More

    ಉತ್ತಮ ಸಂವಹನ ಕೌಶಲ ಅಗತ್ಯ

    ಜಮಖಂಡಿ: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಶ್ರದ್ಧೆ, ನಿರಂತರ ಕಠಿಣ ಪರಿಶ್ರಮದ ಜತೆಗೆ ಉತ್ತಮ ಸಂವಹನ ಕೌಶಲ ಅತ್ಯಂತ ಮುಖ್ಯವಾಗಿದೆ. ಹತ್ತು ಪುಸ್ತಕ ಓದುವುದಕ್ಕಿಂತ ಒಂದು ಪುಸ್ತಕ ಓದಿ ಹತ್ತು ವಿಷಯ ತಿಳಿದುಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಹೇಳಿದರು.

    ನಗರದ ಮುರಗೋಡ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಬ್ಯಾಡ್ಮಿಂಟನ್ ಕ್ಲಬ್ ಸಂಸ್ಥೆ ಹಾಗೂ ಎಸ್.ಬಿ. ವಿಸ್ಡಮ್ ಕರಿಯರ್ ಅಕಾಡೆಮಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಒಂದು ದಿನದ ಉಚಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
    ಯಾವ ಸಮಯದಲ್ಲಿ ಓದಬೇಕು ಎನ್ನುವುದಕ್ಕಿಂತ ಯಾವ ವಿಷಯಕ್ಕೆ ಎಷ್ಟು ಸಮಯ ನೀಡಬೇಕೆಂದು ನಿರ್ಧರಿಸಿಕೊಳ್ಳಬೇಕು. ಅಭ್ಯಾಸದ ನಡುವೆ ವಿಶ್ರಾಂತಿ ಅವಶ್ಯವಾಗಿದೆ. ನಿಖರತೆ, ತ್ವರಿತಗತಿ ಹಾಗೂ ಸಮಯ ನಿರ್ವಹಣೆ ಬಹಳ ಮುಖ್ಯ. ಇದರೊಂದಿಗೆ ಉತ್ತಮ ಅವಲೋಕನ ಗುಣ ಹೊಂದಬೇಕು. ಯಾವ ಹುದ್ದೆಗೆ, ಯಾವ ವಿಷಯಗಳನ್ನು ಹೇಗೆ ಓದಬೇಕು ಎಂಬುದು ತಿಳಿದಿಕೊಳ್ಳಬೇಕು. ಸ್ವ ಆಸಕ್ತಿಯಿಂದ ಓದಬೇಕು. 10 ವರ್ಷದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ರೂಢಿ ಮೈಗೂಡಿಸಿಕೊಳ್ಳಬೇಕು ಎಂದರು.

    ಡಿವೈಎಸ್‌ಪಿ ಶಾಂತವೀರ ಈ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆಗೆ ಮೊಬೈಲ್‌ಗಳನ್ನು ಬಿಟ್ಟು ಪುಸ್ತಕ ಹಿಡಿಯಬೇಕು. ಮನೋ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು, ನಿರಂತರ ಓದಿನಿಂದ ಕಠಿಣ ಪರೀಕ್ಷೆಗಳಲ್ಲಿಯೂ ಸಾಧನೆ ಮಾಡಿ ತನ್ನದೇಯಾದ ಛಾಪು ಮೂಡಿಸಲು ಪ್ರಯತ್ನ ಪಡಬೇಕು ಎಂದರು.

    ಸಮಾಜದಿಂದ ನಿಂದನೆಗಳನ್ನು ಧನಾತ್ಮಕವಾಗಿ ತೆಗೆದುಕೊಂಡು ಸಾಧನೆ ಮಾಡಬೇಕು. ಆಲೋಚನೆಗಳೇ ನಮ್ಮ ಶಕ್ತಿ. ಮೊದಲು ಕೆಟ್ಟ ವಿಚಾರಗಳನ್ನು ತೆಗೆದುಹಾಕಿ ನಮ್ಮಲ್ಲಿನ ದೃಢ ಸಂಕಲ್ಪದ ಶಕ್ತಿ ನಂಬಬೇಕು, ಸಾಧನೆಯ ಹಸಿವಿಗಾಗಿ ಛಲ ಬಿಡದೆ ಅಧ್ಯಯನ ಶೀಲರಾಗಬೇಕು ಎಂದರು.

    ಬಾಗಲಕೋಟೆ ಎಸಿ ಶ್ವೇತಾ ಬೀಡಿಕರ ಮಾತನಾಡಿ, ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಹಿಂದೇಟು ಹಾಕಬಾರದು. ಮಾಧ್ಯಮ ಯಾವುದೇ ಇರಲಿ ಸಾಧನೆ ಮಾಡುವುದು ಮುಖ್ಯ. ಪ್ರತಿ ವ್ಯಕ್ತಿಯೂ ತನ್ನಲ್ಲಿರುವ ಪ್ರತಿಭೆಯನ್ನು ಪೂರ್ಣ ಪ್ರಮಾಣದಲ್ಲಿ ವಿನಿಯೋಗಿಸಬೇಕು ಎಂದರು.

    ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯ ಸಾವಿರಾರು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಎಸ್.ಬಿ.ವಿಸ್ಡಮ್ ಕರಿಯರ್ ಅಕಾಡೆಮಿಯ ಸಂಸ್ಥಾಪಕ ಶರಣಯ್ಯ ಭಂಡಾರಿಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ತಹಸೀಲ್ದಾರ್ ಸದಾಶಿವ ಮಕ್ಕೋಜಿ, ಮುಧೋಳ ತಹಸೀಲ್ದಾರ್ ವಿನೋದ ಹತ್ತಳ್ಳಿ, ಅಧಿಕಾರಿಗಳಾದ ಸಿ.ಎಸ್.ಗಡ್ಡದೇವರಮಠ, ಸಂತೋಷ ಬಾಡಗಿ, ರಾಮಲಿಂಗ ಭೈರವಾಡಗಿ, ಲಿಂಗಾನಂದ ಗವಿಮಠ, ಮಂಜುನಾಥ ಬಾಡಗಿ, ರಮೇಶ ತೇಲಿ, ಉಮೇಶ ಮುರಗೋಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts