More

    ಗೂಗಲ್ ಉದ್ಯೋಗಿ ಸಿ.ಡಿ. ವಿಜಯಕುಮಾರ್ ಈಗ ಕೃಷಿಕ!

    | ಆರ್.ಶ್ರೀನಿವಾಸ್ ಉಳ್ಳಾವಳ್ಳಿ ಚನ್ನರಾಯಪಟ್ಟಣ

    ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಯುವಕ ಈಗ ಸಾವಯವ ಕೃಷಿಕನಾಗಿ ಯಶ ಕಾಣುತ್ತಿದ್ದಾರೆ. ತಾಲೂಕಿನ ಬಾಗೂರು ಹೋಬಳಿಯ ಚನ್ನೇನಹಳ್ಳಿ ಗ್ರಾಮದ ಧನಂಜಯ ಅವರ ಮಗ 23 ವರ್ಷದ ಸಿ.ಡಿ.ವಿಜಯಕುಮಾರ್ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟು ಈಗ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಬಿಕಾಂ ವ್ಯಾಸಂಗ ಮುಗಿಸಿದ ವಿಜಯಕುಮಾರ್ ಬೆಂಗಳೂರಿನಲ್ಲಿ ಪ್ರತಿಷ್ಠಿತ ಗೂಗಲ್ ಕಂಪನಿಯ ಟ್ರಾನ್ಸ್​ಪೋರ್ಟ್ ವಿಭಾಗದಲ್ಲಿ ಸೂಪರ್​ವೈಸರ್ ಆಗಿದ್ದರು. ಕೈತುಂಬ ಸಂಬಳವೂ ಬರುತ್ತಿತ್ತು. ಕಳೆದ ವರ್ಷ ಕರೊನಾ ಲಾಕ್​ಡೌನ್ ಆದ ಪರಿಣಾಮ ಊರಿಗೆ ಬಂದು ನೆಲೆಸಿದರು. ಸುಮ್ಮನೆ ಕುಳಿತು ಕಾಲಹರಣ ಮಾಡಲು ಇಷ್ಟವಿಲ್ಲದೆ ಕೃಷಿಯಲ್ಲಿ ತೊಡಗಿದರು. ಮೊದಲಿಗೆ ತಂದೆಯ 5 ಎಕರೆ ಜಮೀನಿನಲ್ಲಿದ್ದ 250 ತೆಂಗಿನ ಮರಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿದರು. ಬಳಿಕ 1 ಸಾವಿರ ಅಡಕೆ ಸಸಿಗಳನ್ನು ನಾಟಿ ಮಾಡಿಸಿದರು. 750 ಬಾಳೆ, 50 ಸಪೋಟ, 50 ಮಾವಿನ ಸಸಿಗಳನ್ನು ನೆಟ್ಟು ಹನಿ ನೀರಾವರಿ ಪದ್ಧತಿ ಅಳವಡಿಸಿದ್ದು, ಕೋಳಿ ಹಾಗೂ ಕೊಟ್ಟಿಗೆ ಗೊಬ್ಬರ ಮಾತ್ರ ಬಳಸಲಾಗುತ್ತಿದೆ. ಈಗಾಗಲೆ ಬಾಳೆ ಕಟಾವು ಹಂತಕ್ಕೆ ಬಂದಿದೆ. ಜತೆಗೆ ರಾಗಿ, ಮೆಣಸಿನ ಗಿಡಗಳು, ಇತರ ಬೆಳೆಗಳಿಗೂ ಸಾವಯವ ಪದ್ಧತಿ ಅಳವಡಿಸಿಕೊಂಡು ಸಮಗ್ರ ಕೃಷಿ ಮಾಡುತ್ತಿದ್ದಾರೆ.

    ಕುಕ್ಕುಟೋದ್ಯಮ ಪ್ರಾರಂಭ: ತೋಟದಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ 12030 ವಿಸ್ತೀರ್ಣದ ಕಟ್ಟಡ ನಿರ್ವಿುಸಿ ನಾಟಿ ಕೋಳಿ ಫಾರಂ ತೆರೆದಿದ್ದು, ಕುಕ್ಕುಟೋದ್ಯಮ ಪ್ರಾರಂಭಿಸಲಾಗಿದೆ. 2 ಸಾವಿರ ನಾಟಿ ಕೋಳಿಗಳನ್ನು ಸಾಕಲಾಗಿದ್ದು, ಎರಡೂವರೆ ತಿಂಗಳ ಹಿಂದೆ 40 ರೂ. ದರದಲ್ಲಿ ತಂದಿದ್ದ ಕೋಳಿ ಮರಿಗಳು ಈಗ ಬೆಳೆದಿವೆ. ಕೆಜಿಗೆ 250ರಿಂದ 300 ರೂ. ಬೆಲೆಯಲ್ಲಿ ಖರೀದಿಸಲು ಮುಂದಾಗಿದ್ದಾರೆ. ಮಂಗಳೂರು, ಶಿವಮೊಗ್ಗ ಹಾಗೂ ಮೈಸೂರು ವ್ಯಾಪ್ತಿಯ ವರ್ತಕರು ಈಗಾಗಲೆ ಬೇಡಿಕೆ ಇಟ್ಟಿದ್ದಾರೆ.

    ಸಾವಯವ ಕೃಷಿ ಅಳವಡಿಕೆ ಉತ್ತಮ ಬೆಳವಣಿಗೆಯಾಗಿದೆ. ಚನ್ನೇನಹಳ್ಳಿ ಗ್ರಾಮದ ಯುವಕ ವಿಜಯಕುಮಾರ್ ಸಾವಯವ ಕೃಷಿಗೆ ಆಸಕ್ತಿ ತೋರಿ ತೊಡಗಿಕೊಂಡಿರುವುದು ಯುವಕರಿಗೆ ಮಾದರಿ.

    | ಜಿ.ವಿ.ದಿನೇಶ್ ಕೃಷಿ ಅಧಿಕಾರಿ, ಬಾಗೂರು ರೈತ ಸಂಪರ್ಕ ಕೇಂದ್ರ

    ಗೂಗಲ್ ಉದ್ಯೋಗಿ ಸಿ.ಡಿ. ವಿಜಯಕುಮಾರ್ ಈಗ ಕೃಷಿಕ!ಚಿಕ್ಕವಯಸ್ಸಿನಿಂದಲೂ ಕೃಷಿ ಕಡೆ ಆಸಕ್ತಿ ಇತ್ತು. ರಾಸಾಯನಿಕ ಗೊಬ್ಬರ ಬಳಕೆಯಿಂದ ಬೆಳೆದಿರುವ ಆಹಾರ ಪದಾರ್ಥಗಳ ಸೇವನೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದೇನೆ. ಬೆಳೆಗಳು ಕಟಾವಿನ ಹಂತಕ್ಕೆ ಬಂದಿದೆ. ಉತ್ತಮ ಲಾಭ ಸಿಗುವ ನಿರೀಕ್ಷೆ ಇದೆ.

    |ಸಿ.ಡಿ.ವಿಜಯಕುಮಾರ್ ಯುವ ಸಾವಯವ ಕೃಷಿಕ, ಚನ್ನೇನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts