More

    ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆ ಅನಿವಾರ್ಯತೆ; ಸುರೇಶ್ ಹೆಬ್ಳೀಕರ್

    ಶಿವಮೊಗ್ಗ: ಗಿಡ ನೆಟ್ಟು ಫೋಟೋಗೆ ತೆಗೆಸಿಕೊಂಡ ಮಾತ್ರಕ್ಕೆ ಪರಿಸರ ಉಳಿಸಬಹುದು ಎಂಬುದು ತಪ್ಪು ಕಲ್ಪನೆ. ಪರಿಸರ ಸಂರಕ್ಷಣೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಆಲೋಚನೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಇಕೋ ವಾಚ್ ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ ಕೇಂದ್ರದ ಅಧ್ಯಕ್ಷ, ಚಿತ್ರನಟ ಸುರೇಶ್ ಹೆಬ್ಳೀಕರ್ ಅಭಿಪ್ರಾಯಪಟ್ಟರು.
    ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ರೋಟರಿ ವಲಯ 11ರ ಎಲ್ಲ ಕ್ಲಬ್‌ಗಳ ಸಹಯೋಗದಲ್ಲಿ ಭಾನುವಾರ ಪರಿಸರ ಮತ್ತು ಭೂಸಂರಕ್ಷಣಾ ಜಿಲ್ಲಾ ಸಮಾವೇಶ ವಸುಂಧರೆ-2022 ಉದ್ಘಾಟಿಸಿ ಮಾತನಾಡಿದ ಅವರು, ನಿತ್ಯವೂ ನಮ್ಮ ಸುತ್ತಮುತ್ತಲಿನ ಪರಿಸರ ನಾಶವಾಗುತ್ತಿದೆ. ಆದರೆ ಅನೇಕ ಬಾರಿ ಅದು ಗೋಚರಿಸುವುದಿಲ್ಲ. ಭೂಕಂಪನ, ಅತಿವೃಷ್ಠಿ, ಕಾಡ್ಗಿಚ್ಚು ಮತ್ತಿತರ ಸಂದರ್ಭಗಳಲ್ಲಿ ಮಾತ್ರ ಪರಿಸರ ಹಾನಿ ಬಗ್ಗೆ ಕಣ್ಣಿಗೆ ಬೀಳುತ್ತದೆ ಎಂದರು.
    ಆರ್ಥಿಕವಾಗಿ ಮುಂದುವರಿದ ದೇಶಗಳಲ್ಲಿ ಬಹಳಷ್ಟು ಪರಿಸರ ನಾಶವಾಗುತ್ತಿದೆ. ಅತಿಯಾದ ಅಭಿವೃದ್ಧಿ ಯೋಜನೆ ಕಾಮಗಾರಿಗಳಿಂದ ಪ್ರಾಕೃತಿಕ ಸೊಬಗು ಕಣ್ಮರೆಯಾಗುತ್ತಿದ್ದು, ಇಂದಿನ ಯುವ ಪೀಳಿಗೆಗೆ ನೈಸರ್ಗಿಕ ಪ್ರಕೃತಿಯ ಪರಿಚಯವನ್ನೇ ಮಾಡಲು ಸಾಧ್ಯವಾಗದ ವಾತಾವರಣ ನಿರ್ಮಾಣ ಆಗುತ್ತಿದೆ. ಯಾವುದೇ ದೇಶದ ಏಳಿಗೆಗೆ ಅಭಿವೃದ್ಧಿ ಕಾರ್ಯಗಳು ಅಗತ್ಯ. ಆದರೆ ಪರಿಸರ ವಿನಾಶಕ್ಕೆ ಎಡೆಮಾಡಿಕೊಡದೇ ಯೋಜನೆಗಳನ್ನು ರೂಪಿಸಬೇಕು. ಆಗ ಮಾತ್ರ ಕೊಂಚ ಪರಿಸರ ಉಳಿಸಬಹುದು ಎಂದು ಹೇಳಿದರು.
    ಪರಿಸರ ಮಾಲಿನ್ಯ, ಕೆರಗಳ ನಾಶ, ಅರಣ್ಯ ನಾಶ ಸೇರಿದಂತೆ ಭೂಮಿ ಮೇಲೆ ಅಪಾರ ಪರಿಣಾಮ ಬೀರುತ್ತಿದೆ. ಪರಿಸರ ಸಂರಕ್ಷಣೆಯನ್ನು ಸ್ಥಳೀಯಮಟ್ಟದಲ್ಲಿ ಅನುಷ್ಠಾನ ಮಾಡುವ ಬಗ್ಗೆ ಎಲ್ಲರೂ ಚಿಂತನೆ ನಡೆಸಬೇಕಿದೆ. ಪ್ರಕೃತಿ ಸಂರಕ್ಷಣೆಯ ಮಹತ್ವ ಅರಿತುಕೊಳ್ಳಬೇಕಿದೆ. ಮಾನವನ ಪ್ರಕೃತಿ ವಿರೋಧಿ ಚಟುವಟಿಕೆಗಳಿಂದ ಹವಮಾನ ಬದಲಾವಣೆಯಲ್ಲಿ ವೈಪರೀತ್ಯ ಕಾಣುತ್ತಿದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts