More

    ಸಿಇಟಿ ಗೊಂದಲ ಪರಿಹಾರಕ್ಕೆ ವಿಷಯವಾರು ಸಮಿತಿ ರಚಿಸಿದ ಕರ್ನಾಟಕ ಸರ್ಕಾರ

    ಬೆಂಗಳೂರು ಸಿಇಟಿ ಪರೀಕ್ಷೆಯಲ್ಲಿ ಭಾರೀ ಸಂಖ್ಯೆಯ ಪಠ್ಯೇತರ ಪ್ರಶ್ನೆಗಳನ್ನು ಕೇಳಿರುವುದರಿಂದ ಉಂಟಾಗಿರುವ ಗೊಂದಲ, ಆತಂಕ ನಿವಾರಣೆಗೆ ಸರ್ಕಾರ ಕೊನೆಗೂ ಮುಂದಾಗಿದ್ದು, ಯಾವ್ಯಾವ ವಿಷಯದಲ್ಲಿ ಎಷ್ಟೆಷ್ಟು ಪಠ್ಯೇತರ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ವಿಷಯವಾರು ಪ್ರತ್ಯೇಕ ತಜ್ಞರ ಸಮಿತಿ ರಚಿಸಿದೆ.

    ಸಮಿತಿಗಳ ವರದಿ ಬಂದ ಕೂಡಲೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಕರ್ ಎಂ.ಎಸ್. ತಿಳಿಸಿದ್ದಾರೆ.

    ಈ ಸಂಬಂಧ ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಿಇಟಿಯಲ್ಲಿ ನಡೆಸಲಾದ ಜೀವಶಾಸ್ತ್ರ, ಗಣಿತ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ಈ ಎಲ್ಲಾ ನಾಲ್ಕೂ ವಿಷಯಗಳಿಗೂ ಪ್ರತ್ಯೇಕ ತಜ್ಞರ ಸಮಿತಿ ರಚಿಸಲಾಗಿದೆ. ಈ ನಾಲ್ಕೂ ಸಮಿತಿಗಳು ಸಿಇಟಿಯಲ್ಲಿ ಪಠ್ಯಕ್ರಮದಿಂದ ಹೊರತಾಗಿರುವ ಪ್ರಶ್ನೆಗಳನ್ನು ಖಚಿತಪಡಿಸಿಕೊಂಡು ತಕ್ಷಣವೇ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ತಜ್ಞರ ಸಮಿತಿಗಳ ವರದಿ ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಏ.18 ಮತ್ತು 19ರಂದು ನಡೆಸಲಾದ ಈ ಬಾರಿಯ ಸಿಟಿಇ ಪರೀಕ್ಷೆಯನ್ನು 3.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದಾರೆ. ಪರೀಕ್ಷೆಗಳ ನಂತರ ಪಠ್ಯಕ್ರಮದ ಹೊರತಾಗಿ ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಪತ್ರಿಕಾ ವರದಿಗಳು ಉಲ್ಲೇಖಿಸಿವೆ. ಪಠ್ಯೇತರ ಪ್ರಶ್ನೆಗಳಿಂದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ, ಕೃಪಾಂಕಗಳನ್ನು ಒದಗಿಸುವಂತೆ ಅಥವಾ ಮರು ಪರೀಕ್ಷೆ ನಡೆಸುವಂತೆ ಮನವಿಗಳು ಬಂದಿವೆ.

    ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಪರಿಶೀಲಿಸಿದ ಸರ್ಕಾರ ವಿಷಯವಾರು ತಜ್ಞರ ಸಮಿತಿ ರಚಿಸಿದ್ದು, ತಕ್ಷಣ ವರದಿ ಸಲ್ಲಿಸಲು ಸೂಚಿಸಿದೆ. ಈ ಮಧ್ಯೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಶ್ನೆಗಳಿಗೆ ಆಕ್ಷೇಪಣೆ ಸಲ್ಲಿಸಲು ಏ.27ರವರೆಗೆ ಅವಕಾಶ ನೀಡಿದ್ದು, ಈ ಸಂಬಂಧ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ. ತಜ್ಞರ ಸಮಿತಿ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಭಯ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts