More

    ಬ್ರಹ್ಮ ಹೋರಿಗೆ ಬಂಗಾರದ ಬೆಲೆ!

    ಹಾವೇರಿ: ವೇಗದ ಓಟಕ್ಕೆ ಹೆಸರಾಗಿದ್ದ ಜಿಲ್ಲೆಯ ಹಾನಗಲ್ಲ ತಾಲೂಕಿನ ವಾಸನ ಗ್ರಾಮದ ಕೊಬ್ಬರಿ ಹೋರಿ ದಾಖಲೆಯ 19 ಲಕ್ಷ ರೂ.ಗಳಿಗೆ ಮಾರಾಟವಾಗಿ ದಾಖಲೆ ಬರೆದಿದೆ.

    ಇನ್ನೋವಾ ಕಾರಿನ ದರಕ್ಕೆ ಹೋರಿ ಮಾರಾಟವೇ ಎಂದು ಎಲ್ಲರೂ ಹುಬ್ಬೇರಿಸಬಹುದು. ಆದರೆ, ಇದು ನಿಜ. ವಾಸನ ಗ್ರಾಮದ ಮಲ್ಲೇಶಪ್ಪ ಹಾಳಗತನವರ ಎಂಬುವರ ‘ಬ್ರಹ್ಮ’ ಹೆಸರಿನ ಹೋರಿ 19,00,128 ರೂ.ಗಳಿಗೆ ಮಾರಾಟವಾಗಿದೆ. ಸುತ್ತಲಿನ ಹತ್ತಾರು ಊರುಗಳಲ್ಲಿ ಪ್ರಸಿದ್ಧಿ ಪಡೆದಿದ್ದ ಬ್ರಹ್ಮ ಹೋರಿ ಇದೀಗ ತಮಿಳುನಾಡು ಪಾಲಾಗಿದೆ. ತಮಿಳುನಾಡಿನ ವಿಕ್ಟರಿ ಎಂಬುವರು ಹೋರಿಯನ್ನು ಖರೀದಿಸಿದ್ದಾರೆ.

    ಗ್ರಾಮೀಣ ಸೊಗಡಿನ ಕೊಬ್ಬರಿ ಹೋರಿ ಬೆದರಿಸುವ ಕ್ರೀಡೆ ಹೊರರಾಜ್ಯಗಳಲ್ಲಿಯೂ ಪ್ರಸಿದ್ಧಿ ಪಡೆದಿದೆ. ದೀಪಾವಳಿ ಬಳಿಕ ಜಿಲ್ಲೆಯಲ್ಲಿ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯ ಹವಾ ಜೋರಾಗಿರುತ್ತದೆ. ಕಿಕ್ಕಿರಿದು ಸೇರಿರುವ ಸಾವಿರಾರು ಜನರ ನಡುವೆ ನಾಗಾಲೋಟದಲ್ಲಿ ಓಡುವ ಹೋರಿಗಳನ್ನು ನೋಡಲು ಜನ ಮುಗಿಬೀಳುತ್ತಾರೆ. ಅಖಾಡದಲ್ಲಿ ತನ್ನ ಕೊರಳಿಗೆ ಕಟ್ಟಿದ ಕೊಬ್ಬರಿ ಸರವನ್ನು ಹರಿಯಲು ಅವಕಾಶ ನೀಡದೇ ವೇಗವಾಗಿ ಓಡಿ ಗುರಿ ತಲುಪುವ ತಾಕತ್ತನ್ನು ಬ್ರಹ್ಮ ಹೋರಿ ಹೊಂದಿದೆ. ಹೀಗಾಗಿ, ಈ ಹೋರಿಯನ್ನು ತಮಿಳುನಾಡಿನ ವೆಲ್ಲೂರ ಜಿಲ್ಲೆಯ ಕಾಟಪಾಡಿಯ ವಿಕ್ಟರಿ ಎಂಬುವರು ಖರೀದಿಸಿದ್ದಾರೆ.

    ಹೋರಿಯ ವಿಶೇಷ ಏನು: ‘ಬ್ರಹ್ಮ’ ಅಖಾಡಕ್ಕೆ ಇಳಿದರೆ ಸಾಕು ಅಭಿಮಾನಿಗಳು ನೋಡಲು ಮುಗಿಬೀಳುತ್ತಿದ್ದರು. ಸಿಳ್ಳೆ, ಕೇಕೆಯ ಹಷೋದ್ಘಾರದ ನಡುವೆ ಹೋರಿ ಓಡುವುದನ್ನು ನೋಡಿ ಕುಣಿದು ಕುಪ್ಪಳಿಸುತ್ತಿದ್ದರು. ಹೋದಲ್ಲೆಲ್ಲ ಪ್ರಶಸ್ತಿ ಕಟ್ಟಿಟ್ಟ ಬುತ್ತಿ ಎಂಬಂತಾಗಿತ್ತು. ಇದರಿಂದ ಬ್ರಹ್ಮನ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿತ್ತು. 4 ವರ್ಷದ ಮರಿಯಿದ್ದಾಗ 1.25 ಲಕ್ಷ ರೂ. ನೀಡಿ ತಮಿಳುನಾಡಿನಿಂದ ಈ ಹೋರಿಯನ್ನು ವಾಸನದ ಮಲ್ಲೇಶಪ್ಪ, ಕರಬಸಪ್ಪ ಖರೀದಿಸಿ ತಂದಿದ್ದರು. ಮೂರು ವರ್ಷಗಳಿಂದ ಈ ಕುಟುಂಬದವರು ಹೋರಿಯನ್ನು ಸಾಕಿದ್ದರು.

    ಯಾರನ್ನೂ ಮುಟ್ಟಿಸಿಕೊಳ್ಳದೇ ಶರವೇಗದಲ್ಲಿ ಓಡಿ ಬ್ರಹ್ಮ ಬಹುಮಾನ ಗೆಲ್ಲುತ್ತಿದ್ದ. ವೇಗದ ಓಟವೇ ಇದರ ವಿಶೇಷ. ಅದಕ್ಕಾಗಿ ಹೋರಿ ಮಾರಾಟ ಮಾಡಲು ಕಿಂಚಿತ್ತೂ ಇಷ್ಟವಿರಲಿಲ್ಲ. ಆದರೆ, ಈ ಹೋರಿಯನ್ನು ಕೊಡಿಸಿದ್ದ ತಮಿಳುನಾಡಿನ ವೇಣು ಎಂಬುವರು ಮನೆಗೆ ಬಂದು ಒತ್ತಾಯ ಮಾಡಿದ್ದರಿಂದ ಹೋರಿ ಮಾರಾಟ ಮಾಡಲಾಯಿತು. 6 ಲಕ್ಷ ರೂ. ಮುಂಗಡ ಪಡೆಯಲಾಗಿತ್ತು. ಆದರೆ, ಅಭಿಮಾನಿಗಳ ಅಸಮಾಧಾನ ಹೆಚ್ಚಾಗಿದ್ದರಿಂದ ಹಿಂದೇಟು ಹಾಕಿದೆ. ವಿಕ್ಟರಿ ಅವರು ಬೆನ್ನು ಬಿದ್ದಿದ್ದರಿಂದ ಹೋರಿಯನ್ನು ಮಾರಾಟ ಮಾಡಿದೆ ಎನ್ನುತ್ತಾರೆ ಮಾಲೀಕ ಮಲ್ಲೇಶಪ್ಪ ಹಾಳಗತನವರ.

    ತಮಿಳುನಾಡಿನ ವಿಕ್ಟರಿ ಎಂಬುವರು 19 ಲಕ್ಷ ರೂ. ನೀಡಿ ಹೋರಿ ಖರೀದಿಸಿದ್ದಾರೆ. ಈ ಮೊದಲು ಅವರ ಮೂಲಕವೇ ನಾವು ಹೋರಿ ಖರೀದಿಸಿದ್ದೆವು. ಈಗ ಒಲ್ಲದ ಮನಸಿನಿಂದಲೇ ಹೋರಿ ಮಾರಾಟ ಮಾಡಿದ್ದೇವೆ. ಮಾರಾಟ ಮಾಡದಂತೆ ಅಭಿಮಾನಿಗಳು ಒತ್ತಡ ಹಾಕಿದ್ದರು. ‘ಬ್ರಹ್ಮ’ ಹೋರಿ ಕೊಬ್ಬರಿ ಹೋರಿ ಸ್ಪರ್ಧೆಗಳಲ್ಲೊ ದೊಡ್ಡ ಹೆಸರು ಮಾಡಿದೆ. ಜತೆಗೆ ಅಪಾರ ಅಭಿಮಾನಿಗಳನ್ನು ಹೊಂದಿದೆ.

    | ಮಲ್ಲೇಶಪ್ಪ ಹಾಳಗತನವರ, ಹೋರಿ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts