More

    ಶ್ರೀರಾಮನ ಸೇವೆಗೆ ಗೋಪಾಲನ ಪಣ: ಇಂದು ರಾಮನವಮಿ..

    ಶ್ರೀರಾಮನ ಪುಣ್ಯಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನವಮಿ ಸಂಭ್ರಮಾಚರಣೆ ಮುಂದಿನ ವರ್ಷದಿಂದ ನೂತನ ರಾಮಮಂದಿರದಲ್ಲೇ ನಡೆಯಲಿದೆ. ಗುರುವಾರ ರಾಮನವಮಿ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿನ ನಿರ್ಮಾಣ ಕಾರ್ಯದ ಸ್ಥಿತಿಗತಿಗಳನ್ನು ಮಂದಿರದ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕನ್ನಡಿಗ ಗೋಪಾಲ್ ನಾಗರಕಟ್ಟೆ ಅವರ ಮಾತುಗಳಲ್ಲೇ ಕಟ್ಟಿಕೊಡಲಾಗಿದೆ. ಇದು ಶ್ರೀರಾಮನವಮಿಗೆ ವಿಜಯವಾಣಿ ವಿಶೇಷ.

    | ರಾಘವ ಶರ್ಮ ನಿಡ್ಲೆ, ನವದೆಹಲಿ

    ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಆಗಬೇಕು ಎನ್ನುವುದು ಕೋಟ್ಯಂತರ ರಾಮಭಕ್ತರ ಎಷ್ಟೋ ವರ್ಷಗಳ ಕನಸು. ಇದಕ್ಕಾಗಿ ನಡೆದಿರುವ ಹೋರಾಟಗಳು ಒಂದೆರಡಲ್ಲ. ಆ ಎಲ್ಲಾ ಸಂಘರ್ಷದ ಹಾದಿ ದಾಟಿ ಬಂದಿರುವ ಹಿಂದೂ ಶ್ರದ್ಧಾಳು ಹಾಗೂ ಹೋರಾಟಗಾರರಿಗೆ ರಾಮಲಲ್ಲಾನನ್ನು (ಬಾಲರಾಮ) ಬೃಹತ್ ರಾಮ ಮಂದಿರದಲ್ಲಿ ಕಣ್ತುಂಬಿಕೊಳ್ಳುವ ದಿನ ಹತ್ತಿರವಾಗುತ್ತಿದೆ. ಹಾಗೆ ನೋಡಿದರೆ ಮುಂದಿನ ವರ್ಷದಿಂದ ಅಯೋಧ್ಯಾ ರಾಮನವಮಿ ಆಚರಣೆ ಹೊಸ ರಾಮ ಮಂದಿರದಲ್ಲೇ ನಡೆಯಲಿದೆ. ಮಂದಿರ ನಿರ್ಮಾಣ ಕಾರ್ಯಗಳು ಶರವೇಗದಲ್ಲಿ ನಡೆಯುತ್ತಿರುವುದರಿಂದ ದೇಶದ ವಿವಿಧ ರಾಜ್ಯಗಳಿಂದ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆಯಲ್ಲೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

    ಇವೆಲ್ಲದರ ನಡುವೆ ಕನ್ನಡಿಗರಿಗೊಂದು ವಿಶೇಷ ಹೆಮ್ಮೆಯ ಸಂಗತಿಯೂ ಇಲ್ಲಿದೆ. ರಾತ್ರಿ-ಹಗಲೆನ್ನದೆ ನಿತ್ಯವೂ ಒಂದಲ್ಲ ಒಂದು ಸಭೆ, ಮಂದಿರ ನಿರ್ಮಾಣ ಕಾರ್ಯದಲ್ಲಿ ಸಣ್ಣ ಲೋಪವೂ ಆಗದಂತೆ ನೋಡಿಕೊಳ್ಳುವುದು, ಕಲಾವಿದರು, ಕೆತ್ತನೆಕಾರರ ಜತೆ ನಿರಂತರ ಮಾತುಕತೆ-ಚರ್ಚೆ, ಪುರುಸೊತ್ತಿಲ್ಲದೆ ಬರುವ ಫೋನ್ ಕರೆಗಳು… ಈ ಎಲ್ಲಾ ಕೆಲಸ, ಸವಾಲುಗಳನ್ನು ತದೇಕಚಿತ್ತದಿಂದ ನಿರ್ವಹಿಸುತ್ತಾ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರು ಕನ್ನಡಿಗರಾದ ಗೋಪಾಲ ಮಹಾಬಲೇಶ್ವರ ಭಟ್ (ಗೋಪಾಲ್ ನಾಗರಕಟ್ಟೆ) ಅವರು. ವಿಶ್ವ ಹಿಂದೂ ಪರಿಷತ್​ನ (ವಿಹಿಂಪ) ಕೇಂದ್ರೀಯ ಕಾರ್ಯದರ್ಶಿಯಾಗಿರುವ ನಾಗರಕಟ್ಟೆ ಅವರು, ಸಂಘಟನೆಯಲ್ಲಿ ಗೋಪಾಲ್ ಜೀ ಎಂದೇ ಪ್ರಸಿದ್ಧಿಯಾಗಿದ್ದಾರೆ.

    2020ರ ಫೆಬ್ರವರಿ 28ರಿಂದ ಅಯೋಧ್ಯೆಯಲ್ಲಿ ವಾಸ್ತವ್ಯ ಹೂಡಿರುವ ಅವರು, ‘ಭಗವಾನ್ ಶ್ರೀರಾಮ ಸೇವೆ ಮಾಡುವ ಭಾಗ್ಯ ನನಗೆ ಸಿಕ್ಕಿರುವುದಕ್ಕೆ ಧನ್ಯನಾಗಿದ್ದೇನೆ’ ಎನ್ನುತ್ತಾ ತನು-ಮನವನ್ನು ಈ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

    ‘ಉತ್ತರ ಕನ್ನಡದ ಸಿದ್ಧಾಪುರದ ಹೊಸ್ತೋಟದಲ್ಲಿರುವ ಸಾಧಾರಣ ಕುಟುಂಬದಲ್ಲಿ ಜನಿಸಿ ದಕ್ಷಿಣದಿಂದ ಉತ್ತರದ ಅಯೋಧ್ಯಾ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅವಕಾಶ ದೊರೆತಿರುವುದು ನಮ್ಮ ಕುಟುಂಬದ ಭಾಗ್ಯ. ಇದರಲ್ಲೇ ನಾವು ಧನ್ಯತೆಯನ್ನು ಕಂಡಿದ್ದೇವೆ. ಶ್ರೀರಾಮನ ಸೇವೆ ಈತನಿಂದ ಪರಿಪೂರ್ಣವಾಗಿ ನೆರವೇರಲಿ ಎಂದು ನಮ್ಮ ಆರಾಧ್ಯ ದೇವರಲ್ಲಿ ಬೇಡಿಕೊಳ್ಳುತ್ತೇವೆ’ ಎಂದು ಗೋಪಾಲ್ ಅವರ ಅಣ್ಣ ನಾರಾಯಣ ಮಹಾಬಲೇಶ್ವರ ಭಟ್ ಸಂತಸ ಹಂಚಿಕೊಳ್ಳುತ್ತಾರೆ. ನಾಗರಕಟ್ಟೆ ಎನ್ನುವುದು ಅವರ ಊರಿನ ಹೆಸರಲ್ಲ. ಅವರ ಮನೆ ಬಳಿ ಇರುವ ಕಟ್ಟೆಗೆ ನಾಗರಕಟ್ಟೆ ಎಂಬ ಹೆಸರಿರುವುದರಿಂದ ಅವರ ಕುಟುಂಬವೂ ನಾಗರಕಟ್ಟೆ ಕುಟುಂಬ ಎಂದೇ ಗುರುತಿಸಿಕೊಂಡಿದೆ ಎಂದು ಗೋಪಾಲ್ ಜೀ ಜತೆ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವಿಹಿಂಪದ ಯುವ ಕಾರ್ಯಕರ್ತ ಸೋಮಶೇಖರ್ ಮಾಹಿತಿ ನೀಡುತ್ತಾರೆ.

    ಮಹಾಬಲೇಶ್ವರ ಭಟ್ ಮತ್ತು ಅನ್ನಪೂರ್ಣಶ್ರೀ ದಂಪತಿಯ 7ನೇ ಪುತ್ರರಾದ ಗೋಪಾಲ್ ನಾಗರಕಟ್ಟೆ, ಭೌತಶಾಸ್ತ್ರದಲ್ಲಿ ಎಂ.ಎಸ್ಸಿ. ಓದಿದ್ದರೂ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಆರ್​ಎಸ್​ಎಸ್​ನ ಕರ್ನಾಟಕ ಪ್ರಾಂತ ಪ್ರಚಾರಕರಾಗಿ, ವಿಶ್ವ ಹಿಂದೂ ಪರಿಷತ್​ನ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳನ್ನು ಒಳಗೊಂಡು ಬೆಂಗಳೂರು ಕೇಂದ್ರದ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ವಿಹಿಂಪದ ರಾಜಸ್ತಾನ, ಗುಜರಾತ್ ಸಂಘಟನೆಯ ಜವಾಬ್ದಾರಿ ನಿರ್ವಹಿಸಿರುವುದೂ ಗೋಪಾಲ್ ಜೀ ಹೆಗ್ಗಳಿಕೆ. ಸಂತ ಸಮಾಜ, ಸಂಸ್ಕೃತಿ, ಪರಂಪರೆಗಳ ರಕ್ಷಣೆಗಾಗಿ ಯುವಕರನ್ನು ಪ್ರೇರೇಪಿಸಿರುವ ಅವರು, ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಬಿಜೆಪಿ ಮತ್ತು ಆರ್​ಎಸ್​ಎಸ್​ನ ವರಿಷ್ಠ ವರ್ಗಕ್ಕೂ ಆಪ್ತರೆನಿಸಿಕೊಂಡಿದ್ದಾರೆ.

    ಗೋಪಾಲನಿಗೆ ವಿದ್ಯಾರ್ಥಿಯಾಗಿದ್ದಾಗಲೇ ಆರ್​ಎಸ್​ಎಸ್​ನ ಪ್ರಭಾವ ಉಂಟಾಗಿತ್ತು. ಬೆಳಗ್ಗೆದ್ದು ಸೂರ್ಯ ನಮಸ್ಕಾರ, ಧ್ಯಾನ ಮಾಡುತ್ತಿದ್ದ. ರುದ್ರ ಪಾಠವನ್ನೂ ಕಲಿತಿದ್ದ. ಆತ ಶುಭ್ರವಸ್ತ್ರ ಧರಿಸುವ ಬ್ರಹ್ಮಚಾರಿ. ದೇಶ, ಧರ್ಮಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾನೆ. ತನಗಾಗಿ ಏನೂ ಮಾಡಲಿಲ್ಲ. ಸೇವೆಯಿಂದ ಮುಕ್ತಿ ಸಾಧ್ಯವೆಂದು ಶ್ರುತಿ ವಚನಗಳಲ್ಲಿ ಹೇಳಿರುವುದನ್ನು ನಿಷ್ಠೆಯಿಂದ ಅಳವಡಿಸಿಕೊಂಡಿದ್ದಾನೆ ಎಂದು ಮತ್ತೋರ್ವ ಸೋದರ ನಾರಾಯಣ ಭಟ್ಟ ನಾಗರಕಟ್ಟೆ ಹೇಳುತ್ತಾರೆ.

    ಎಲ್ಲಾ ಶಿಲೆಗಳಿಂದ ಮೂರ್ತಿ: ಗರ್ಭಗೃಹದಲ್ಲಿ ಪ್ರತಿಷ್ಠಾಪಿಸುವ ರಾಮಲಲ್ಲಾನ ವಿಗ್ರಹ ನಿರ್ವಣಕ್ಕೆ ನೇಪಾಳದ ಗಂಡಕಿ ನದಿ ತಟದಿಂದ 2 ಶಿಲೆ, ಕರ್ನಾಟಕದ ಕಾರ್ಕಳದ ಕೖಷ್ಣ ಶಿಲೆ, ರಾಜಸ್ತಾನದ ಶಿಲೆ ಸೇರಿ ಒಟ್ಟು 4 ಕಡೆಗಳಿಂದ 12 ಶಿಲೆಗಳನ್ನು ಅಯೋಧ್ಯೆಗೆ ತರಿಸಿಕೊಳ್ಳಲಾಗಿದೆ. ಮತ್ತೆರಡು ಶಿಲೆಗಳು ಅಯೋಧ್ಯೆಗೆ ಬರಬೇಕಿದೆ. ಈ ಎಲ್ಲಾ ಶಿಲೆಗಳಿಂದ ಪ್ರತ್ಯೇಕವಾಗಿ 5 ಅಡಿ 2 ಇಂಚಿನ ರಾಮಲ್ಲಾನ ವಿವಿಧ ಮೂರ್ತಿಗಳನ್ನು ಕೆತ್ತಲಾಗುವುದು. ಯಾವ ಮೂರ್ತಿ ಸುಂದರ ಮತ್ತು ಸೂಕ್ತವಾಗಿ ಕಾಣುತ್ತದೆಯೋ ಅದನ್ನೇ ಅಂತಿಮಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.

    ಶ್ರೀರಾಮನ ಸೇವೆಗೆ ಗೋಪಾಲನ ಪಣ: ಇಂದು ರಾಮನವಮಿ..

    • ರಾಮಮಂದಿರ ನಿರ್ಮಾಣ ಕಾರ್ಯದ ಕುರಿತು ಹೇಳುವುದಾದರೆ…

    ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಗರ್ಭಗೃಹದ ಕಲ್ಲುಗಳು 12 ಅಡಿ ಮೇಲಕ್ಕೆ ಬಂದಿವೆ. ಮಂದಿರ ನಿರ್ಮಾಣ ಕೆಲಸ ಇನ್ನೂ 6 ಅಡಿ ಮೇಲಕ್ಕೆ ತಲುಪಿದ ಮೇಲೆ, ಬೀಮ್ ಮೇಲಿನ ತಾರಸಿ ಹಾಕಿ ಕಲ್ಲಿನ ಕೆಲಸ, ಗರ್ಭಗೃಹ, ನಮಸ್ಕಾರ ಮಂಟಪ ಏಪ್ರಿಲ್ ಅಂತ್ಯದೊಳಗೆ ಮುಗಿಸಲಿದ್ದೇವೆ. ಫ್ಲೋರಿಂಗ್, ವಿದ್ಯುದೀಕರಣ ಕಾರ್ಯ ಡಿಸೆಂಬರ್ ವೇಳೆಗೆ ಮುಕ್ತಾಯಗೊಳಿಸಿ ಸಜ್ಜಾಗಲಿದ್ದೇವೆ. ಕೇಂದ್ರ ಗೃಹ ಮಂತ್ರಿಗಳು ಜನವರಿ ಎಂದಿದ್ದಾರೆ. ನಾವು 2024ರ ಮಕರ ಸಂಕ್ರಾಂತಿಯ ನಂತರದ ಉತ್ತಮ ಮುಹೂರ್ತದಲ್ಲಿ ಶ್ರೀರಾಮನಿಗೆ ಪ್ರಾಣಪ್ರತಿಷ್ಠೆ ಮಾಡಲು ಉದ್ದೇಶಿಸಿದ್ದೇವೆ.

    • ಗರ್ಭಗುಡಿಯಲ್ಲಿರುವ ರಾಮನ ಮೂರ್ತಿ ಕುರಿತು…

    ಗರ್ಭಗುಡಿಗೆ ಕೆಳಗೆ 70 ಅಡಿಯಿಂದ ಪೈಪ್ ಬಂದಿರುವುದನ್ನು ನೀವು ನೋಡಬಹುದು. ಇಲ್ಲಿ ಕಾಣುತ್ತಿರುವ ನೆಲದಿಂದ ಸುಮಾರು 2.5-3 ಅಡಿ ಎತ್ತರದಲ್ಲಿ 5 ವಯಸ್ಸು ಅಂದಾಜಿನ ಬಾಲರಾಮನ ಮೂರ್ತಿಯನ್ನು (ರಾಮಲಲ್ಲಾ) ಕೂರಿಸಲಾಗುತ್ತದೆ. ನಾಲ್ಕರಿಂದ ಐದು ಅಡಿ ಎತ್ತರದ ನಿಂತಿರುವ ಮೂರ್ತಿಯನ್ನೂ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಮೊದಲನೇ ಮಹಡಿಯಲ್ಲಿ ರಾಮನ ಪಟ್ಟಾಭಿಷೇಕದ ಚಿತ್ರಣವಿರಲಿದೆ.

    • ಈಗ ಇಲ್ಲಿ ಸಣ್ಣ ಗುಡಿಯಲ್ಲಿ ಪೂಜೆ ಮಾಡುತ್ತಿರುವ ಬಾಲರಾಮನನ್ನೇ ಗರ್ಭಗೃಹದಲ್ಲಿ ಕೂರಿಸುತ್ತೀರಾ?

    ಇಲ್ಲ. ಈಗಿರುವ ರಾಮನ ಮೂರ್ತಿ ಬಹಳ ಚಿಕ್ಕದು. ಹೀಗಾಗಿ ಇಲ್ಲಿ ಕೂರಿಸುವ ಮೂರ್ತಿ ಅದಕ್ಕಿಂತ ದೊಡ್ಡ ಪ್ರಮಾಣದ್ದಾಗಿರುತ್ತದೆ.

    • ಸೀತಾಮಾತೆಯ ಮೂರ್ತಿ ಎಲ್ಲಿರುತ್ತದೆ?

    ಮೊದಲನೇ ಮಹಡಿಯಲ್ಲಿ ರಾಮ ಪರಿವಾರ, ರಾಮ ಪಟ್ಟಾಭಿಷೇಕ, ರಾಮ ದರ್ಬಾರಿನ ದೃಶ್ಯಾವಳಿಯ ವೈಭವವಿರಲಿದೆ. ಅದರಲ್ಲಿ ರಾಮ, ಲಕ್ಷ್ಮಣ, ಶತ್ರುಘ್ನ, ಸೀತೆ ಮತ್ತು ಹನುಮನ ಮೂರ್ತಿಗಳಿರುತ್ತವೆ. ಗರ್ಭಗೃಹದಲ್ಲಿ ಬಾಲರಾಮ ಮಾತ್ರ ಇರಲಿದ್ದಾನೆ.

    • ಮಂದಿರ ನಿರ್ಮಾಣ ಕಾರ್ಯದಲ್ಲಿ ಎಷ್ಟು ಮಂದಿ ತೊಡಗಿಸಿಕೊಂಡಿದ್ದಾರೆ?

    ಸುಮಾರು 700 ಮಂದಿ ನಿರ್ಮಾಣ ಕಾರ್ಯದಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಾರೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಲಿದೆ. ರಾಜಸ್ತಾನದಲ್ಲಿ ಕಲ್ಲುಗಳ ಕೆತ್ತನೆ ಕಾರ್ಯದಲ್ಲಿ 1500 ಮಂದಿ ತೊಡಗಿಸಿಕೊಂಡಿದ್ದಾರೆ.

    • ರಾಮ ಮಂದಿರ ಹೊರತುಪಡಿಸಿ ಈ ಸಮುಚ್ಚಯದಲ್ಲಿ ಬೇರೆ ಏನೇನಿರಲಿದೆ?

    ಸುಪ್ರೀಂಕೋರ್ಟ್ ತೀರ್ಪಿನ ಅನುಸಾರ ಸಿಕ್ಕಿದ್ದ 66 ಎಕರೆ ಮಂದಿರ ಸಮುಚ್ಚಯದ ಹೊರತಾಗಿ ಅಕ್ಕಪಕ್ಕದ ಕಟ್ಟಡ, ಜಮೀಗಳನ್ನು ನಾವು ಖರೀದಿ ಮಾಡಿದ್ದೇವೆ. ಅವುಗಳನ್ನು ನೆಲಸಮಗೊಳಿಸುವ ಕೆಲಸವೂ ಆಗಲಿದೆ. ಮಂದಿರದ ಹೊರಗಡೆ 75 ಫೀಟ್ ಅಂತರದಲ್ಲಿ ಪ್ರಾಕಾರ ಬರಲಿದೆ. ಪ್ರಾಕಾರ ಎಂದರೆ ಹೊರಗಿನಿಂದ ಗೋಡೆ ಇರಲಿದ್ದು, ಒಳಗಿನಿಂದ ನಡೆದುಕೊಂಡು ಹೋಗುವ ವ್ಯವಸ್ಥೆ. ಪ್ರದಕ್ಷಿಣೆ ಮಾರ್ಗ ಎನ್ನಬಹುದು. 750 ಮೀಟರ್ ಸುತ್ತಳತೆಯಲ್ಲಿ ಅದರಿಲಿದ್ದು, ಅಲ್ಲಿ 6 ದೇವಸ್ಥಾನಗಳಿರಲಿವೆ. ಶಿವ, ಗಣೇಶ, ಸೂರ್ಯ, ಅನ್ನಪೂರ್ಣ, ಭಗವತಿ ಮತ್ತು ಹನುಮಂತನ ಮೂರ್ತಿಗಳು ಅಲ್ಲಿ ಪ್ರತಿಷ್ಠಾಪನೆಗೊಳ್ಳಲಿವೆ. ಋಷಿ ಪರಿಸರವೂ ನಿರ್ವಣಗೊಳ್ಳಲಿದ್ದು, ಅಲ್ಲಿ ವಾಲ್ಮೀಕಿ, ವಿಶ್ವಾಮಿತ್ರ, ವಸಿಷ್ಠ, ಶಬರಿ ಸೇರಿ ಅನೇಕರ ಮೂರ್ತಿಗಳಿರಲಿವೆ. ಇವುಗಳೆಲ್ಲವೂ ಸುಮಾರು 10 ಎಕರೆ ಭೂಮಿಯಲ್ಲಿ ನಿರ್ವಣಗೊಳ್ಳುತ್ತಿವೆ.

    • ಮಂದಿರ ನಿರ್ಮಾಣಕ್ಕೆ ಹತ್ತಾರು ಸಂಘರ್ಷಗಳು ನಡೆದಿವೆ. ಮಂದಿರ ನಿರ್ವಣದ ಉಸ್ತುವಾರಿ ನಿಮ್ಮ ಹೆಗಲಿಗೇರಿರುವುದಕ್ಕೆ ಏನನಿಸುತ್ತಿದೆ?

    ಇದು ನನ್ನ ಜೀವನದ ಸೌಭಾಗ್ಯ. ರಾಮನ ಸೇವೆ ನನ್ನ ಕರ್ತವ್ಯ ಎಂದುಕೊಂಡಿದ್ದೇನೆ.

    • ಇಂಥದ್ದೊಂದು ದೈತ್ಯ ಸವಾಲು ಮತ್ತು ಒತ್ತಡವನ್ನು ಹೇಗೆ ನಿಭಾಯಿಸುತ್ತಿದ್ದೀರಿ?

    ನನಗೆ ಒತ್ತಡ ಅನಿಸುತ್ತಿಲ್ಲ. ಭಗವಾನ್ ಶ್ರೀರಾಮನೇ ಶಕ್ತಿ ತುಂಬಿ ಕೆಲಸ ಮಾಡಿಸುತ್ತಿದ್ದಾನೆ. ನಾವು ಕೇವಲ ಸೇವಕರಷ್ಟೇ. ರಾಮನ ಇಚ್ಛೆ ಪ್ರಕಾರವೇ ಎಲ್ಲವೂ ನಡೆಯುತ್ತಿದೆ.

    • ನಿರ್ಮಾಣ ಕಾರ್ಯಕ್ಕೆ ಒಟ್ಟು ಎಷ್ಟು ಕೋಟಿ ಖರ್ಚಾಗುತ್ತಿದೆ?

    ಎಲ್ಲಾ ಕೆಲಸ ಮುಗಿಯುವ ಹೊತ್ತಿಗೆ ರೂ 2000 ಕೋಟಿ ಖರ್ಚಾಗಬಹುದು ಎಂಬುದು ನಮ್ಮ ಅಂದಾಜು.

    • ಮೂರು ಅಂತಸ್ತುಗಳಲ್ಲಿ ಎಷ್ಟು ಕಂಬಗಳಿರಲಿವೆ?

    ನೆಲ ಮಹಡಿಯಲ್ಲಿ 168, ಒಂದನೇ ಮಹಡಿಯಲ್ಲಿ 130, ಇದರ ಮೇಲ್ಗಡೆಗೆ 70 ಕಂಬಗಳು ಬರಲಿದ್ದು, ಹೆಚ್ಚು ಕಡಿಮೆ 400 ಕಂಬಗಳಿರಲಿವೆ.

    • ಮಂದಿರ ನಿರ್ವಣದ ಬಗ್ಗೆ ಭಕ್ತರಲ್ಲೇನೋ ಖುಷಿಯಿದೆ. ಆದರೆ, ಮೂಲಸೌಕರ್ಯ ವೃದ್ಧಿ ಹೆಸರಲ್ಲಿ ಮನೆ ನೆಲಸಮ ಮಾಡಿದ್ದಾರೆ ಮತ್ತು ಸೂಕ್ತ ಪರಿಹಾರ ನೀಡಿಲ್ಲ ಎಂಬ ಆಕ್ರೋಶ ಕೆಲ ಸ್ಥಳೀಯರಲ್ಲಿ ಕಾಣುತ್ತಿದೆಯಲ್ಲ..?

    ಇದು ಸರ್ಕಾರದ ಕೆಲಸ. ಯಾವುದೇ ಒಂದು ಒಳ್ಳೆಯ ಕೆಲಸ ಆಗಬೇಕು ಎಂದರೆ ಕೆಲವರಿಗೆ ತೊಂದರೆ ಆಗುತ್ತದೆ. ತೊಂದರೆ ಇಲ್ಲದೆ ವಿಸ್ತಾರ ಸಾಧ್ಯವಿಲ್ಲ. ನೀವೇ ನೋಡಿದಂತೆ ಇಲ್ಲಿ ಚಿಕ್ಕಚಿಕ್ಕ ರಸ್ತೆಗಳಿವೆ. ಲಕ್ಷಾಂತರ ಮಂದಿ ಭಕ್ತರು ಬರುವಾಗ ಈ ರಸ್ತೆಗಳಲ್ಲಿ ವಾಹನ ಸಂಚಾರ ಸಾಧ್ಯವಿದೆಯೇ? ಅನೇಕ ಕಡೆ ಭೂ ಒತ್ತುವರಿಯೂ ಆಗಿದೆ. ಮನೆ ಕಟ್ಟುತ್ತಾ ಎಷ್ಟೋ ಮಂದಿ ತಮ್ಮ ಗಡಿ ದಾಟಿ ಮುಂದೆ ಬಂದಿದ್ದಾರೆ. ವಿಸ್ತಾರಕ್ಕೆ ನೆಲಸಮ ಅನಿವಾರ್ಯ. ಇದೊಂದು ರೀತಿಯ ಪ್ರಸವ ವೇದನೆ.

    • ಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ದೇಶ ಮತ್ತು ಮುಖ್ಯವಾಗಿ ಕನ್ನಡಿಗ ಭಕ್ತರಿಗೆ ನಿಮ್ಮ ಸಂದೇಶ?

    ಮಂದಿರ ನಿರ್ಮಾಣ ಕಾರ್ಯ ಹೇಗಾಗುತ್ತಿದೆ ನೋಡಲು ಜನ ಬರಬೇಕು. ಮಂದಿರ ನಿರ್ವಣಗೊಂಡ ಬಳಿಕವೂ ಭಕ್ತ ಸಮೂಹ ಈ ನಗರಕ್ಕೆ ಬರುತ್ತಿರಬೇಕು ಎನ್ನುವುದೇ ನನ್ನ ಸಂದೇಶ.

    ಪ್ರಾಮಾಣಿಕ ಎಸ್​ಐ ಎಂದು ಗಣರಾಜ್ಯೋತ್ಸವದಂದು ಪ್ರಶಸ್ತಿ ಪಡೆದಿದ್ದಾಕೆ 5 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ಲು!

    ಪ್ಯಾನ್​-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts