More

    ನರೇಗಾ ಜತೆಗೆ ದಾನಿಗಳ ನೆರವು, ಬಟ್ಲಹಳ್ಳಿ ಸರ್ಕಾರಿ ಶಾಲೆಗೆ ಹೊಸರೂಪ

    ಚಿಂತಾಮಣಿ: ತಾಲೂಕಿನ ಬಟ್ಲಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿಯ ಸ್ಪರ್ಶದಿಂದ ಗಮನ ಸೆಳೆಯುತ್ತಿದೆ. ಅಧಿಕಾರಿಗಳ ಇಚ್ಛಾಶಕ್ತಿ ಹಾಗೂ ಸಮನ್ವಯದ ಕೆಲಸ, ದಾನಿಗಳ ನೆರವಿನಿಂದ ಜಿಲ್ಲೆಯಲ್ಲೇ ಮಾದರಿ ಶಾಲೆಯಾಗಿ ರೂಪುಗೊಂಡಿದೆ.

    ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೊಂದು ಶಾಲೆಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಹಿಂದಿನ ಜಿಪಂ ಸಿಇಒ ಬಿ.ಫೌಜೀಯಾ ತರನ್ನುಮ್ ರೂಪಿಸಿದ್ದರು, ಅದರಂತೆ ಜಿಲ್ಲೆಯಲ್ಲಿ 38 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಚಿಂತಾಮಣಿ ತಾಲೂಕಿನಲ್ಲಿ ಹೊಸ ರೂಪ ಪಡೆದ 6 ಶಾಲೆಗಳ ಪೈಕಿ ಬಟ್ಲಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯು ಒಂದಾಗಿದೆ.

    ಉದ್ಯೋಗ ಖಾತರಿ ಯೋಜನೆ ಜತೆಗೆ ದಾನಿಗಳ ನೆರವಿನಿಂದ ಶಾಲೆಗೆ ಹೊಸರೂಪ ನೀಡಲಾಗಿದೆ, ಕೊಠಡಿಗಳಿಗೆ ಸುಣ್ಣ-ಬಣ್ಣ, ಗೋಡೆಗಳಿಗೆ ಚಿತ್ತಾಕರ್ಷಕ ಬರಹ, ಉದ್ಯಾನ ನಿರ್ಮಾಣ, ಪೀಠೋಪಕರಣ, ಪಾಠೋಪಕರಣ, ಬಿಸಿಯೂಟ ಸಲಕರಣೆಗಳು ಸೇರಿ ಮೂಲಸೌಲಭ್ಯಗಳನ್ನು ಒದಗಿಸಿರುವುದು ಶಾಲೆಯ ಅಂದ ಹೆಚ್ಚಿಸಿದ್ದು, ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರು ಕಣ್ಣರಳಿಸಿ ನೋಡುವಂತೆ ಸಿಂಗಾರಗೊಂಡಿದೆ. ಮಕ್ಕಳು, ಪಾಲಕರನ್ನು ಆಕರ್ಷಿಸುತ್ತಿದೆ.

    ನರೇಗಾ ಯೋಜನೆಯಡಿ ಶಾಲಾ ಕಾಂಪೌಂಡ್, ಆಟದ ಮೈದಾನ, ಮಳೆ ಕೊಯ್ಲು, ಕಿಚನ್ ಗಾರ್ಡನ್, ಸಿ.ಸಿ ರಸ್ತೆ, ಪ್ರವೇಶದ್ವಾರ, ಉದ್ಯಾನ ಸೇರಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಶಾಲೆಯಲ್ಲಿ 2018-19ನೇ ಸಾಲಿನಲ್ಲಿ 61 ಮಕ್ಕಳು ಇದ್ದರು. 2019-20ನೇ ಸಾಲಿನಲ್ಲಿ 1ನೇ ತರಗತಿ ಆಂಗ್ಲ ಮಾಧ್ಯಮ ಪ್ರಾರಂಭಿಸಲಾಗಿದೆ. ಇದೀಗ 131 ಮಕ್ಕಳು ದಾಖಲಾಗಿದ್ದಾರೆ.

    ಹಲವರು ಕೈ ಜೋಡಿಸಿದ ಹಿನ್ನೆಲೆಯಲ್ಲಿ ಶಾಲೆಯು ಮಾದರಿಯಾಗಿ ಅಭಿವೃದ್ಧಿ ಹೊಂದಿದೆ. ಆಕರ್ಷಕ ವಾತಾವರಣ ನಿರ್ಮಾಣವಾಗಿರುವುದಕ್ಕೆ ಪ್ರತಿಯೊಬ್ಬರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
    ಸಾದಲಿ ಶ್ರೀನಿವಾಸ್, ಬಡ್ತಿ ಮುಖ್ಯ ಶಿಕ್ಷಕ

    ಕೈ ಜೋಡಿಸಿದ ಅನೇಕರು: ಬಟ್ಲಹಳ್ಳಿ ಬೆಸ್ಕಾಂ ಅಧಿಕಾರಿ ಗೋಪಾಲಕೃಷ್ಣ 12 ಕೊಠಡಿ, ಕಿಟಕಿ, ಬಾಗಿಲುಗಳಿಗೆ ಸುಣ್ಣ-ಬಣ್ಣ ಬಳಿಸಿದ್ದರೆ, ನೆರೆಯ ಆಂಧ್ರಪ್ರದೇಶ ಕಾಕಿನಾಡಿನ ಚಿತ್ರಕಲೆ ರಚನೆಕಾರರು ತಮ್ಮ ಕುಂಚಗಳ ಮೂಲಕ ಮೆರುಗು ನೀಡಿದ್ದಾರೆ. ಶಾಲೆಯ ಹಳೇ ವಿದ್ಯಾರ್ಥಿ ಕಲ್ಯಾಣ್ ರೆಡ್ಡಿ 1.5 ಲಕ್ಷ ವೆಚ್ಚದಲ್ಲಿ ರಂಗಮಂದಿರ ನಿರ್ಮಿಸಿಕೊಟ್ಟರೆ, ರಾರ್ಬರ್ಟ್-ರೋಜ್ 1 ಲಕ್ಷ ವೆಚ್ಚದ ಕ್ರೀಡಾ ಉಪಕರಣಗಳನ್ನು ನೀಡಿದ್ದಾರೆ. ತಾಪಂ ಮಾಜಿ ಅಧ್ಯಕ್ಷ ರಾಗುಟ್ಟಹಳ್ಳಿ ಆರ್.ಎನ್.ರಘುನಾಥರೆಡ್ಡಿ ಧ್ವನಿವರ್ಧಕ ವ್ಯವಸ್ಥೆ, ಕಸಾಪ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಧ್ವಜಸ್ತಂಭ, ಹಳೇ ವಿದ್ಯಾರ್ಥಿಗಳಾದ ರಾಮಲಿಂಗಾರೆಡ್ಡಿ, ಬೈರಾರೆಡ್ಡಿ, ಪದ್ಮಾ ಸೇರಿ ಹಲವು ವಿದ್ಯಾರ್ಥಿಗಳು ಅಭಿವೃದ್ಧಿ ಕೆಲಸಗಳಿಗೆ ಕೈ ಜೋಡಿಸಿದ್ದಾರೆ.

    ಜಿಲ್ಲೆಯಲ್ಲಿ ಮಾದರಿಯಾಗಿ ಅಭಿವೃದ್ಧಿ ಹೊಂದಿದ ಶಾಲೆಗಳ ಪೈಕಿ ಬಟ್ಲಹಳ್ಳಿ ಶಾಲೆಯು ಒಂದು. ಇದು ಯಾವುದೇ ಖಾಸಗಿ ಶಾಲೆಗಿಂತಲೂ ಯಾವುದರಲ್ಲೂ ಕಡಿಮೆಯಿಲ್ಲ.
    ಜಿ.ಆರ್.ಮಂಜುನಾಥ್, ತಾಪಂ ಇಒ, ಚಿಂತಾಮಣಿ

    ಸರ್ಕಾರಿ ಶಾಲೆಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸಬೇಕು. ಇದರಿಂದ ಮಕ್ಕಳ ದಾಖಲಾತಿ ಹೆಚ್ಚಾಗುತ್ತದೆ. ಅದರಲ್ಲೂ ಬಡವರಿಗೆ ಅನುಕೂಲವಾಗುತ್ತದೆ. ಈಗ ನಮ್ಮ ಶಾಲೆಯ ನೋಟ ತುಂಬಾ ಚೆನ್ನಾಗಿದೆ.
    ರಘುನಾಥರೆಡ್ಡಿ ಎಸ್.ರಾಗುಟ್ಟಹಳ್ಳಿ ಹಳೇ ವಿದ್ಯಾರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts