More

    ಸರ್ಕಾರಿ ಜಾಗ ಉಳ್ಳವರ ಪಾಲು!

    ಹಟ್ಟಿಯಂಗಡಿ: ಒಂದೇ ದಿನ, ಒಂದೇ ಸಮಯ ಪಿತ್ರಾರ್ಜಿತ ಆಸ್ತಿಯಿದ್ದವರಿಗೆ ಅಕ್ರಮ ಸಕ್ರಮ ಹೆಸರಲ್ಲಿ ಸರ್ಕಾರಿ ಜಾಗ ಮಂಜೂರು.. ಗ್ರಾಮದಲ್ಲಿ ವಾಸ್ತವ್ಯ ದಾಖಲೆಯೇ ಇಲ್ಲದ, ಬೆಂಗಳೂರಲ್ಲಿ ಉದ್ಯಮ ನಡೆಸುತ್ತಿದ್ದರಿಗೂ ಸರ್ಕಾರಿ ಜಾಗ ಉಡುಗೊರೆ.. ಸರ್ಕಾರಿ ಜಾಗ ಮಂಜೂರು ರದ್ದು ಮಾಡುವಂತೆ ತಹಸೀಲ್ದಾರ್ ಆದೇಶ ಪಾಲನೆಗೆ ಆರ್‌ಟಿಐ ಕಾರ್ಯಕರ್ತ ಎಂಬ ಭಯದ ಅಡ್ಡಿ. ಪಿತ್ರಾರ್ಜಿತ ಆಸ್ತಿಯಿದ್ದರೂ ಬೇನಾಮಿ ಹೆಸರಲ್ಲಿ ಅಕ್ರಮ ಸಕ್ರಮದಲ್ಲಿ ಒಟ್ಟು 35.27 ಎಕರೆ ಜಾಗಕ್ಕೆ ಕನ್ನ! ಕುಂದಾಪುರ ತಾಲೂಕು ಹಟ್ಟಿಯಂಗಡಿ ಗ್ರಾಪಂ ಕೆಂಚನೂರ ಗ್ರಾಮದ ಸರ್ಕಾರಿ ಜಾಗಕ್ಕೆ ಉಳ್ಳವರೇ ಕನ್ನ ಹಾಕಿದ್ದು, ಅಧಿಕಾರಿಗಳು ಆಮಿಷ ಹಾಗೂ ಆರ್‌ಟಿಐ ಕಾರ್ಯಕರ್ತ ಎಂಬ ಭಯದಲ್ಲಿ ಸರ್ಕಾರಿ ಜಾಗ ದಾನ ಮಾಡಲು ಸಹಕಾರ ನೀಡಿದ್ದಾರೆ. ಇಲ್ಲಿ ಮನೆ ಕಟ್ಟಿ ಕೂರಲು ಐದು ಸೆಂಟ್ಸ್ ಜಾಗ ನೀಡುವಂತೆ 300ಕ್ಕೂ ಹೆಚ್ಚು ಜನ ಅರ್ಜಿ ಹಾಕಿದ್ದು, ಅವರಿಗೆ ಎರಡೂವರೆ ಸೆಂಟ್ಸ್ ಜಾಗ ನೀಡಲೂ ಸಾಧ್ಯವಾಗಿಲ್ಲ. ಹಟ್ಟಿಯಂಗಡಿ ಗ್ರಾಮದಲ್ಲಿ ಸರ್ಕಾರಿ ಜಾಗ ಮಂಜೂರು ಮಾಡಿಕೊಂಡವರಿಂದ ರದ್ದು ಮಾಡಿಸಿ, ಗ್ರಾಪಂಗೆ ಹಸ್ತಾಂತರಿಸಬೇಕು ಎಂಬ ಹೋರಾಟಕ್ಕೆ ವೇದಿಕೆ ಸಿದ್ಧವಾಗುತ್ತಿದ್ದು, ಸರ್ಕಾರಿ ಜಾಗ ಮಂಜೂರು ರದ್ದು ಮಾಡುವಂತೆ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಲಿಖಿತವಾಗಿ ನೀಡಿದ್ದಾರೆ.

    100ಕ್ಕೂ ಅಧಿಕ ಆರ್‌ಟಿಸಿ ದಾಖಲೆ: ಅಕ್ರಮ ಸಕ್ರಮದಲ್ಲಿ ಉಳ್ಳವರಿಗೇ ಜಮೀನು ಮಂಜೂರಾಗುತ್ತದೆ ಎಂದು ಓದುಗರಿಂದ ವಿಜಯವಾಣಿಗೆ ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಯಾರ‌್ಯಾರು ಎಷ್ಟೆಷ್ಟು ಸರ್ಕಾರಿ ಜಾಗ ಮಂಜೂರು ಮಾಡಿಕೊಂಡಿದ್ದಾರೆ, ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಾಗ ಏನಾಗಿದೆ ಎಂಬ ಬಗ್ಗೆ ಮಾಹಿತಿ ಹಕ್ಕು ಅಡಿ ದಾಖಲೆ ಸಂಗ್ರಹಿಸಿದ್ದು, 100ಕ್ಕೂ ಮಿಕ್ಕ ಆರ್‌ಟಿಸಿ ಪತ್ರಿಕೆ ಬಳಿ ಇದೆ. ಜಾಗ ಮಂಜೂರು ಮಾಡಿಕೊಂಡವರಲ್ಲಿ 5 ಸೆಂಟ್ಸ್ ಜಾಗದ ಬದಲು ನಿಯಮಕ್ಕೆ ಚ್ಯುತಿ ಆಗದಂತೆ ಒಬ್ಬೊಬ್ಬರು 4.80 ಎಕರೆ ಮೀರದಂತೆ ಸರ್ಕಾರಿ ಜಾಗ ಮಂಜೂರು ಮಾಡಿಕೊಂಡಿರುವುದು ದಾಖಲೆಯಲ್ಲಿದೆ. ಹೊರರಾಜ್ಯದವರೂ ಅಕ್ರಮ ಸಕ್ರಮ ಫಲಾನುಭವಿಗಳಾಗಿದ್ದು, ಕೆಲಸದಲ್ಲಿದ್ದು ರಾಜಕೀಯ ಪಕ್ಷದ ಮುಖಂಡರು ಅಕ್ರಮ ಸಕ್ರಮ ಫಲಾನುಭವಿ ಪಟ್ಟಿಯಲ್ಲ್ಲಿದ್ದಾರೆ. ಒಂದೇ ಕುಟುಂಬದವರು, ಕುಟುಂಬಕ್ಕೆ ಸಂಬಂಧಪಟ್ಟವರು ಬೇನಾಮಿ ಹೆಸರಲ್ಲಿ ಜಾಗ ಮಂಜೂರು ಮಾಡಿಕೊಂಡಿದ್ದಾರೆ.

    ಊರಲ್ಲಿದವರಿಗೂ ಜಾಗ ಮಂಜೂರು!: ಅಕ್ರಮ ಸಕ್ರಮ, 94ಸಿ, 94 ಸಿಸಿಯಲ್ಲಿ ಜಾಗ ಪಡೆಯಬೇಕಿದ್ದರೆ ಕೆಲವು ನಿಯಮಗಳಿವೆ. ಫಲಾನುಭವಿ ಅಕ್ರಮ ಸಕ್ರಮ ಜಾಗದಲ್ಲಿ ಕೂತಿದ್ದು, ಒತ್ತುವರಿ ಜಾಗದಲ್ಲಿ ಕೃಷಿ ಮಾಡಿರಬೇಕು. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡ ವ್ಯಕ್ತಿಗೆ ಮನೆ, ಪಟ್ಟಾ ಜಾಗ ಇರಬಾರದು. ಸರ್ಕಾರಿ ಜಾಗದಲ್ಲಿ ಎಷ್ಟು ವರ್ಷದಿಂದ ಕೂತಿದ್ದು, ಮನೆ ಕಟ್ಟಿ ವಾಸ್ತವ್ಯ ಮಾಡಿದ ಬಗ್ಗೆ ಆಧಾರ ಬೇಕು. ಮನೆ ಕಟ್ಟಿ ಕೂತ ನಂತರ ಮನೆಯಲ್ಲಿ ಅಡುಗೆ ಇನ್ನಿತರ ಕುರುಹುಗಳು ಹಾಗೂ ಜಾಗದಲ್ಲಿ ಮಾಡಿದ ಕೃಷಿ ಕುರುಹುಗಳು ದಾಖಲೆಯಾಗಿ ಪರಿಗಣಿಸಲಾಗುತ್ತದೆ. ಆದರೆ ಹಟ್ಟಿಯಂಗಡಿ ಗ್ರಾಮದಲ್ಲಿ ನಾಲ್ವರಿಗೆ ಸನಂ. 65/ಪಿ13, 1.76 ಎಕರೆ, 65/ಪಿ81 1.35 ಎಕರೆ, 78/1ಎ 2.90 ಎಕರೆ, 107/2 2.48 ಎಕರೆ ಸರ್ಕಾರಿ ಜಾಗ ಮಂಜೂರು ಮಾಡಲಾಗಿದೆ. ಇವರ‌್ಯಾರು ಹಟ್ಟಿಯಂಗಡಿ ಗ್ರಾಮದಲ್ಲಿ ವಾಸ ಮಾಡುತ್ತಿಲ್ಲ. ಮನೆಯೂ ಇಲ್ಲ, ತೆರಿಗೆದಾರೂ ಅಲ್ಲ, ಆದರೂ ಅಕ್ರಮ ಸಕ್ರಮ ಫಲಾನುಭವಿಗಳು!

    ಇಡೀ ತಾಲೂಕಿನಲ್ಲಿ ಬೇನಾಮಿ ಹಾಗೂ ಉಳ್ಳವರು ಸರ್ಕಾರಿ ಜಾಗ ಅಕ್ರಮ ಸಕ್ರಮದಲ್ಲಿ ಮಂಜೂರು ಮಾಡಿಕೊಂಡಿದ್ದು, ಎಲ್ಲವನ್ನೂ ಗುರುತಿಸಿ, ಹಿಂದಕ್ಕೆ ಪಡೆದು, ಜಾಗವಿಲ್ಲದೆ ಹೌಸ್ ಸೈಟಿಗೆ ಅರ್ಜಿ ಹಾಕಿದವರಿಗೆ 5 ಸೆಂಟ್ಸ್ ವಿತರಿಸಬೇಕು. 3 ಎಕರೆ ಜಾಗವಿದ್ದವರಿಗೆ ಅಕ್ರಮ ಸಕ್ರಮ ಮಂಜೂರು ಮಾಡದಂತೆ ನಿಯಮವಿದ್ದು, ಹೆಚ್ಚುವರಿ ಯಾರು ಜಾಗ ಹೊಂದಿದ್ದಾರೋ ಅವರ ಜಾಗ ಸರ್ಕಾರ ಹಿಂದಕ್ಕೆ ಪಡೆಯಬೇಕು. ಇದು ಕೇವಲ ಕಂಚನೂರಿಗೆ ಸೀಮಿತವಾಗಿರದೆ ಕ್ಷೇತ್ರದ ಸಮಸ್ಯೆ ಆಗಿದ್ದು, ಅಕ್ರಮ ಜಾಗ ಪಡೆದವರ ಹಕ್ಕು ರದ್ದು ಮಾಡಬೇಕು.
    ಶಿವಕುಮಾರ್, ಕೆಂಚನೂರು ನಿವಾಸಿ

    ಹಟ್ಟಿಯಂಗಡಿ ಪಂಚಾಯಿತಿಯಲ್ಲಿ ನಿವೇಶನ ನೀಡುವಂತೆ 300ಕ್ಕೂ ಹೆಚ್ಚು ಅರ್ಜಿಗಳಿವೆ. ಹಿಡುವಳಿದಾರರಿಗೆ ಅಕ್ರಮ ಸಕ್ರಮದಲ್ಲಿ ಮಂಜೂರು ಮಾಡಿದ ಜಾಗ ಹಿಂಪಡೆದು ಪಂಚಾಯಿತಿಗೆ ಹಸ್ತಾಂತರಿಸಿದರೆ ನಿವೇಶನ ಇಲ್ಲದವರಿಗೆ ಹಂಚಲು ಸಾಧ್ಯ. ಸರ್ಕಾರಿ ಅಧಿಕಾರಿಗಳು ಆಮಿಷಕ್ಕೆ ಕಾನೂನು ಗಾಳಿಗೆ ತೂರಿದ್ದು, ಮಾಹಿತಿ ಹಕ್ಕು ಹೋರಾಟಗಾರ ಎಂಬ ಭೀತಿಯಲ್ಲಿ, ಜಾಗ ಮಂಜೂರು ಮಾಡಿದ್ದಾರೆ. ಮಂಜೂರಾದ ಜಾಗ ರದ್ದು ಪಡಿಸಿ, ಹಟ್ಟಿಯಂಗಡಿ ಗ್ರಾಮ ಬಡವರಿಗೆ 5 ಸೆಂಟ್ಸ್ ನಿವೇಶನ ನೀಡಲು ಅವಕಾಶ ಮಾಡಿಕೊಡಬೇಕು.
    ರಾಜೀವ ಶೆಟ್ಟಿ, ಅಧ್ಯಕ್ಷ, ಗ್ರಾಮ ಪಂಚಾಯಿತಿ ಹಟ್ಟಿಯಂಗಡಿ

    ಆಸ್ತಿಯಿದ್ದು, ಸರ್ಕಾರಿ ಜಾಗ ಅಕ್ರಮ ಸಕ್ರಮದಲ್ಲಿ ಮಂಜೂರು ಮಾಡಿಕೊಂಡರೆ ಕಾನೂನು ಬಾಹಿರವಾಗುತ್ತದೆ. ಮಾಹಿತಿ ಸಿಕ್ಕರೆ ತಹಸೀಲ್ದಾರ್ ಮೂಲಕ ಎಸಿಗೆ ಅಪೀಲ್ ಮಾಡಿ ರದ್ದು ಮಾಡಲು ಹೇಳುತ್ತೇನೆ. ಅಕ್ರಮವಾಗಿ ಸರ್ಕಾರಿ ಜಾಗ ಮಂಜೂರು ಮಾಡಿಕೊಂಡಿದ್ದು ಕಂಡುಬಂದರೆ ಮುಲಾಜಿಲ್ಲದೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಮಂಜೂರಾದ ಸ್ಥಳ ರದ್ದು ಮಾಡಲಾಗುತ್ತದೆ.
    ಜಿ.ಜಗದೀಶ್, ಜಿಲ್ಲಾಧಿಕಾರಿ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts