More

    ರಾಮನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಗೋಪೂಜೆ

    ರಾಮನಗರ: ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರವಾದ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ರಾಮನಗರದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ನೂರಾರು ಮುಖಂಡರು ಗೋಪೂಜೆ ನಡೆಸಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

    ನಗರದ ಐಜೂರು ವೃತ್ತದಲ್ಲಿ ಗುರುವಾರ ಸೇರಿದ ಜಿಲ್ಲಾ ಮತ್ತು ತಾಲೂಕು ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಸಂಭ್ರಮದ ಘೊಷಣೆಗಳನ್ನು ಕೂಗಿದರು.

    ಈ ವೇಳೆ ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್. ಮುರಳೀಧರ್ ಮಾತನಾಡಿ, ಹಿಂದೂ ಸಮಾಜದಲ್ಲಿ ಗೋವಿಗೆ ಪೂಜನೀಯ ಸ್ಥಾನವಿದೆ. ನಮ್ಮ ಕಣ್ಣೆದುರೇ ಇಂತಹ ಗೋವುಗಳ ಹತ್ಯೆ ನಡೆಯುತ್ತಿದ್ದರೂ ವಿರೋಧಿಸಲು ಆಗುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಗೋಹತ್ಯೆ ನಿಷೇಧಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಅದರ ಫಲವಾಗಿ ಯಡಿಯೂರಪ್ಪ ನೇತೃತ್ವದ ಸರ್ಕಾರ ವಿಧೇಯಕಕ್ಕೆ ಅಂಗೀಕಾರ ನೀಡಿದೆ. ಹಾಗಾಗಿ ಜಿಲ್ಲೆಯ ಜನತೆಯ ಪರವಾಗಿ ಸರ್ಕಾರವನ್ನು ಅಭಿನಂದಿಸುವುದಾಗಿ ತಿಳಿಸಿದರು.

    ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಿರುವುದು ಸಂತಸ ತಂದಿದೆ. ಈ ಕಾಯ್ದೆಯನ್ನು ಉಲ್ಲಂಘಿಸುವವರಿಗೆ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

    ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರುದ್ರದೇವರು ಮಾತನಾಡಿ, ಗೋಹತ್ಯೆಯಿಂದ ಹಿಂದೂಗಳ ಧಾರ್ವಿುಕ ಭಾವನೆಗಳಿಗೆ ಧಕ್ಕೆಯಾಗುತ್ತಿತ್ತು. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಲು ಸಿಎಂ ಯಡಿಯೂರಪ್ಪ ಮತ್ತು ಪಶುಸಂಗೋಪನಾ ಸಚಿವ ಪ್ರಭುಚೌಹಾಣ್ ಸೇರಿದಂತೆ ಹಲವರು ಕಾರಣರಾಗಿದ್ದಾರೆ. ಹಾಗಾಗಿ ಇದಕ್ಕೆ ಕಾರಣರಾದ ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.

    ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ್, ನಗರ ಘಟಕದ ಅಧ್ಯಕ್ಷ ಶಿವಾನಂದ್, ಕಾರ್ಯದರ್ಶಿ ದರ್ಶನ್, ಮಾಜಿ ಅಧ್ಯಕ್ಷ ಮಂಜು, ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ನಗರ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ, ನಗರಸಭೆ ಮಾಜಿ ಸದಸ್ಯ ಬಿ.ನಾಗೇಶ್, ಮಾಧ್ಯಮ ಪ್ರಮುಖ ಚಂದ್ರಶೇಖರರೆಡ್ಡಿ, ಪಕ್ಷದ ಮುಖಂಡರಾದ ಪದ್ಮನಾಭ್, ಜಾಲಮಂಗಲ ನಾಗರಾಜು, ದೇವಿಕಾ, ಲತಾ, ಲಕ್ಷ್ಮಿ, ರಾಧಾ, ಹೇಮಾವತಿ, ಚನ್ನಪ್ಪ, ಅಶೋಕ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts