More

    ಸರ್ಕಾರಿ ಸ್ಥಳ ಅತಿಕ್ರಮಣಕ್ಕೆ ಬ್ರೇಕ್ ಹಾಕಿ

    ಹುಕ್ಕೇರಿ: ಗ್ರಾಮಗಳಲ್ಲಿ ಸರ್ಕಾರಿ ಗಾಯರಾಣ ಹಾಗೂ ಪಂಚಾಯಿತಿ ಆಸ್ತಿಗಳಲ್ಲಿ ಖಾಸಗಿಯವರು ಮಳಿಗೆ ನಿರ್ಮಿಸಿಕೊಂಡು ಅನಧಿಕೃತವಾಗಿ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದೆ. ಅದಕ್ಕಾಗಿ ಅಂತಹ ಮಳಿಗೆಗಳನ್ನು ಪಂಚಾಯಿತಿ ವಶಕ್ಕೆ ಪಡೆದು ಟೆಂಡರ್ ಮೂಲಕ ಬಾಡಿಗೆಗೆ ನೀಡಬೇಕು ಎಂದು ಶಾಸಕ ಉಮೇಶ ಕತ್ತಿ ತಾಲೂಕಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.

    ಪಟ್ಟಣದ ತಾಲೂಕು ಪಂಚಾಯಿತಿ ಸಭಾಭ ವನದಲ್ಲಿ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

    ಗ್ರಾಮ ಪಂಚಾಯಿತಿ ಅಧಿಕಾರಿಗಳು ಸರ್ಕಾರಿ ನಿವೇಶನಗಳ ಅತಿಕ್ರಮಣ ತಡೆದು, ಅಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಬಡ ಹಾಗೂ ಯುವ ಜನಾಂಗಕ್ಕೆ ಬಾಡಿಗೆ ರೂಪದಲ್ಲಿ ನೀಡಿ ಅವರ ಬದುಕಿಗೆ ಮತ್ತು ಪಂಚಾಯಿತಿಗೆ ಆದಾಯ ಬರುವಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಶಾಸಕ ಕತ್ತಿ ಸೂಚಿಸಿದರು.

    ಮಾರಕ ಕರೊನಾ ವೈಸರ್‌ನಿಂದಾಗಿ ಇಂದು ಖಾಸಗಿ ಶಾಲೆಗಳ ಸಿಬ್ಬಂದಿ ಅತಂತ್ರರಾಗಿದ್ದಾರೆ. ಅವರಿಗೆ ಆಹಾರ ಕಿಟ್ ವಿತರಣೆ ಹಾಗೂ ಆರ್ಥಿಕ ನೆರವು ನೀಡಲು ಮೇಲಾಧಿಕಾರಿಗಳಿಗೆ ಸೂಚಿಸಬೇಕು ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಮೋಹನ ದಂಡಿನ ಅವರಿಗೆ ಸೂಚಿಸಿದರು.

    ಮತಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆಯ ನಿರ್ಲಕ್ಷೃ ಕಾರಣವಾಗಿರುವುದು ಕಂಡುಬಂದಿದೆ. ಕುಡುಕರು ಶಾಲೆಗಳಲ್ಲಿ ಕುಳಿತು ಮದ್ಯಪಾನ ಮಾಡಿ ಖಾಲಿ ಬಾಟಲ್ ಬಿಸಾಡುತ್ತಿದ್ದಾರೆ. ಶಾಲಾ ಅವರಣದಲ್ಲಿ ಸರಾಯಿ ಬಾಟಲ್‌ರಾಶಿ ಬೀಳುತ್ತಿದೆ ಎಂಬುದು ಸಾರ್ವಜನಿಕರ ಆರೋಪ. ಮತ್ತೆ ದೂರು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ತಹಸೀಲ್ದಾರ್ ಅಶೋಕ ಗುರಾಣಿ, ತಾಪಂ ಇಒ ಬಿ.ಕೆ.ಲಾಳಿ, ತಾಲೂಕು ವೈದ್ಯಾಧಿಕಾರಿ ಉದಯ ಕುಡಚಿ, ತಾಲೂಕು ಸಹಾಯಕ ತೋಟಗಾರಿಕೆ ನಿರ್ದೇಶಕ ರಾಜಶೇಖರ ಪಾಟೀಲ, ಶ್ರೀಶೈಲ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts