More

    ಅಂಗಾಂಗ ದಾನಿಗಳ ಕುಟುಂಬದ ಬೆನ್ನಿಗೆ ನಿಲ್ಲಲಿದೆ ಸರ್ಕಾರ

    ಬೆಂಗಳೂರು: ಕುಟುಂಬ ಸದಸ್ಯನನ್ನು ಕಳೆದುಕೊಂಡ ದುಃಖದ ನಡುವೆಯೂ ಮತ್ತೊಬ್ಬರ ಜೀವ ಉಳಿಸಲು ಅಂಗಾಂಗ ದಾನ ಮಾಡಿದ ಕುಟುಂಬಗಳ ಬೆನ್ನಿಗೆ ಸರ್ಕಾರ ನಿಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ ನೀಡಿದ್ದಾರೆ.

    ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಮಾಡಿದ ಏಳು ಕುಟುಂಬಗಳನ್ನು ಸನ್ಮಾನಿಸಿ ಪ್ರಶಂಸನಾಪತ್ರ ವಿತರಿಸಿ ಮಾತನಾಡಿದರು.

    ಅಂಗಾಂಗ ದಾನಿಗಳಿಗೆ ಯಾವುದೇ ತೊಂದರೆಗಳಾಗದಂತೆ ಸರ್ಕಾರ ಕೂಡ ನೋಡಿಕೊಳ್ಳಲಿದೆ. ಅಂಗಾಂಗ ದಾನಿಗಳ ಪರ ನಿಲ್ಲಲಿದೆ. ಕುಟುಂಬದವರನ್ನು ಕಳೆದುಕೊಂಡ ದುಃಖದಲ್ಲಿ ಮತ್ತೊಬ್ಬರ ಜೀವ ಉಳಿಸಿ ಸಾರ್ಥಕತೆ ಮೆರೆದ ಕುಟುಂಬಗಳು ಮಾನವೀಯ ಮೌಲ್ಯ ಎತ್ತಿ ಹಿಡಿದಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಒಬ್ಬರ ಜೀವ ಹೋಗಿರುವ ಸಂದರ್ಭದಲ್ಲಿ ಇನ್ನೊಬ್ಬರ ಜೀವ ಉಳಿಸುವ ಬಗ್ಗೆ ದಾನಿಗಳ ಕುಟುಂಬ ಯೋಚಿಸುವುದು ಸಾಮಾನ್ಯವಲ್ಲ. ಇನ್ನಷ್ಟು ಜನರು ಅಂಗಾಂಗ ದಾನಕ್ಕೆ ಮುಂದಾಗಬೇಕು ಎಂದು ಸಿಎಂ ಮನವಿ ಮಾಡಿದರು.

    178 ಅಂಗಾಂಗ ದಾನ: ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಅಂಗಾಂಗ ದಾನ ಕೋರಿ ಎಂಟು ಸಾವಿರಕ್ಕೂ ಹೆಚ್ಚು ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ 178 ಮಂದಿ ಅಂಗಾಂಗ ದಾನ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

    ಅಂಗ ಮತ್ತು ಅಂಗಾಂಶ ದಾನದ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9845006768, ಜಾಲತಾಣ (www.jeevasarthakathe. karnataka.gov.in)ಕ್ಕೆ ಸಂರ್ಪಸಬಹುದಾಗಿದೆ.

    ಕಣ್ಣೀರಿಟ್ಟವರಿಗೆ ಆತ್ಮಸ್ಥೈರ್ಯ :ಅಂಗಾಂಗ ದಾನಿಗಳ ಕುಟುಂಬದವರಿಗೆ ಸಿಎಂ ಪ್ರಶಂಸಾಪತ್ರ ವಿತರಿಸುವ ವೇಳೆ ಭಾವುಕತೆ ನೆಲೆಸಿತ್ತು. ಅಪಘಾತಕ್ಕೀಡಾದ ಶರವಣ ಅವರ ಪತ್ನಿ, ಪ್ರಶಂಸಾಪತ್ರ ಸ್ವೀಕರಿಸುವಾಗ ಅಗಲಿದ ಪತಿಯನ್ನು ನೆನೆದು ಕಣ್ಣೀರಿಟ್ಟರು. ಕೊಲೆಗೀಡಾದ ರಾಮನಗರದ ಕೆ.ಜಿ.ನವೀನ್ ಕುಟುಂಬದವರು ಗದ್ಗಿತರಾಗಿ ಕೈಮುಗಿದು ಕೋರಿಕೆ ಮಂಡಿಸಿದಾಗ ನವೀನ್ ಸಾವಿಗೆ ನ್ಯಾಯ ಒದಗಿಸುವುದಾಗಿ ಸಿದ್ದರಾಮಯ್ಯ ಅಭಯ ನೀಡಿ, ಧೈರ್ಯ ತುಂಬಿದರು. ನೀವು ಕೈಗೊಂಡ ನಿರ್ಧಾರ ಸುಲಭವಲ್ಲ, ಇತರರ ಜೀವ ಉಳಿಸುವ ಕೆಲಸ ಮಾಡಿದ್ದೀರಿ. ನಿಮಗೆ ಯಾವುದೇ ಸಂಕಷ್ಟ ಎದುರಾದರೂ ನಿಮ್ಮೊಂದಿಗೆ ಎಂದು ಸಾಂತ್ವನದ ಮಾತುಗಳನ್ನಾಡಿದ ಸಿಎಂ ಆತ್ಮಸ್ಥೈರ್ಯ ತುಂಬಿದರು.

    ಕರ್ನಾಟಕಕ್ಕೆ ಎರಡನೇ ಸ್ಥಾನ : ಅಂಗಾಂಗ ದಾನದಲ್ಲಿ ದೇಶದಲ್ಲಿಯೇ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ತಮ್ಮ ಹಿಂದಿನ ಅವಧಿಯಲ್ಲಿ ಅಂಗಾಂಗ ದಾನಕ್ಕೆ ಸೊಸೈಟಿ ಸ್ಥಾಪಿಸಿದ್ದನ್ನು ಸಿದ್ದರಾಮಯ್ಯ ನೆನಪಿಸಿಕೊಂಡರು. ಅಲ್ಲದೆ, ಜೀವಸಾರ್ಥಕತೆ ಅಡಿ ಅಂಗಾಂಗ ದಾನಕ್ಕೆ ಇಲಾಖೆ ಒತ್ತು ನೀಡಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ನಿಟ್ಟಿನಲ್ಲಿ ಅಂಗಾಂಗ ದಾನ ಹೆಚ್ಚಾಗಬೇಕು ಎಂದು ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

    ನೋಂದಾಯಿತ ಆಸ್ಪತ್ರೆಗಳು: ಸ್ಥಳೀಯ ಉಪಯೋಗಕ್ಕೆ ಅಂಗಾಂಗ ಕಸಿಗೆ ನೋಂದಾಯಿತ ಆಸ್ಪತ್ರೆಗಳನ್ನು ಐದು ವಲಯಗಳನ್ನಾಗಿ ವಿಂಗಡಿಸಿದ್ದು, ಒಟ್ಟು 73 ಆಸ್ಪತ್ರೆಗಳು ನೋಂದಣಿಯಾಗಿವೆ. ಇದರಲ್ಲಿ ಬೆಂಗಳೂರು ವಲಯ- 43, ಮಂಗಳೂರು- 11, ಮೈಸೂರು- 7 ಹಾಗೂ ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ತಲಾ ಆರು ಆಸ್ಪತ್ರೆಗಳು ಸೇರಿವೆ.

    ಸ್ತ್ರೀಯರು ಮುಂದೆ : ರಾಜ್ಯದಲ್ಲಿ 2023ರ ಸೆ.5 ರಿಂದ 2024ರ ಫೆ.27ರವರೆಗೆ 20,029 ಜನರು ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ. ಈ ಪೈಕಿ 11,527 ಸ್ತ್ರೀಯರು ಪ್ರತಿಜ್ಞೆ ಮಾಡಿ ಪುರುಷರಿಗಿಂತ ಮುಂದಿದ್ದಾರೆ. ಬಳ್ಳಾರಿ ಜಿಲ್ಲೆಯ 4,363 ಜನ ಅಂಗಾಂಗ ದಾನದ ಪ್ರತಿಜ್ಞೆ ಮಾಡಿದ್ದಾರೆ. ಜಿಲ್ಲಾಮಟ್ಟದಲ್ಲಿ ಬಳ್ಳಾರಿ ಜಿಲ್ಲೆಯು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

    ಕುತೂಹಲ ಮೂಡಿಸಿದ ಭೇಟಿ: ಪ್ರಧಾನಿ ಮೋದಿ ಜತೆ ಮಮತಾ ಬ್ಯಾನರ್ಜಿ ಮಾತುಕತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts