More

    ಗೋಕರ್ಣ ಮಹಾಬಲನಿಗೆ ಭಕ್ತರ ಕೊರತೆ!

    ಗೋಕರ್ಣ: ಅತ್ಯಂತ ಕಡಿಮೆ ಭಕ್ತರು ಗೋಕರ್ಣಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಈ ವರ್ಷದ ಮಹಾಶಿವರಾತ್ರಿ ಹೊಸ ದಾಖಲೆಗೆ ಕಾರಣವಾಯಿತು. ಮಹಾಬಲೇಶ್ವರ ಮಂದಿರದಲ್ಲಿ ಎಂದಿನ ನೂಕು ನುಗ್ಗಲು ಇಲ್ಲದೆ ಸರತಿಯಲ್ಲಿ ನಿಂತು ಭಕ್ತರು ಶಾಂತವಾಗಿ ಪೂಜೆ ಸಲ್ಲಿಸಿದರು. ಗರ್ಭಗುಡಿ ಮತ್ತು ನಂದಿ ಮಂಟಪದಲ್ಲಿ ದಟ್ಟಣೆ ಇರಲಿಲ್ಲ. ಈ ವೇಳೆ ಯಾತ್ರಿಕರಿಂದ ತುಂಬಿರುತ್ತಿದ್ದ ಇಲ್ಲಿನ ಸಮುದ್ರ, ಕೋಟಿತೀರ್ಥ, ರಥಬೀದಿ ಮತ್ತು ಎಲ್ಲ ಮುಖ್ಯ ಸ್ಥಳಗಳು ಬರಿದಾಗಿದ್ದವು. ಪ್ರತಿ ವರ್ಷ ಸಮುದ್ರ ತೀರದ ವರೆಗೆ ಮತ್ತು ನಾಗಬೀದಿ ಉದ್ದಕ್ಕೂ ಮಂದಿರಗಳಲ್ಲಿ ಪೂಜೆ ಸಲ್ಲಿಸಲು ಭಕ್ತರ ಸಾಲು ಇರುತ್ತಿತ್ತು. ಈ ವರ್ಷ ಈ ಭಾಗಗಳು ನಿರ್ಜನವಾಗಿದ್ದವು. ಇದರ ಜೊತೆಗೆ ಜಿಲ್ಲೆಯ ವಿವಿಧೆಡೆಯಿಂದ ಬರುತ್ತಿದ್ದ ಭಕ್ತರ ಸಂಖ್ಯೆಯಲ್ಲೂ ಕಡಿಮೆಯಾಗಿತ್ತು.

    ಜಾತ್ರಾ ವಿಶೇಷ ಬಸ್ ಬರಲಿಲ್ಲ: ಸಾರಿಗೆ ಇಲಾಖೆ ಶಿವರಾತ್ರಿಗೆ ಹುಬ್ಬಳ್ಳಿ ಮತ್ತು ಬೆಳಗಾವಿಯಿಂದ ಗೋಕರ್ಣಕ್ಕೆ ಹೋಗುವ ಪ್ರಯಾಣಿಕರಿಗೆ ಪ್ರತ್ಯೇಕ ನಿಲ್ದಾಣ ನಿರ್ವಿುಸುತ್ತಿತ್ತು. ಶಿವರಾತ್ರಿ ಹಿಂದಿನ ಸಂಜೆಯಿಂದಲೆ ಈ ಸ್ಥಳಗಳಿಂದ ವಿಶೇಷ ಗಾಡಿ ಬಿಡಲಾಗುತ್ತಿತ್ತು. ಈ ಸಲ ಗುರುವಾರ ಮಧ್ಯಾಹ್ನದವರೆಗೂ ಆ ಭಾಗಗಳಿಂದ ಒಂದೂ ಜಾತ್ರಾ ಬಸ್​ಗಳು ಬರಲಿಲ್ಲ. ಉಳಿದಂತೆ ಕಾರವಾರ, ಅಂಕೋಲಾ, ಕುಮಟಾ ಸೇರಿ ಜಿಲ್ಲೆಯ ವಿವಿಧ ಪ್ರಮುಖ ಊರುಗಳಿಗೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಬಸ್ ಬಿಡಲಾಗಿತ್ತು. ಪ್ರತಿ ಶಿವರಾತ್ರಿಗೆ ಆತ್ಮಲಿಂಗ ಪೂಜೆಗೆ ಬರುತ್ತಿದ್ದ ಹಿರಿಯ ಶಿಕ್ಷಣ ತಜ್ಞ ಪ್ರಭಾಕರ ಕೋರೆ ಅವರು ಈ ಬಾರಿ ಭೇಟಿ ನೀಡಲಿಲ್ಲ. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠ ಬದ್ರಿನಾಥ್, ಭಟ್ಕಳ ಡಿಎಸ್​ಪಿ ಬೆಳ್ಳಿಯಪ್ಪ ಗೋಕರ್ಣಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಸಿಪಿಐ ಪರಮೇಶ್ವರ ಗುನಗ, ಪಿಎಸ್​ಐ ನವೀನ ನಾಯ್ಕ ರಕ್ಷಣೆ ನಿರ್ವಹಿಸುತ್ತಿದ್ದಾರೆ.

    ಗಡಿಯಲ್ಲಿ ತಪಾಸಣೆ: ಗೋವಾ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಪ್ರವಾಸಿಗರು ಈ ಬಾರಿ ಕೋವಿಡ್ ಭಯದಿಂದ ಗೋಕರ್ಣಕ್ಕೆ ಬರಲಿಲ್ಲ. ಇದರ ಜೊತೆಗೆ ರಾಜ್ಯದ ಗಡಿ ಭಾಗಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸಿ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಇದ್ದವರಿಗೆ ಮಾತ್ರ ಬಿಡಲಾಗುತ್ತಿರುವುದರಿಂದ ಹೆಚ್ಚಿನವರು ಇಲ್ಲಿಗೆ ಬರಲು ಹಿಂದೇಟು ಹಾಕಿದರು ಎನ್ನಲಾಗಿದೆ.

    ವಿವಿಧ ವ್ಯವಸ್ಥೆ : ಮಹಾಬಲೇಶ್ವರ ಮಂದಿರ ಸೇರಿ ಎಲ್ಲ ಮಂದಿರಗಳು, ಆರೋಗ್ಯ, ಹೆಸ್ಕಾಂ ಮತ್ತು ಪೊಲೀಸ್ ಇಲಾಖೆ ಎಂದಿನ ವ್ಯವಸ್ಥೆ ಮಾಡಿಕೊಂಡಿದ್ದವು. ಸ್ಥಳೀಯ ಪಂಚಾಯಿತಿ ಕುಡಿಯುವ ನೀರು, ಸ್ವಚ್ಛತೆ, ದಾರಿ ದೀಪದ ಏರ್ಪಾಟು ಮಾಡಿಕೊಂಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts