More

    ಭಾಷಾ ಅಲ್ಪಸಂಖ್ಯಾತರಿಗೂ ಸಿರಿಗನ್ನಡ ಕಲಿಸಿ

    ಸೊರಬ: ಕನ್ನಡ ಎಂಬುದು ಭಾಷೆ ಮಾತ್ರವಲ್ಲ ಅದು ಬದುಕಿನ ಕ್ರಮ. ಆಡಳಿತ ಭಾಷೆ ಕನ್ನಡ ಜನಭಾಷೆ ಆದಾಗ ಮಾತ್ರ ಅದರ ಲಗಳು ಜನಸಾಮಾನ್ಯರನ್ನು ತಲುಪಲು ಸಾಧ್ಯ ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಟಿ.ರಾಜಪ್ಪ ಮಾಸ್ತರ್ ಹೇಳಿದರು.

    ಪಟ್ಟಣದ ರಂಗ ಮಂದಿರದ ಸಾಹಿತಿ ಕಡಸೂರು ಬಸವಣ್ಯಪ್ಪ ವೇದಿಕೆಯಲ್ಲಿ ಕಸಾಪ ತಾಲೂಕು ಘಟಕದಿಂದ ಶುಕ್ರವಾರ ಆಯೋಜಿಸಿದ್ದ ಒಂಬತ್ತನೇ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರ ನುಡಿಗಳನ್ನು ಆಡಿದರು.
    ವಿವಿಧ ಭಾಷೆಗಳ ನಡುವೆ ಗಟ್ಟಿತನ ಉಳಿಸಿಕೊಂಡಿರುವ ನಮ್ಮ ಮಾತೃ ಭಾಷೆ ಕನ್ನಡ, ಅನ್ನ ನೀಡುವ ಭಾಷೆಯೂ ಆಗಬೇಕು. ಕನ್ನಡ ಸಹಿಯ ಜತೆಗೆ ಭಾಷಾ ಅಲ್ಪಸಂಖ್ಯಾತರಿಗೂ ಕನ್ನಡ ಕಲಿಸುವ ಪ್ರಯತ್ನವಾಗಬೇಕು. ಈ ಮೂಲಕ ನಿಜವಾದ ಕನ್ನಡತನ ಎಲ್ಲರಲ್ಲೂ ಬೆಳೆಯಬೇಕು. ಕನ್ನಡದ ಸದೃಢತನ ಮೆರೆದು ಕನ್ನಡ ಭಾಷೆ ಉಳಿಯಬೇಕು ಎಂದರು.
    ತಾಲೂಕಿನ ಚಂದ್ರಗುತ್ತಿ, ಗುಡವಿ ಪಕ್ಷಿಧಾಮ ಸೇರಿದಂತೆ ಐತಿಹಾಸಿಕ ಸ್ಥಳಗಳು, ನದಿಗಳು ಹಾಗೂ ಕೆರೆಗಳು, ಶಾಲಾ-ಕಾಲೇಜುಗಳು ಅಭಿವೃದ್ಧಿಯಾಗಬೇಕು ಎಂದು ಆಶಿಸಿದರು.
    ಸಮ್ಮೇಳನಕ್ಕೆ ಚಾಲನೆ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕನ್ನಡದ ಗಟ್ಟಿತನ ಉಳಿಸಲು ನಾಡು, ನುಡಿ ಮತ್ತು ಜಲ ಸಂರಕ್ಷಣೆಗೆ ಒತ್ತು ನೀಡುವ ಅಗತ್ಯವಿದೆ. ಎಸ್.ಬಂಗಾರಪ್ಪ ಅವರು ನಾಡಿನ ಹಿತ ಕಾಯಲು ಸದಾ ಮುಂದೆ ಇರುತ್ತಿದ್ದರು. ಅವರ ಯೋಜನೆಗಳಿಂದ ರೈತ ವರ್ಗ, ಜನಸಾಮಾನ್ಯರು ನೆಮ್ಮದಿ ಜೀವನ ಮಾಡುತ್ತಿದ್ದಾರೆ. ಅದೇ ನಿಟ್ಟಿನಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಜನರಿಗೆ ನೀಡಿದ ಭರವಸೆ ಈಡೇರಿಸಿ ಜನತೆಯ ಹಿತ ಕಾದಿದೆ. ಸರ್ಕಾರಿ ಶಾಲೆಗಳ ಮಕ್ಕಳೇ ಶಿಕ್ಷಣ ಕ್ಷೇತ್ರಕ್ಕೆ ರಾಯಭಾರಿಗಳಾಗಿದ್ದು ಉತ್ತಮವಾಗಿ ಅಧ್ಯಯನ ಮಾಡುವ ಮೂಲಕ ಸಾಧನೆ ಮಾಡಿ ಸರ್ಕಾರದ ಘನತೆ ಹೆಚ್ಚಿಸಬೇಕು. ಎಲ್ಲರೂ ಸಮಾನನಾಗಿ ಬದುಕಲು ಅಂಬೇಡ್ಕರ್ ಅವರ ಸಂವಿಧಾನವನ್ನು ಎತ್ತಿ ಹಿಡಿಯಬೇಕಿದೆ ಎಂದು ಹೇಳಿದರು.
    ನಿಕಟಪೂರ್ವ ಅಧ್ಯಕ್ಷ ಡಾ. ಎಂ.ಕೆ.ಭಟ್ ಅವರು ಸರ್ವಾಧ್ಯಕ್ಷ ರಾಜಪ್ಪ ಮಾಸ್ತರ್ ಅವರಿಗೆ ಕನ್ನಡ ಬಾಪುಟ ಹಸ್ತಾಂತರಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಆಶಯ ನುಡಿಗಳನ್ನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಶಿವಾನಂದ ಪಾಣಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಎಸ್.ಎಂ.ನೀಲೇಶ್ ಸಮ್ಮೇಳನದ ಅಧ್ಯಕ್ಷರ ಪರಿಚಯ ಮಾಡಿದರು. ಸಾಹಿತಿ ಡಾ. ಸಣ್ಣರಾಮ, ಸಾಮಾಜಿಕ ಕಾರ್ಯಕರ್ತೆ ಶೇಖರಮ್ಮ ರಾಜಪ್ಪ ಮಾಸ್ತರ್, ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್, ಬಸವನಗೌಡ ಮಲ್ಲಾಪುರ, ಕಾರ್ತಿಕ್ ಸಾಹುಕಾರ್, ರಾಘು, ಹುಚ್ಚರಾಯಪ್ಪ, ನಾಗರಾಜ ಗೌಡ ಶಿಕಾರಿಪುರ, ಪುರಸಭೆ ಮುಖ್ಯಾಧಿಕಾರಿ ಬಾಲಚಂದ್ರ, ಕೃಷ್ಣಾನಂದ, ಹಾಲೇಶ್ ನವುಲೆ, ಇ.ಶಿವಕುಮಾರ್, ಕಲ್ಲಪ್ಪ ಚಿತ್ರಟ್ಟೆಹಳ್ಳಿ, ರಾಜಸೇಖರ ಪಾಟೀಲ್ ನೆಗವಾಡಿ, ಸಿಪಿಐ ಎಲ್.ರಾಜಶೇಖರ್, ಪಿಎಸ್‌ಐ ನಾಗರಾಜ್, ಚಂದ್ರಕಾಂತ್ ಇತರರಿದ್ದರು.

    ಎನ್‌ಇಪಿಯಿಂದ ಪ್ರಯೋಜನವಿಲ್ಲ
    ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು. ಸಾಮಾಜಿಕ ಮಡಿವಂತಿಕೆ ದೂರವಾಗಿ, ಅಸಮಾನತೆ ತೊಲಗಿ ಸಮಾನತೆ ಬರಬೇಕಿದೆ. ಸರ್ಕಾರ ಐದು ಗ್ಯಾರಂಟಿಗಳನ್ನು ನೀಡಿ ಜನಸಾಮಾನ್ಯರ ಹಿತ ಕಾಪಾಡಿರುವ ಬಗ್ಗೆ ನನ್ನ ಬೆಂಬಲ ಇದೆ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಕ್ರಮ ಸಲ್ಲದು. ಹಾಗೆಯೇ ಹೊಸ ಶಿಕ್ಷಣ ನೀತಿಯಿಂದ ನಮ್ಮ ಮಕ್ಕಳಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಟಿ.ರಾಜಪ್ಪ ಮಾಸ್ತರ್ ಅಭಿಪ್ರಾಯ ವ್ಯಕ್ತಪಡಿಸಿದರು.
    ತ್ರಿವಳಿ ಧ್ವಜಾರೋಹಣ
    ಉರಗನಹಳ್ಳಿ ಗ್ರಾಮದ ನಂದಿನ ಅವರ ವಚನ ಪ್ರಭೆ ಕೃತಿಯನ್ನು ಬಿಇಒ ಸತ್ಯನಾರಾಯಣ್ ಬಿಡುಗಡೆಗೊಳಿಸಿದರು. ತಹಸೀಲ್ದಾರ್ ಹುಸೇನ ಸರಕಾವಸ್ ರಾಷ್ಟ್ರ ಧ್ವಜಾರೋಹಣ, ಇಒ ಡಾ. ಪ್ರದೀಪ್ ಕುಮಾರ್ ಕನ್ನಡ ಧ್ವಜಾರೋಹಣ ಹಾಗೂ ಶಿವಾನಂದ ಪಾಣಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ಸಮ್ಮೇಳನಧ್ಯಕ್ಷರ ಮೆರವಣಿಗೆಗೆ ಕಾರ್ಯಾಧ್ಯಕ್ಷ ಎಚ್.ಗಣಪತಿ ಚಾಲನೆ ನೀಡಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ಮಂಜುನಾಥ್ ಪುಸ್ತಕ ಮಳಿಗೆ ಉದ್ಘಾಟಿಸಿದರು. ಪ್ರವೀಣ್ ಭಂಡಾರಿ ಮತ್ತು ತಂಡದಿಂದ ನಾಡಗೀತೆ, ಅಶೋಕ್ ತತ್ತೂರು ಮತ್ತು ತಂಡದಿಂದ ರೈತಗೀತೆ ಹಾಡಲಾಯಿತು. ಸಮ್ಮೇಳನ ಅಧ್ಯಕ್ಷರ ಬದುಕು-ಹೋರಾಟ, ವಿಚಾರ ಗೋಷ್ಠಿ, ಕವಿ ಗೋಷ್ಠಿ ನಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts