More

    ಪರರಾಜ್ಯ ಕಾರ್ಮಿಕರಿಂದ ಪ್ರತಿಭಟನೆ

    ಗೊಳಸಂಗಿ: ಲಾಕ್‌ಡೌನ್ ಬಳಿಕ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿರುವ ಕೂಡಗಿ ಎನ್‌ಟಿಪಿಸಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪರರಾಜ್ಯದ ಕಾರ್ಮಿಕರು ಮೂಲ ಬೇಡಿಕೆಗಳಿಗೆ ಆಗ್ರಹಿಸಿ ಸ್ಥಾವರದ ಮುಖ್ಯದ್ವಾರದ ಎದುರು ಸೋಮವಾರ ಪ್ರತಿಭಟಿಸಿದರು.
    ಎನ್‌ಟಿಪಿಸಿ ವ್ಯಾಪ್ತಿಯ ಸ್ಥಾವರದ ವಿವಿಧ ಕಂಪನಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ಬಿಹಾರ, ಪಶ್ಚಿಮ ಬಂಗಾಲ, ಜಾರ್ಖಂಡ್, ಮಧ್ಯಪ್ರದೇಶ, ಉತ್ತರಪ್ರದೇಶ, ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್ ಬಳಿಕ ಪರರಾಜ್ಯದ ಕಾರ್ಮಿಕರನ್ನು ಎನ್‌ಟಿಪಿಸಿ ಅನಿರ್ದಿಷ್ಟಾವಧಿವರೆಗೆ ಕೆಲಸದಿಂದ ಕೈ ಬಿಟ್ಟಿದೆ. ಬಾಕಿ ವೇತನ ಸಿಗದೆ, ಕೆಲಸ ಇಲ್ಲದೆ ಕಂಗಾಲಾಗಿರುವ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು.
    ಸದ್ಯಕ್ಕೆ ನಿಮ್ಮ ಯಾವುದೇ ಕೆಲಸ ಬೇಕಿಲ್ಲ. ನಮಗೆ ಬರಬೇಕಿದ್ದ ಹಿಂದಿನ ಸಂಬಳ ನೀಡಿ ನಮ್ಮ ರಾಜ್ಯಗಳಿಗೆ ಕಳಿಸುವ ವ್ಯವಸ್ಥೆ ಮಾಡಿ ಎಂದು ಕಾರ್ಮಿಕರು ಗೋಗರೆದರು. ಇದಕ್ಕೆ ಪ್ರತಿಕ್ರಿಯಿಸಿದ ಎನ್‌ಟಿಪಿಸಿ ಎಚ್‌ಆರ್ ವಿಭಾಗದ ಡಿಜಿಎಂ ಡಾ. ಸುರೇಂದ್ರನ್ ಕಾರ್ಮಿಕರಿಗೆ ನೀಡಬೇಕಿದ್ದ ವೇತನವನ್ನು ಎನ್‌ಟಿಪಿಸಿ ಈಗಾಗಲೇ ಸಂಬಂಧಿಸಿದ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ್ದು, ತಮಗೆ ಇನ್ನೂ ಹಣ ಸಿಕ್ಕಿರದಿದ್ದರೆ ಗುತ್ತಿಗೆದಾರರನ್ನು ಸಂಪರ್ಕಿಸಿ ಮಾತುಕತೆ ನಡೆಸಲಾವುದೆಂದರು.
    ಎನ್‌ಟಿಪಿಸಿ ಪೊಲೀಸ್ ಠಾಣೆ ಪಿಎಸ್‌ಐ ರೇಣುಕಾ ಜಕನೂರ ಮಾತನಾಡಿ, ಸ್ಥಾವರದ ಹಿರಿಯ ಅಧಿಕಾರಿಗಳ ಜತೆಗೆ ಮಾತನಾಡಿ ನಿಮ್ಮ ಸಮಸ್ಯೆಗೆ ಸ್ಪಂದಿಸಿ ತಮ್ಮನ್ನೆಲ್ಲ ಸ್ವಗ್ರಾಮಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಸಮಸ್ಯೆ ಪರಿಹಾರಕ್ಕೆ ಒಂದೆರಡು ದಿನ ಕಾಲಾವಕಾಶ ನೀಡಿ. ಪ್ರತಿಭಟನೆ ಹಿಂಪಡೆಯಬೇಕೆಂದು ತಿಳಿಸಿ ಕಾರ್ಮಿಕರ ಮನವೊಲಿಸಿದರು.
    ಎಚ್‌ಆರ್ ವಿಭಾಗದ ಡಿಜಿಎಂ ಜಯನಾರಾಯಣನ್, ವ್ಯವಸ್ಥಾಪಕ ವಿಘ್ನೇಶ, ಯೋಜನಾ ವಿಭಾಗದ ಡಿಜಿಎಂ ಎಸ್. ಸುಧಾಕರನ್, ಸಿಎಸ್‌ಆರ್ ಸೀನಿಯರ್ ಮ್ಯಾನೇಜರ್ ಎಂ.ಎಚ್. ಮಂಜುನಾಥ ಮತ್ತಿತರರಿದ್ದರು. ಇನ್ನೂರಕ್ಕೂ ಅಧಿಕ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ವರದಿ ಪ್ರಕಟಿಸಿದ್ದ ವಿಜಯವಾಣಿ

    ಉದ್ಯೋಗ ಕಳೆದುಕೊಂಡು ಬೀದಿ ಪಾಲಾದ ಪಶ್ಚಿಮ ಬಂಗಾಲದ ಕಾರ್ಮಿಕರ ಕರಾಳತೆಯ ಚಿತ್ರಣವನ್ನು ‘ವಿಜಯವಾಣಿ’ಯಲ್ಲಿ ಏ.8 ರಂದು ‘ನಿರುದ್ಯೋಗಿಯಾದ ಬಂಗಾಲದ ಕಾರ್ಮಿಕರು’ ಶೀರ್ಷಿಕೆಯಡಿ ಸಮಗ್ರ ವರದಿಯೊಂದನ್ನು ಪ್ರಕಟಿಸುತ್ತಿದ್ದಂತೆ ಸ್ಥಾವರದ ಹಿರಿಯ ಅಧಿಕಾರಿಗಳು ಗುತ್ತಿಗೆದಾರರ ಮೂಲಕ ಕಾರ್ಮಿಕರಿಗೆ ವಾರಕ್ಕೆ ತಲಾ ಒಂದು ಸಾವಿರ ರೂ. ಊಟದ ಖರ್ಚಿಗಾಗಿ ನೀಡುವ ವ್ಯವಸ್ಥೆ ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts