More

    ಬೆಳೆಗಾರರ ಕೈಹಿಡಿದ ಕಲ್ಲಂಗಡಿ

    ರವೀಂದ್ರ ಕೋಟ
    ಕೋಟ ಹೋಬಳಿ ಪ್ರದೇಶದಲ್ಲಿ ಬೆಳೆಯಲಾದ ಬಹು ಮಿಶ್ರಿತ ಬೆಳೆಗಳಲ್ಲಿ ಕಲ್ಲಂಗಡಿ ಬೆಳೆ ಈ ಬಾರಿ ಬೆಳೆಗಾರನಿಗೆ ಸಂತೋಷ ನೀಡಿದೆ.
    ಎರಡು ವರ್ಷಗಳಲ್ಲಿ ಕೋವಿಡ್ ಕಾರಣದಿಂದ ಕಲ್ಲಂಗಡಿ ಹಣ್ಣು ಎಕ್ಸಪೋರ್ಟ್ ಆಗದೆ ಸ್ಥಳೀಯವಾಗಿ 10 ರೂ. ದರದಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗಿತ್ತು. ಈ ಬಾರಿ ವಾತಾವರಣದ ಏರುಪೇರಿನ ನಡುವೆ ಶೇಂಗಾ ಬೆಳೆ ರೈತರಿಗೆ ಕೈ ಕೊಟ್ಟರೂ ಕೆಲವು ಭಾಗಗಳಲ್ಲಿ ಬೆಳೆದ ಕಲ್ಲಂಗಡಿ ಬೆಳೆ ಉತ್ತಮ ದರದೊಂದಿಗೆ ಬೆಳೆಗಾರರ ಕೈಹಿಡಿದಿದೆ. ಸಾಮಾನ್ಯವಾಗಿ ಬೇಸಿಗೆಯ ಬೇಗೆ ಬಗೆಹರಿಸುವ ಕಲ್ಲಂಗಡಿ ಹಣ್ಣು ಹಿಂದಿನ ಎರಡು ವರ್ಷ ಬೆಳೆಗಾರರಿಗೆ ನಷ್ಟ ಉಂಟು ಮಾಡಿದ್ದರೂ ಈ ಬಾರಿ ಆದಾಯ ತಂದುಕೊಡುತ್ತಿದೆ. ಆದರೂ ಅಕಾಲಿಕ ಮಳೆಯ ಭಯ ಕಲ್ಲಂಗಡಿ ಬೆಳೆಗಾರರನ್ನೂ ಕಾಡುತ್ತಿದ್ದು ಮಳೆ ಜೋರಾದರೆ ಬೆಳೆಯ ಮೇಲೆ ಪರಿಣಾಮ ಬೀರಬಹುದೆಂಬ ಆತಂಕ ಕಾಡುತ್ತಿದೆ.
    ಕೋಟ ಹೋಬಳಿ ಭಾಗದಲ್ಲೇ ಜಾಸ್ತಿ: ಕೋಟ ಹೋಬಳಿ ಪ್ರದೇಶದಲ್ಲಿ ಸಾಕಷ್ಟು ಜನ ಕಲ್ಲಂಗಡಿ ಬೆಳೆಯುತ್ತಾರೆ. ಅದರಲ್ಲಿ ಗಿಳಿಯಾರಿನ ಭೋಜ ಪೂಜಾರಿ, ಮಣೂರು ಪಡುಕರೆಯ ಶಿವ ಪೂಜಾರಿ, ರತ್ನಾಕರ ಹೊಳ್ಳ, ರೈತ ಧ್ವನಿ ಸಂಘದ ಜಯರಾಮ ಶೆಟ್ಟಿ, ತಿಮ್ಮ ಪೂಜಾರಿ, ಕಾರ್ಕಡದ ರಾಜು ಪೂಜಾರಿ,ಪಾರಂಪಳ್ಳಿಯ ರಘು ಮಧ್ಯಸ್ಥ, ಕೋಡಿ ಕನ್ಯಾಣದ ಕೃಷ್ಣ ಪೂಜಾರಿ, ಕೊರಗ ಪೂಜಾರಿ, ಸಾಸ್ತಾನ ಪಾಂಡೇಶ್ವರದ ಕೃಷ್ಣ ಮರಕಾಲ, ಸುಧಾಕರ ಮೊಗವೀರ, ಉಪ್ಲಾಡಿಯ ಸುರೇಶ್ ಪೂಜಾ ಮೊದಲಾದವರು ಹೊಲಗಳಲ್ಲಿ ಕಲ್ಲಂಗಡಿ ಬೆಳೆದು ಈ ಬಾರಿಯ ಲಾಭದಾಯಕ ಬೆಳೆಯಾಗಿ ಪರಿವರ್ತಿಸಿಕೊಂಡಿದ್ದಾರೆ.
    ಮಳೆಯ ಭಯ: ಕೋಟ ಹೋಬಳಿ ಭಾಗದಲ್ಲಿ ಕಲ್ಲಂಗಡಿ ಬಂಪರ್ ಬೆಳೆ ಬಂದು ಉತ್ತಮ ದರ ಸಿಕ್ಕಿದರೂ ಅಕಾಲಿಕ ಮಳೆಯಿಂದ ಬೆಳೆದಿರುವ ಉತ್ತಮ ಫಸಲು ನೆಲಕಚ್ಚುವ ಭಯ ರೈತರಲ್ಲಿದೆ. ಹೆಚ್ಚಿನ ಬೆಳೆಗಾರರು ಕೊಯ್ಲು ಮುಗಿಸಿದರೂ ಇನ್ನೂ ಕೆಲವರ ಕಲ್ಲಂಗಡಿ ಹಣ್ಣು ಹೊಲದಲ್ಲಿ ಉಳಿದುಕೊಂಡಿದೆ. ಈ ಬಾರಿಯ ಬೆಳೆಗಳಲ್ಲಿ ಶೇಂಗಾ ಬೆಳೆ ನೀರಿಕ್ಷಿತ ಮಟ್ಟ ತಲುಪದೆ ರೈತ ಸಮುದಾಯವನ್ನು ಹೈರಾಣವಾಗಿಸಿದೆ. ಈ ಮಧ್ಯೆ ಅಲ್ಲಲ್ಲಿ ಬೆಳೆದ ಭತ್ತದ ಸುಗ್ಗಿ ಬೆಳೆ ಹಾಗೂ ಕಲ್ಲಂಗಡಿ ಹೆಚ್ಚಿನ ರೈತರಿಗೆ ಜೀವನಾಧಾರವಾಗಿದೆ.

    ಈ ಬಾರಿಯ ಕಲ್ಲಂಗಡಿ ಹಾಗೂ ಸುಗ್ಗಿ ಕೃಷಿ ರೈತರಿಗೆ ಉತ್ತಮ ಆದಾಯ ಬರುವಂತೆ ಮಾಡಿದೆ. ಆದರೆ ಶೇಂಗಾ ಬೆಳೆ ಮಾತ್ರ ರೈತರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ತಂದುಕೊಟ್ಟಿಲ್ಲ. ಸಾಮಾನ್ಯವಾಗಿ ರೈತ ಸಮುದಾಯ ಸಮಗ್ರ ಕೃಷಿ ನೀತಿ ಅನುಸರಿಸಿದರೆ ಯಶಸ್ಸು ಲಭಿಸುತ್ತದೆ. ಇಲ್ಲವಾದಲ್ಲಿ ಸಮಸ್ಯೆ ಉಂಟಾಗಲಿದೆ ಎಂಬುದು ಈ ಬಾರಿಯ ಕೃಷಿಯಿಂದ ತಿಳಿಯಬಹುದು.
    | ಎಂ.ಜಯರಾಮ ಶೆಟ್ಟಿ ಅಧ್ಯಕ್ಷರು ರೈತ ಧ್ವನಿ ಸಂಘ ಕೋಟ

    ನನ್ನ ಒಂದು ಎಕರೆ ಕಲ್ಲಂಗಡಿ ಬೆಳೆ ನಿರೀಕ್ಷಿತ ಮಟ್ಟ ತಲುಪಿ ಒಳ್ಳೆಯ ದರ ಸಿಕ್ಕಿದೆ. ಆದರೆ ಅಕಾಲಿಕ ಮಳೆಯಿಂದಾಗಿ ಹೊಲದಲ್ಲಿ ಉಳಿದುಕೊಂಡ ಹಣ್ಣಿಗೆ ಸಂಚಕಾರ ಬಂದೊದಗುತ್ತಿದೆ. ಹೀಗಾದರೆ ಬೆಳೆಗಾರರಿಗೆ ಸಂಕಷ್ಟ ತಪ್ಪಿದಲ್ಲ.
    |ಸುರೇಶ್ ಪೂಜಾರಿ ಉಪ್ಲಾಡಿ ಯುವ ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts