More

    ‘ಉದ್ಯೋಗಿನಿ’ ಸಂಖ್ಯೆ ಏರಿಕೆ

    – ಗೋಪಾಲಕೃಷ್ಣ ಪಾದೂರು ಉಡುಪಿ

    ಜಿಲ್ಲೆಯಲ್ಲಿ ಉದ್ಯೋಗಿನಿ ಯೋಜನೆಯಲ್ಲಿ ಸ್ವ-ಉದ್ಯೋಗ ತರಬೇತಿ ಪಡೆದು ಉದ್ಯಮಗಳನ್ನು ಆರಂಭಿಸುವ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆಯಾಗಿದೆ. 2017-18ರಲ್ಲಿ 48 ಫಲಾನುಭವಿಗಳು ಪ್ರಯೋಜನ ಪಡೆದರೆ, 2019-20ನೇ ಸಾಲಿನಲ್ಲಿ ಸರ್ಕಾರದ ಸಹಾಯಧನ ಪಡೆದ ಮಹಿಳೆಯರ ಸಂಖ್ಯೆ 70. 2017-18ರಲ್ಲಿ 16.5 ಲಕ್ಷ ರೂ. ಹಾಗೂ 2018-19ರಲ್ಲಿ 31.3 ಲಕ್ಷ ರೂ.ಸಹಾಯಧನ ವಿತರಿಸಲಾಗಿದೆ.

    ಕಿರು ಸಾಲ ಯೋಜನೆಯಲ್ಲಿ ಸ್ತ್ರೀ ಶಕ್ತಿ ಗುಂಪುಗಳು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು 2 ಲಕ್ಷ ರೂ.ಬಡ್ಡಿ ರಹಿತ ಸಾಲ ನೀಡಲಾಗುತ್ತಿದ್ದು, 2019-20ನೇ ಸಾಲಿನಲ್ಲಿ 5 ಸ್ತ್ರೀ ಶಕ್ತಿ ಗುಂಪುಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. 2017-18ನೇ ಸಾಲಿನಲ್ಲಿ 8 ಗುಂಪುಗಳಿಗೆ 16 ಲಕ್ಷ ರೂ., ಹಾಗೂ 2018-19ನೇ ಸಾಲಿನಲ್ಲಿ 5 ಗುಂಪುಗಳಿಗೆ 10 ಲಕ್ಷ ರೂ. ಸಾಲ ವಿತರಿಸಲಾಗಿತ್ತು.
    ಸಮೃದ್ಧಿ ಯೋಜನೆಯಲ್ಲಿ 18 ರಿಂದ 60 ವಯೋಮಿತಿಯ ನಗರ ಹಾಗೂ ಗ್ರಾಮೀಣ ಪ್ರದೇಶದ ಬಿಪಿಎಲ್ ಕಾರ್ಡ್ ಹೊಂದಿರುವ ಬೀದಿ ಬದಿ ಮಹಿಳಾ ವ್ಯಾಪಾರಿಗಳಿಗೆ 10 ಸಾವಿರ ರೂ.ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಈ ವರ್ಷ 89 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 2017-18ರಲ್ಲಿ 48 ಮಹಿಳೆಯರಿಗೆ 4.80 ಲಕ್ಷ ರೂ. ಹಾಗೂ 2018-19ರಲ್ಲಿ 82 ಮಹಿಳೆಯರಿಗೆ 8.20 ಲಕ್ಷ ರೂ. ನೀಡಲಾಗಿದೆ. ಧನಶ್ರೀ ಯೋಜನೆಯಲ್ಲಿ 18 ರಿಂದ 60 ವಯೋಮಿತಿಯ ಎಚ್‌ಐವಿ ಸೋಂಕಿತ ಮಹಿಳೆಯರು ಸ್ವ-ಉದ್ಯೋಗ ಕೈಗೊಳ್ಳಲು 25 ಸಾವಿರ ರೂ. ಬಡ್ಡಿ ರಹಿತ ನೇರ ಸಾಲ ಹಾಗೂ 25 ಸಾವಿರ ರೂ. ಸಹಾಯಧನ ವಿತರಿಸಲಾಗುತ್ತಿದ್ದು, ಈ ವರ್ಷ 21 ಫಲಾನುಭವಿಗಳು ಆಯ್ಕೆಯಾಗಿದ್ದಾರೆ.

    2017-18ರಲ್ಲಿ 38 ಮಂದಿಗೆ 19 ಲಕ್ಷ ರೂ, 18-19ರಲ್ಲಿ 21 ಮಹಿಳೆಯರಿಗೆ 9.50 ಲಕ್ಷ ರೂ. ನೀಡಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಲ್ಲಿ ಸ್ವ-ಉದ್ಯೋಗ ಕೈಗೊಳ್ಳಲು 25 ಸಾವಿರ ರೂ. ಬಡ್ಡಿ ರಹಿತ ನೇರ ಸಾಲ ಹಾಗೂ 25 ಸಾವಿರ ರೂ. ಸಹಾಯಧನಕ್ಕೆ ಈ ವರ್ಷ 12 ಫಲಾನುಭವಿಗಳನ್ನು ಆರಿಸಲಾಗಿದೆ. 2017-18ರಲ್ಲಿ 5 ಮಂದಿಗೆ 2.5 ಲಕ್ಷ ರೂ. ಹಾಗೂ 18-19ರಲ್ಲಿ 8 ಮಂದಿಗೆ 4 ಲಕ್ಷ ರೂ.ವಿತರಿಸಲಾಗಿದೆ.

    ಏನಿದು ಯೋಜನೆ?: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಮಹಿಳೆಯರಿಗಾಗಿ ಉದ್ಯೋಗಿನಿ ಯೋಜನೆ, ಸಮೃದ್ಧಿ ಯೋಜನೆ, ಕಿರು ಸಾಲ ಯೋಜನೆ, ಧನಶ್ರೀ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತ ಪುನರ್ವಸತಿ ಯೋಜನೆ ಜಾರಿಗೆ ತರಲಾಗಿದೆ. ಉದ್ಯೋಗಿನಿ ಯೋಜನೆಯಲ್ಲಿ 18 ರಿಂದ 55 ವರ್ಷ ವಯಸ್ಸಿನ ಪರಿಶಿಷ್ಟ ಜಾತಿ ಮತ್ತು ಪಂಗಡದ 2 ಲಕ್ಷ ರೂ. ಆದಾಯ ಮಿತಿ ಹೊಂದಿರುವ ಮಹಿಳೆಯರಿಗೆ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಗರಿಷ್ಠ 3 ಲಕ್ಷ ಸಾಲಕ್ಕೆ ಶೇ.50 ಸಹಾಯಧನ ಹಾಗೂ ಇತರ ಸಮುದಾಯದ 1.50 ಲಕ್ಷದವರೆಗೆ ಆದಾಯ ಮಿತಿ ಹೊಂದಿರುವ ಮಹಿಳೆಯರಿಗೆ ಶೇ.30 ಸಹಾಯಧನ ನೀಡಲಾಗುತ್ತದೆ. ಆಯ್ಕೆಯಾದ ಫಲಾನುಭವಿಗಳಿಗೆ 6 ದಿನಗಳ ತರಬೇತಿಯೂ ಇದೆ. ಟೈಲರಿಂಗ್, ಬ್ಯುಟೀಷಿಯನ್, ಪರಂಪರಾಗತ ಗುಡಿ ಕೈಗಾರಿಕೆಗಳಲ್ಲಿ ತೊಡಗಿರುವ ಮಹಿಳೆಯರು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ.

    ಜಿಲ್ಲೆಯಲ್ಲಿ ಮಹಿಳಾ ಸಬಲೀಕರಣ ಯೋಜನೆಗಳಿಗೆ ಉತ್ತಮ ಸ್ಪಂದನೆ ಲಭಿಸುತ್ತಿದೆ. ಉದ್ಯೋಗಿನಿ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದ್ದು, ಈ ವರ್ಷ ನೂರಕ್ಕೂ ಅಧಿಕ ಮಹಿಳೆಯರಿಗೆ ವಿವಿಧ ಯೋಜನೆಗಳಲ್ಲಿ ಸೌಲಭ್ಯ ವಿತರಿಸಲಾಗಿದೆ.
    – ಚಂದ್ರಿಕಾ, ಯೋಜನಾಧಿಕಾರಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಉಡುಪಿ

    ದ.ಕ.ಜಿಲ್ಲೆಯಲ್ಲಿಯೂ ಯೋಜನೆ ಯಶಸ್ವಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯೋಗಿನಿ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದೆ. ಕಳೆದ ವರ್ಷ (2018- 19) ಜಿಲ್ಲೆಗೆ 61 ಮಂದಿಯ ಗುರಿ ಇದ್ದು, 52 ಮಂದಿ ಸೌಲಭ್ಯ ಪಡೆದಿದ್ದಾರೆ. ವಿವಿಧ ಕಾರಣಗಳಿಂದ ಒಂಬತ್ತು ಮಂದಿ ಬ್ಯಾಂಕಿನಲ್ಲಿ ಕ್ಲಿಯರೆನ್ಸ್ ಪಡೆಯಲು ವಿಫಲರಾಗಿದ್ದಾರೆ. ಈ ವರ್ಷ ಜಿಲ್ಲೆಗೆ 61 ಮಂದಿಯ ಗುರಿ ನಿಗದಿಪಡಿಸಲಾಗಿದೆ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ದ.ಕ.ಜಿಲ್ಲಾ ಅಭಿವೃದ್ಧಿ ನಿರೀಕ್ಷಕರು(ಪ್ರಭಾರ), ಯೋಜನಾಧಿಕಾರಿ ವಿನಯಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts