More

    ಆಮೆಗತಿಯಲ್ಲಿ ಸಾಗುತ್ತಿದೆ ಸರ್ಕಾರಿ ಪಶು ವೈದ್ಯಕೀಯ ಮಹಾವಿದ್ಯಾಲಯ ಕಾಮಗಾರಿ

    ಪ್ರವೀಣ್‌ರಾಜ್ ಕೊಯ್ಲ
    ಕಡಬ ತಾಲೂಕಿನ ಕೊಯ್ಲ ಗ್ರಾಮದಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ಸರ್ಕಾರಿ ಪಶು ವೈದ್ಯಕೀಯ ಮಹಾವಿದ್ಯಾಲಯದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.

    ಟೆಂಡರ್ ಅನ್ವಯ 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೊದಲ ಬ್ಯಾಚ್ ಆರಂಭವಾಗಬೇಕಿತ್ತು. ಆದರೆ ಮೊದಲ ಹಂತದ ಕಟ್ಟಡ ಕಾಮಗಾರಿ ಶೇ.75 ಮಾತ್ರ ಪೂರ್ಣಗೊಂಡಿದೆ. ಇನ್ನಿತರ ಕಾಮಗಾರಿ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಕೊಯ್ಲದಲ್ಲಿ ಪಶು ವೈದ್ಯಕೀಯ ಕಾಲೇಜು ಆರಂಭಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿತ್ತು. ಕೊಯ್ಲ ಜಾನುವಾರು ಸಂವರ್ಧನಾ ಕೇಂದ್ರದ ಅಧೀನದಲ್ಲಿರುವ 247 ಎಕರೆ ಜಾಗವನ್ನು ಪಶು ವೈದ್ಯಕೀಯ ಕಾಲೇಜಿಗೆ ಮೀಸಲಿಡಲಾಗಿತ್ತು.
    2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪಶು ವೈದ್ಯಕೀಯ ಕಾಲೇಜಿಗೆ ಶಿಲಾನ್ಯಾಸ ನೆರವೇರಿಸಿದ್ದರು. 300 ಕೋಟಿ ರೂ. ವೆಚ್ಚದಲ್ಲಿ ಕಾಲೇಜು ಕ್ಯಾಂಪಸ್ ನಿರ್ಮಾಣಗೊಳ್ಳಲಿದ್ದು, 2020ರ ವೇಳೆಗೆ ಮೊದಲ ಬ್ಯಾಚ್ ಆರಂಭಗೊಳಿಸುವ ಭರವಸೆಯನ್ನೂ ನೀಡಿದ್ದರು. ಆದರೆ ಕಾಲೇಜಿನ ಮೊದಲ ಹಂತದ ಕಾಮಗಾರಿಯೇ ಆಮೆಗತಿಯಲ್ಲಿದೆ. ಮೊದಲ ಹಂತದ ಕಾಮಗಾರಿಯನ್ನು ರಾಜ್ಯ ಗೃಹ ಮಂಡಳಿಗೆ ವಹಿಸಲಾಗಿದ್ದು, 110 ಕೋಟಿ ರೂ. ವೆಚ್ಚದಲ್ಲಿ ಹುಡುಗರ, ಹುಡುಗಿಯರ ವಸತಿ ನಿಲಯ, ಅತಿಥಿಗೃಹ, ಕಾಲೇಜು ಕಟ್ಟಡ, ಆಸ್ಪತ್ರೆ ಕಟ್ಟಡಗಳು, ಕಚೇರಿ ಮತ್ತು ಸಿಬ್ಬಂದಿ ವಸತಿಗೃಹ ಕಟ್ಟಡಗಳ ನಿರ್ಮಾಣಗೊಳ್ಳಬೇಕಿತ್ತು.

    ಈ ಮಧ್ಯೆ ಕರೊನಾದಿಂದ ಕಾರ್ಮಿಕರು ಕೆಲಸ ಮಾಡಲು ಹಿಂದೇಟು ಹಾಕಿದ್ದು, ಸರ್ಕಾರದ ಅನುದಾನ ಬಿಡುಗಡೆಯಲ್ಲಿ ವ್ಯತ್ಯಯ ಮೊದಲಾದ ಕಾರಣಗಳಿಂದ ಕಾಮಗಾರಿ ಕುಂಠಿತವಾಗಿದೆ. ಒಳಚರಂಡಿ, ರಸ್ತೆ, ಸಿಬ್ಬಂದಿ ಕೊಠಡಿ, ಅಧಿಕಾರಿಗಳ ಬಂಗಲೆ, ಸಭಾಂಗಣ ಮೊದಲಾದ ಕಾಮಗಾರಿ ಎರಡನೇ ಹಂತದಲ್ಲಿ ಸೇರಿಕೊಂಡಿವೆ.

    ಮೊದಲ ಹಂತದ ಕಾಮಗಾರಿಗೆ 110 ಕೋಟಿ ರೂ. ವಿನಿಯೋಗಿಸಲಾಗುತ್ತಿದ್ದು, ಈ ಪೈಕಿ ಈವರೆಗೆ 65 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಇನ್ನುಳಿದ ಹಣ ಬಿಡುಗಡೆಯಾಗುತ್ತಿದ್ದಂತೆ ಕೆಲಸ ವೇಗ ಪಡೆಯುತ್ತದೆ. ಮೊದಲ ಹಂತದ ಕಾಮಗಾರಿ ಪೂರ್ತಿಯಾದ ಬಳಿಕ ಸಂಬಂಧಪಟ್ಟವರ ಅನುಮತಿ ಪಡೆದು ಕಾಲೇಜು ಆರಂಭಿಸಬಹುದು ಎಂದು ಅಂದಾಜಿಸಲಾಗಿದೆ. ಎರಡನೇ ಹಂತದ ಕಾಮಗಾರಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ.
    ಡಾ.ನಾರಾಯಣ ಭಟ್ , ವಿಶೇಷ ಕರ್ತವ್ಯ ಅಧಿಕಾರಿ ಪಶುವೈದಕೀಯ ಕಾಲೇಜು ಕೊಯ್ಲ

    ಹಿಂದುಳಿದ ಪ್ರದೇಶದಲ್ಲಿ ಈ ಕಾಲೇಜು ಆರಂಭವಾಗುತ್ತದೆ ಎನ್ನುವ ಕಾರಣಕ್ಕಾಗಿ ಸ್ಥಳೀಯರು ಇದಕ್ಕೆ ಹೆಚ್ಚಿನ ಸಹಕಾರ ನೀಡಿದ್ದರು. ಕೃಷಿಕರ ಮಕ್ಕಳಿಗೆ ಇದರಿಂದ ಪ್ರಯೋಜನವೂ ಆಗಲಿದೆ ಎನ್ನುವ ಆಶಾಭಾವನೆ ಇತ್ತು. ಆರಂಭದಲ್ಲಿ ಅತ್ಯಂತ ವೇಗವಾಗಿ ಸಾಗಿದ ಕಾಮಗಾರಿ ಬಳಿಕ ನಿಧಾನಗತಿಯಲ್ಲಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಕಾಲೇಜು ಪ್ರಾರಂಭಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು.
    ಕೆ.ಎ ಸುಲೈಮಾನ್, ಕೊಯ್ಲ ಗ್ರಾಪಂ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts