More

    ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗೆ ಸರ್ಕಾರದ ಶ್ರೀರಕ್ಷೆ?

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ಮಣ್ಣಿನ ಲಾರಿ ಬಿಡಲು 12 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇಲ್ಲಿಯ ತಹಸೀಲ್ದಾರ ಎಚ್.ಎನ್. ಶಿರಹಟ್ಟಿಯವರು 15 ದಿನಗಳ ರಜೆ ನಂತರ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿದಿದ್ದು, ಸರ್ಕಾರದ ಶ್ರೀರಕ್ಷೆಯಿಂದಲೇ ಇದು ಸಾಧ್ಯವಾಗಿದೆ ಎಂಬ ಟೀಕೆ ವ್ಯಾಪಕವಾಗಿ ಕೇಳಿಬರತೊಡಗಿದೆ.

    ದಂಡಾಧಿಕಾರಿಯೂ ಆಗಿರುವ ತಹಸೀಲ್ದಾರರು ಜ. 5ರಂದು ತಮ್ಮ ಚಾಲಕನ ಮೂಲಕ 12 ಸಾವಿರ ರೂ. ತೆಗೆದುಕೊಳ್ಳುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದರು. ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.

    ರಾಜ್ಯದಲ್ಲಿ ಒಂದು ವರ್ಷದ ಅವಧಿಯಲ್ಲಿ 307 ಟ್ರ್ಯಾಪ್ ಪ್ರಕರಣ ನಡೆದಿವೆ. ಇದರಲ್ಲಿ ಯಾವ ಅಧಿಕಾರಿಯನ್ನೂ ಮರಳಿ ಅದೇ ಜಾಗದಲ್ಲಿ ಮುಂದುವರಿಸಿರುವ ಉದಾಹರಣೆಗಳಿಲ್ಲ. ಕಳಂಕಿತ, ಆರೋಪಿತ ಅಧಿಕಾರಿ ಅದೇ ಊರಿನಲ್ಲಿ ಅದೇ ಹುದ್ದೆಯಲ್ಲಿ ಇದ್ದರೆ ಸಾಕ್ಷಿ ನಾಶ, ದೂರುದಾರನ ವಿರುದ್ಧ ಷಡ್ಯಂತ್ರ ಮಾಡುವ ಸಂಭವ ಇರುತ್ತದೆ. ಹೀಗಾಗಿ ಅಮಾನತು ಮಾಡಲಾಗುತ್ತದೆ ಅಥವಾ ಬೇರೆಡೆ ನಿಯೋಜಿಸಲಾಗುತ್ತದೆ ಎಂಬುದು ಸಾಮಾನ್ಯ ಗ್ರಹಿಕೆ. ರಾಣೆಬೆನ್ನೂರಿನ ಪ್ರಕರಣದಲ್ಲಿ ಇದು ಸುಳ್ಳಾಗಿರುವುದು ಜನರು ಹುಬ್ಬೇರಿಸುವಂತೆ ಮಾಡಿದೆ. ಅಷ್ಟೇ ಅಲ್ಲ, ಸ್ವತಃ ಇಲ್ಲಿಯ ಶಾಸಕರೇ ತಹಸೀಲ್ದಾರರಿಗೆ ಜಾಮೀನು ಸಿಕ್ಕಿದೆಯಲ್ಲ… ಎಂದು ಹೇಳುವುದು ಅಚ್ಚರಿಗೆ ಕಾರಣವಾಗಿದೆ.

    ಜಿಲ್ಲಾಧಿಕಾರಿ ಹೇಳಿದ್ದಿಷ್ಟು

    ತಹಸೀಲ್ದಾರ್ ಕರ್ತವ್ಯದ ಕುರಿತು ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವರನ್ನು ಕೇಳಿದಾಗ, ತಹಸೀಲ್ದಾರರ ನಿಯೋಜನೆ ತಮ್ಮ ಮಟ್ಟದಲ್ಲಿ ಆಗುವುದಲ್ಲ. ಮೇಲ್ಮಟ್ಟದಲ್ಲಿ ತೆಗೆದುಕೊಳ್ಳುವ ನಿರ್ಧಾರದನ್ವಯ ಆಗಿರುತ್ತದೆ. ಆದ್ದರಿಂದ ಈ ಕುರಿತು ತಾವು ಹೇಳಲು ಬರುವುದಿಲ್ಲ ಎಂದಷ್ಟೇ ಹೇಳಿದರು.

    ತಹಸೀಲ್ದಾರ್ ಶಿರಹಟ್ಟಿಯವರು ಲಂಚ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ದಾಳಿ ಮಾಡಿ ಪ್ರಕರಣ ದಾಖಲಿಸಲಾಗಿದೆ. ಒಂದು ದಿನ ಅವರನ್ನು ಬಂಧನದಲ್ಲಿಡಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಪ್ರಕರಣದ ಬಗ್ಗೆ ಕಂದಾಯ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ನಿಯೋಜನೆ ವಿಷಯದಲ್ಲಿ ಮುಂದಿನ ಕ್ರಮ ಕಂದಾಯ ಇಲಾಖೆ ವ್ಯಾಪ್ತಿಗೆ ಸೇರಿರುತ್ತದೆ.

    | ಬಿ.ಪಿ. ಚಂದ್ರಶೇಖರ ಡಿವೈಎಸ್ಪಿ ಲೋಕಾಯುಕ್ತ ಹಾವೇರಿ

    ಸರ್ಕಾರದ ನಿಯಮಾವಳಿ ಪ್ರಕಾರ ಲೋಕಾಯುಕ್ತ ಅಧಿಕಾರಿಗಳಿಂದ ಬಂಧನವಾದ ಅಧಿಕಾರಿಗೆ 24 ಗಂಟೆಯಲ್ಲಿ ಜಾಮೀನು ದೊರೆತರೆ ಅವರನ್ನು ಅಮಾನತು ಮಾಡುವುದಿಲ್ಲ. ರಾಣೆಬೆನ್ನೂರ ತಹಸೀಲ್ದಾರ್​ಗೆ ಜಾಮೀನು ದೊರೆತಿದೆ. ಆದ್ದರಿಂದ ಅವರು ಇಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧದ ಪ್ರಕರಣದಲ್ಲಿ ಹರುಳಿಲ್ಲ. ಇಂದು ಯಾರನ್ನು ಬೇಕಾದರೂ ಸುಲಭವಾಗಿ ಟ್ರ್ಯಾಪ್ ಮಾಡಬಹುದು. ಹಾಗಾಂತ ಎಲ್ಲರನ್ನೂ ಅಮಾನತು ಮಾಡಲು ಬರುವುದಿಲ್ಲ.

    | ಪ್ರಕಾಶ ಕೋಳಿವಾಡ ಶಾಸಕ ರಾಣೆಬೆನ್ನೂರ

    ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್​ಹ್ಯಾಂಡ್ ಆಗಿ ಸಿಕ್ಕ ತಹಸೀಲ್ದಾರರನ್ನು ಸರ್ಕಾರ ಅಮಾನತುಗೊಳಿಸಬೇಕು. ಆದರೆ, ಅವರಿಗೆ ಮತ್ತೆ ಅಲ್ಲಿಯೇ ಕೆಲಸ ಮಾಡಲು ಅವಕಾಶ ನೀಡಿದ್ದರಿಂದ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ, ರಕ್ಷಣೆ ನೀಡಿದಂತಾಗಿದೆ. ಸರ್ಕಾರದ ಧೋರಣೆ ಬದಲಾಗದಿದ್ದರೆ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

    | ಡಾ. ಬಸವರಾಜ ಕೇಲಗಾರ ಬಿಜೆಪಿ ರಾಜ್ಯ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts