More

    ಮಾಡಸಿರವಾರಕ್ಕೆ ಪ್ರೌಢಶಾಲೆ ಮಂಜೂರು ಮಾಡಿ

    ಸಿಂಧನೂರು: ತಾಲೂಕಿನ ಮಾಡಸಿರವಾರ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಶ್ರೀ ಆಂಜನೇಯ ದೇವಸ್ಥಾನ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಬಿಇಒ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

    ಗ್ರಾಮದಲ್ಲಿ 1ರಿಂದ 8ನೇ ತರಗತಿವರೆಗೆ 276 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು 8ನೇ ತರಗತಿ ನಂತರ ಪ್ರೌಢಶಾಲೆ ಶಿಕ್ಷಣಕ್ಕಾಗಿ 7-8 ಕಿಮೀ ದೂರವಿರುವ ಅಲಬನೂರು ಸರ್ಕಾರಿ ಪ್ರೌಢಶಾಲೆಗೆ ತೆರಳಬೇಕು. ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಕಾಲ್ನಡಿಗೆಯಲ್ಲಿ ಶಾಲೆಗೆ ತೆರಳುವಂತಾಗಿದೆ. ಮಳೆ ಬಂದಾಗೊಮ್ಮೆ ಅಘೋಷಿತ ರಜೆ ಮಾಡುವ ಅನಿವಾರ್ಯತೆ ಎದುರಾಗುತ್ತದೆ.

    ಮಾಡಸಿರವಾರ ಗ್ರಾಮದಲ್ಲಿ ಗ್ರಾಪಂ ಇದ್ದು ಉದ್ಬಾಳ, ಗೋಮರ್ಸಿ, ಕನ್ನಾರಿ, ಬೂದಿವಾಳ ಶಾಲೆಯಲ್ಲಿ 7ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ 110ಕ್ಕೂ ಅಧಿಕ ಮಕ್ಕಳಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರೌಢ ಶಾಲೆ ಅಗತ್ಯವಿದ್ದು ಕೂಡಲೇ ಗ್ರಾಮಕ್ಕೆ ಸರ್ಕಾರಿ ಪ್ರೌಢ ಶಾಲೆ ಮಂಜೂರು ಮಾಡಬೇಕು.

    ಸದ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 276 ವಿದ್ಯಾರ್ಥಿಗಳಿದ್ದು ಕೊಠಡಿಗಳ ಸಮಸ್ಯೆ ಹೆಚ್ಚಿದೆ. ಈಗಿರುವ ಶಾಲೆ ಕೊಠಡಿಗಳು ಹಾಳಾಗಿವೆ. ಅಡುಗೆ ಕೊಠಡಿ, ಸಮತಟ್ಟಾದ ಮೈದಾನ, ಶುದ್ಧ ಕುಡಿಯುವ ನೀರಿನ ಕೊರತೆ ಇದೆ. 8 ಕೊಠಡಿಗಳ ಅಗತ್ಯವಿದೆ. ಈ ಬಗ್ಗೆ ಗಮನಹರಿಸಿ ಸಮಸ್ಯೆ ಪರಿಹರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.

    ದೇವಸ್ಥಾನ ಸಮಿತಿ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ವೀರಭದ್ರಪ್ಪ, ಕಾರ್ಯದರ್ಶಿ ವೀರೇಶ, ಬೀರಪ್ಪ, ಪರಶುರಾಮ, ಪಂಚಾಕ್ಷರಿ, ಪಂಪಾಪತಿ, ಅನಂತ ಮಾಡಸಿರವಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts