More

    ಉದ್ಯೋಗಿಗಳಾಗಬೇಡಿ, ಉದ್ಯಮಿಗಳಾಗಿ

    ಸೊಲ್ಲಾಪುರ ( ಚಿಕ್ಕಮಗಳೂರು ಜಿ.): ಸರ್ಕಾರದ ನೌಕರಿ ನೆಚ್ಚಿಕೊಂಡು ಕೂರದೆ ದೇಶಕ್ಕೆ ತೆರಿಗೆ ಕಟ್ಟುವ ಉದ್ಯಮಿಗಳಾಗುವ ಚಿಂತನೆ ಇಂದಿನ ಯುವಕರಲ್ಲಿ ಬರಬೇಕು ಎಂದು ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಸಲಹೆ ನೀಡಿದರು.

    ಅಜ್ಜಂಪುರ ತಾಲೂಕಿನ ಸೊಲ್ಲಾಪುರದಲ್ಲಿ ಆಯೋಜಿಸಿದ್ದ ಶ್ರೀ ಗುರು ಸಿದ್ಧರಾಮೇಶ್ವರ ಜಯಂತಿಯಲ್ಲಿ ಕೃಷಿ ಮತ್ತು ಯುವಗೋಷ್ಠಿಯಲ್ಲಿ ಉಪನ್ಯಾಸ ನೀಡಿದ ಅವರು, ಯುವಕರು ಕೆಲಸವಿಲ್ಲವೆಂದು ಬೇಡುವ ಮಟ್ಟಕ್ಕೆ ಇಳಿಯಬಾರದು. ಸತತ ಪ್ರಯತ್ನದ ಮೂಲಕ ತಮಗಿಷ್ಟವಾದ ಕ್ಷೇತ್ರ ಆಯ್ಕೆ ಮಾಡಿಕೊಂಡು ನಿಷ್ಠೆಯಿಂದ ಶ್ರಮಿಸಿದರೆ ಬೇಡುವ ಕೈಗಳು ದಾನ ಮಾಡುವ ಹಸ್ತವಾಗುತ್ತವೆ. ಜಯಂತಿ, ಜಾತ್ರೆಗಳು ಇಂಥ ಗುಣಗಳನ್ನು ಯುವಜನರಲ್ಲಿ ಬೆಳೆಸಬೇಕು ಎಂದರು.

    ಸಮಾಜದಲ್ಲಿ ಸಾಧು ಸಂತರು ಸಾಕಷ್ಟು ಆದರ್ಶ ಮೌಲ್ಯಗಳನ್ನು ಬಿಟ್ಟುಹೋಗಿದ್ದಾರೆ. 12ನೇ ಶತಮಾನದಲ್ಲಿ ನೊಂದವರ ಧ್ವನಿಯಾದ ಪ್ರಮುಖ ಶರಣಲ್ಲಿ ಸಿದ್ಧರಾಮರು ಪ್ರಮುಖರು. ಎಲ್ಲ ಸಾಧಕರ ಮಾರ್ಗ ಅರಿತು ತಮ್ಮದೆ ದಾರಿ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಎಂದಿಗೂ ಸೋಲನ್ನು ಒಪ್ಪದಿರುವುದೇ ಗೆಲುವಿನ ಮೆಟ್ಟಿಲು ಎಂದು ಹೇಳಿದರು.

    ಬದುಕಿನಲ್ಲಿ ಆಸ್ತಿ, ಹಣ ಏನೂ ಇಲ್ಲದಿರುವುದನ್ನು ಯುವಕರು ಪ್ಲಸ್ ಪಾಯಿಂಟ್ ಅಂದುಕೊಳ್ಳಬೇಕು. ಏನೂ ಇಲ್ಲದೆ ಬಂದು ಹಸಿವಿನಿಂದ ಬಳಲಿ, ಬದುಕಿಗಾಗಿ ಹಗಲಿರುಳು ಬೆಂಗಳೂರಲ್ಲಿ ಶ್ರಮಿಸಿದ ಸತೀಶ್, ದಯಾನಂದ್ ಎಂಬುವರು ಇಂದು ವಾರ್ಷಿಕ 850 ಕೋಟಿ ರೂ. ದುಡಿದು 40 ಕೋಟಿ ರೂ. ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದಾರೆ ಎಂದು ಸಾಧಕರ ಕತೆಗಳನ್ನು ಹೇಳಿ ಯುವಕರಲ್ಲಿ ಸ್ಪೂರ್ತಿ ತುಂಬಿದರು.

    ವೈಯಕ್ತಿಕ ಬದಲಾವಣೆ ತರದ ಪೂಜೆ, ಹವನ, ಶಿಕ್ಷಣ ಎಲ್ಲವೂ ಅನುಪಯುಕ್ತ. ಮಕ್ಕಳಿಗೆ ಮನೆಯ ಶಿಕ್ಷಣ ಮುಖ್ಯ. ಉತ್ತಮ ಬದುಕು ಕಟ್ಟಿಕೊಳ್ಳಲು ಪರಮ ಪಂಡಿತರಾಗಬೇಕಿಲ್ಲ. ಆತ್ಮವಿಶ್ವಾಸ ಇದ್ದರೆ ಸಾಕು. ಅಂಬೇಡ್ಕರ್ ಹೇಳಿದಂತೆ ಆರ್ಥಿಕ ಸ್ವಾತಂತ್ರ್ಯ ಕಡೆ ಗಮನ ಇರಲಿ. ಜನರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಭಗವಂತನನ್ನೇ ಟೀಕೆ ಮಾಡುವ ಜನರು ನಮ್ಮನ್ನು, ನಿಮ್ಮನ್ನು ಬಿಡುವುದಿಲ್ಲ ಎಂದು ಹೇಳಿದರು.

    ಕೀಳರಿಮೆ ತೊರೆದು ಆತ್ಮವಿಶ್ವಾಸ ಗಳಿಸಿಕೊಳ್ಳದಿದ್ದರೆ ಕೃಷಿಕ, ಉದ್ಯಮಿ, ವ್ಯಾಪಾರಿ ಯಾರೇ ಆದರೂ ಉದ್ಧಾರ ಆಗಲ್ಲ. ಸಣ್ಣ ಕೃಷಿಕ ಅಥವಾ ಕೂಲಿ ಕಾರ್ವಿುಕನಾಗಲಿ ಕೀಳರಿಮೆ ತೊರೆಯಬೇಕು. ಜಗತ್ತಿನ ಒಣ ಉಸಾಬರಿ ನಿಮಗೆ ಬೇಡ. ನಿಮ್ಮ ಶರೀರ, ಮನಸ್ಸಿನ ಮೇಲೆ ನಿಯಂತ್ರಣ ಹೊಂದಿ. ಸೋಲೊಪ್ಪದ ಗುಣ ನಮ್ಮಲ್ಲಿದ್ದರೆ ಜಗತ್ತಿನಲ್ಲಿ ನಮ್ಮನ್ನು ಸೋಲಿಸುವ ಶಕ್ತಿ ಯಾವುದೂ ಇಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts