More

    ಮಲೆನಾಡಲ್ಲಿ ಸಮಸ್ಯೆಗಳಿಗೆ ನಾಂದಿ ಹಾಡಿದ ಜಾಗತಿಕ ತಾಪಮಾನ

    ಶಿವಮೊಗ್ಗ: ಸದಾ ಹಸಿರಿನಿಂದ ಕೂಡಿದ, ಶಾಂತ ವಾತಾವರಣ ಮತ್ತು ಸಜ್ಜನರು ವಾಸಿರುವ ಪ್ರದೇಶವಾದ ಮಲೆನಾಡು ಇಂದು ವಾಸಕ್ಕಲ್ಲ, ಪ್ರವಾಸೋದ್ಯಮಕ್ಕೆ ಮಾತ್ರ ಸೀಮಿತವಾಗಿದೆ. ಜಾಗತಿಕ ತಾಪಮಾನ ಹಲವಾರು ಸಮಸ್ಯೆಗಳಿಗೆ ನಾಂದಿ ಹಾಡಿದೆ ಎಂದು ಸಾಹಿತಿ ಕಲ್ಕುಳಿ ವಿಠ್ಠಲ ಹೆಗ್ಡೆ ಅವರು ಕಳವಳ ವ್ಯಕ್ತಪಡಿಸಿದರು.
    ಚಾಲುಕ್ಯನಗರದ ಸಾಹಿತ್ಯ ಗ್ರಾಮದಲ್ಲಿ ಗುರುವಾರ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮಲೆನಾಡಿನ ಬೇಗುದಿಗಳು ಕುರಿತ ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ ವಿಷಯ ಕುರಿತು ಮಾತನಾಡಿದ ಅವರು, ಮಲೆನಾಡಿನ ಬೇಗುದಿಗಳು ದಿನದಿಂದ ದಿನಕ್ಕೆ ಮತ್ತಷ್ಟು ಜಾಸ್ತಿಯಾಗಿದ್ದು ಬಿಗಿಯಾಗುತ್ತಿರುವ ಉರುಳಾಗಿದೆ. ಕಾಡು ಪಾಣಿಗಳು-ಮಾನವ ಸಂಘರ್ಷದಿಂದ ಹಿಡಿದು ಹತ್ತಾರು ಸಮಸ್ಯೆಗಳು ತಲೆದೋರಿವೆ ಎಂದರು.
    ಕಾಡಾನೆಗಳ ದಾಳಿಗೆ ಹತ್ತಾರು ಮಂದಿ ಬಲಿಯಾಗಿದ್ದಾರೆ. ಇದು ಆನೆಗಳ ತಪ್ಪಿನಿಂದ ನಡೆದ ಪ್ರಮಾದವಲ್ಲ. ಬದಲಾಗಿ ಅವುಗಳು ನೆಲೆ ಕಳೆದುಕೊಳ್ಳುವಂತೆ ಮಾಡಿರುವವರ ತಪ್ಪಾಗಿದೆ. ಇಂದು ಮಂಗಗಳ ಕಾಟಕ್ಕೆ ಜನರು ಊರೇ ಖಾಲಿ ಮಾಡುವಂತಹ ಪರಿಸ್ಥಿತಿಗಳು ನಿರ್ಮಾಣವಾಗಿವೆ. ಜಾಗತೀಕರಣ ನೆಪದಲ್ಲಿ ಕಾಡುಪ್ರಾಣಿಗಳ ನೆಲೆಯನ್ನೇ ಕಸಿದುಕೊಳ್ಳುತ್ತಿರುವ ಪರಿಣಾಮ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಹೇಳಿದರು.
    ಮಲೆನಾಡಲ್ಲಿ ಅಡಕೆ ಹೊರತಾದ ಆರ್ಥಿಕತೆ ಇಲ್ಲ. ಆದರೆ ಇಂದು ಅದೇ ಅಡಕೆಗೆ ಎಲೆಚುಕ್ಕಿ ರೋಗ ಬಾಧಿಸುತ್ತಿದೆ. ಸರ್ಕಾರಗಳು ರೋಗ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜನರನ್ನು ಕಾಪಾಡಬೇಕಾದ ಸರ್ಕಾರಗಳ ನಿರ್ಲಕ್ಷೃದಿಂದ ಇಂದು ದೈವದ ಮೊರೆ ಹೋಗುವಂತಾಗಿದೆ. ಕಾಡು ಉಳಿಸುವುದರಿಂದ ಪರಿಸರ ರಕ್ಷಣೆ ಸಾಧ್ಯ ಎಂದು ಬಹಳಷ್ಟು ಜನರಲ್ಲಿ ತಪ್ಪು ಕಲ್ಪನೆ ಇದೆ. ಆದರೆ ಕಾಡು ಒಂದೇ ಪರಿಸರ ರಕ್ಷಣೆ ಮಾಡುವ ಸಾಧನವಲ್ಲ ಎಂಬುದನ್ನು ಮರೆಯುವಂತಿಲ್ಲ ಎಂದರು. ಸಮ್ಮೇಳನದ ಸರ್ವಾಧ್ಯಕ್ಷ ಲಕ್ಷ್ಮಣ ಕೊಡಸೆ, ಪತ್ರಕರ್ತ ನಾಗರಾಜ್ ನೇರಿಗೆ , ಮಹಾನಗರ ಪಾಲಿಕೆ ಸದಸ್ಯ ಬಿ.ಎ.ರಮೇಶ್ ಹೆಗ್ಡೆ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts