ್ರದಾಯಿಕ ಜಲ ಮೂಲಗಳು ನಿರ್ಲಕ್ಷೃಕ್ಕೆ ಒಳಗಾಗಿವೆ. ಪರಿಣಾಮ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿರುವ ಪರಿಣಾಮ ಕೊಳವೆ ಬಾವಿಗಳ ಆಳ 800 ರಿಂದ 1000 ಅಡಿಗೆ ಹೋಗಿದೆ. ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವುದು ಮತ್ತು ಅಂತರ್ಜಲಮಟ್ಟ ವೃದ್ಧಿಸುವ ಉದ್ದೇಶದಿಂದಲೇ ಸರ್ಕಾರವು ನರೇಗಾ ಯೋಜನೆಯಡಿ ಪುನಶ್ಚೇತನ ಕಾಮಗಾರಿ ಕೈಗೊಂಡಿದೆ.

    ನೀರು ಸಂಗ್ರಹಣೆ, ಅಂತರ್ಜಲ ವೃದ್ಧಿಯಲ್ಲೂ ಪ್ರಮುಖ ಪಾತ್ರ ವಹಿಸಬಹುದಾದ ಈ ಜಲಮೂಲಗಳನ್ನು ಉಳಿಸಿ-ಬೆಳಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಪಂಚಾಯಿತಿಯು 2020-21ನೇ ಸಾಲಿನ ಅವಧಿಯಲ್ಲಿ ಬರೋಬ್ಬರಿ 350 ಗೋವು ಕಟ್ಟೆಗಳನ್ನು ಪತ್ತೆ ಹಚ್ಚಿದೆ. ಅಲ್ಲದೆ, 14 ಗೋವು ಕಟ್ಟೆಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿದೆ. ಈ ಮೊದಲು ಸರ್ಕಾರವು ಅಂತರ್ಜಲ ವೃದ್ಧಿ ಮತ್ತು ನೀರಾವರಿ ಸೌಲಭ್ಯ ಹೆಚ್ಚಿಸುವ ಉದ್ದೆಶದಿಂದ ಕೆರೆಗಳನ್ನು ಮಾತ್ರ ಪುನಶ್ಚೇತನ ಮಾಡುವ ಕೆಲಸ ಮಾಡುತ್ತಿತ್ತು. ಇದೀಗ ನರೇಗಾ ಯೋಜನೆಯಡಿ ಗೋವು ಕಟ್ಟೆಗಳನ್ನು ಕೈಗೆತ್ತಿಕೊಂಡಿರುವುದು ವಿಶೇಷ ಎನ್ನಲಾಗಿದೆ.

    ಈಗಾಗಲೇ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು(ಕೆಎಸ್‌ಸಿಎಸ್‌ಟಿ) ನೆಸರ್ಗಿಕ ಸಂಪನ್ಮೂಲಗಳ ದತ್ತಾಂಶ ನಿರ್ವಹಣಾ ವ್ಯವಸ್ಥೆ (ಎನ್‌ಆರ್‌ಡಿಎಂಎಸ್) ಸಹಯೋಗದಲ್ಲಿ ಅಧ್ಯಯನ ಕೈಗೊಂಡು ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಜಲಕಾಯಗಳ ಸ್ಥಳ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅಲ್ಲದೆ 2019-20ನೇ ಸಾಲಿನಲ್ಲಿ ಅಭಿವೃದ್ಧಿ
    ಕಾರ್ಯ ಕೈಗೆತ್ತಿಕೊಳ್ಳಲು ಕ್ರಿಯಾ ಯೋಜನೆ ಸಿದ್ಧಗೊಂಡಿತ್ತು. ಇದೀಗ 2020-21ನೇ ಸಾಲಿನಲ್ಲಿಯೇ ಗೋವು ಕಟ್ಟೆಗಳ ಪುನಶ್ಚೇತನ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.

    18ಸಾವಿರ ಜನರಿಗೆ ಉದ್ಯೋಗ ಖಾತ್ರಿ

    ನರೇಗಾ ಯೋಜನೆ ಅಡಿಯಲ್ಲಿ 128 ಗೋವು ಕಟ್ಟೆ, ಇತರ ಕಟ್ಟೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಅದರಲ್ಲಿ 14 ಪೂರ್ಣಗೊಂಡಿವೆ. ಇದರಿಂದ ಹಳ್ಳಿಗಳಲ್ಲಿನ 18,512 ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡಲಾಗಿದೆ. ಜಿಲ್ಲೆಯಲ್ಲಿ ಗೋವು ಕಟ್ಟೆಗಳಿಗಿಂತ ಕೃಷಿ ಜಮೀನುಗಳಲ್ಲಿ ಕಟ್ಟೆಗಳು ಅಧಿಕ ಪ್ರಮಾಣದಲ್ಲಿವೆ. ಅಲ್ಲದೆ ಹಳ್ಳಗಳ ದಡದಲ್ಲಿ, ಊರುಗಳ ಪಕ್ಕದಲ್ಲಿ ಅಲ್ಲಲ್ಲಿ ಜಾನುವಾರುಗಳಿಗೆ, ಕುರಿಗಳಿಗೆ ಕುಡಿಯುವ ನೀರಿಗಾಗಿ ಸಣ್ಣ ಪ್ರಮಾಣದ ನೀರಿನ ಕೆರೆಗಳಿವೆ. ಅವುಗಳನ್ನು ಗೋವು ಕಟ್ಟೆ ಮಾದರಿಯಲ್ಲಿ ನರೇಗಾದಡಿ ಅಭಿವೃದ್ಧಿ ಪಡಿಸುತ್ತಿರುವುದು ವಿಶೇಷ ಎನ್ನಲಾಗಿದೆ.

    ಈಗಾಗಲೇ ನರೇಗಾ ಯೋಜನೆಯಡಿ ಗೋವು ಕಟ್ಟೆಗಳ ಅಭಿವೃದ್ಧಿ ಕೆಲಸ ಆರಂಭಿಸಲಾಗಿದೆ. 2021 ಮಾರ್ಚ್‌ನಿಂದ ತಾಲೂಕಿಗೆ 2 ರಂತೆ ಗೋವು ಕಟ್ಟೆ ಕೈಗೆತ್ತಿಕೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ತೆರೆದ ಬಾವಿಗಳ ಅಭಿವೃದ್ಧಿಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
    | ಎಚ್.ವಿ.ದರ್ಶನ, ಜಿಪಂ ಸಿಇಒ ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts