More

    ತುತ್ತು ಅನ್ನಕ್ಕೂ ಹಾಹಾಕಾರ, ಹಸಿವಿನಿಂದ ಕಂಗೆಡಲಿದ್ದಾರೆ 26 ಕೋಟಿ ಜನ, ವಿಶ್ವಸಂಸ್ಥೆ ನೀಡಿದೆ ಆಘಾತಕಾರಿ ವರದಿ

    ಜಿನಿವಾ: ಕರೊನಾ ಸಂಕಷ್ಟ ಸೆಪ್ಟಂಬರ್​ವರೆಗೂ ತನ್ನ ಕರಾಳ ಛಾಯೆ ಬೀರಲಿದೆ ಎನ್ನುತ್ತಾರೆ ತಜ್ಞರು. ಅಂದರೆ ಇನ್ನಾರು ತಿಂಗಳು ಒಂದಲ್ಲ ಒಂದು ರೀತಿಯ ನಿರ್ಬಂಧ ಮುಂದುವರಿಯಲಿದೆ. ಅಲ್ಲಿಯವರೆಗೆ ದೇಶದ ಆರ್ಥಿಕ ಸ್ಥಿತಿಯೂ ಡೋಲಾಯಮಾನವಾಗಿಯೇ ಇರಲಿದೆ.
    ಜಾಗತಿಕವಾಗಿ ಇದರ ಪರಿಸ್ಥಿತಿ ಇನ್ನೂ ಭೀಕರವಾಗಿಲಿದೆ. ಹಲವು ದೇಶಗಳು ಪ್ರವಾಸೋದ್ಯಮವನ್ನೇ ನಂಬಿಕೊಂಡಿವೆ. ಕೆಲ ದೇಶಗಳಿಗೆ ವಿದೇಶದಲ್ಲಿರುವ ತನ್ನ ಪ್ರಜೆಗಳು ಕಳುಹಿಸುವ ಹಣವೇ ಜಿಡಿಪಿಯ ಬಹುದೊಡ್ಡ ಆದಾಯ ಮೂಲವಾಗಿದೆ. ಇಂಥ ದೇಶಗಳು ಕರೊನಾದಿಂದಾಗಿ ನೆಲಕಚ್ಚುವುದಂತೂ ನಿಶ್ಚಿತ.

    ಭಾರತದಲ್ಲಿಯೇ 40 ಕೋಟಿ ಅಧಿಕ ಜನರು ಬಡತನದ ಕೂಪಕ್ಕೆ ತಳ್ಳಲ್ಪಡುತ್ತಾರೆ ಎಂದು ವಿಶ್ವಸಂಸ್ಥೆ ಈಗಾಗಲೇ ತಿಳಿಸಿದೆ. ಇದೀಗ ಮತ್ತೊಂದು ಆಘಾತಕಾರಿ ವರದಿಯೊಂದನ್ನು ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆ ನೀಡಿದೆ.

    ಕರೊನಾಗೂ ಮುನ್ನ ವಿಶ್ವದಲ್ಲಿ 13 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದರೆ, ಕರೊನಾ ನಂತರದಲ್ಲಿ ಇವರ ಸಂಖ್ಯೆ ದುಪ್ಪಟ್ಟಾಗಲಿದೆ. ಅಂದರೆ 26 ಕೋಟಿಗೂ ಅಧಿಕ ಜನರು ತುತ್ತು ಅನ್ನಕ್ಕೂ ಪರಿತಪಿಸಲಿದ್ದಾರೆ. ಅದರಲ್ಲೂ ಜನರಿಗೆ ಸಹಾಯ ಹಸ್ತ ಚಾಚಲಿಕ್ಕಾಗದ ಅಸಹಾಯಕ ಸರ್ಕಾರಗಳಿರುವ ರಾಷ್ಟ್ರಗಳಲ್ಲಿ ಪರಿಸ್ಥಿತಿ ಇನ್ನೂ ವಿಷಮಿಸಲಿದೆ ಎಂದೇ ವಿಶ್ವಸಂಸ್ಥೆ ಹೇಳಿದೆ.

    ಅಷ್ಟಕ್ಕೂ ಯಾವ ಯಾವ ರಾಷ್ಟ್ರಗಳಲ್ಲಿ ಇಂಥ ಸ್ಥಿತಿ ಬರಲಿದೆ ಎಂಬ ಬಗ್ಗೆ ಭೌಗೋಳಿಕ ವಿಂಗಡನೆ ನೀಡದಿದ್ದರೂ, ಮುಖ್ಯವಾಗಿ ಆಫ್ರಿಕಾ ಖಂಡದ ಹಲವು ರಾಷ್ಟ್ರಗಳು ಭಾರಿ ಸಂಕಷ್ಟಕ್ಕೆ ಸಿಲುಕಲಿವೆ. ಮಿಡತೆಗಳ ದಾಳಿಯಿಂದಾಗಿ ಬೆಳೆಯನ್ನು ಕಳೆದುಕೊಂಡಿರುವ ಈ ರಾಷ್ಟ್ರಗಳಲ್ಲಿ ಮುಂಬರುವ ದಿನಗಳು ಭಾರಿ ದುಸ್ತರವಾಗಿರಲಿವೆ. ಆದರೆ, ಭಾರತದ ದಿನಗೂಲಿ ಕಾರ್ಮಿಕರು, ನಿರಾಶ್ರಿತರು ಎಷ್ಟರಮಟ್ಟಿಗೆ ಪ್ರಭಾವಿತರಾಗಲಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

    ಬದುಕಲು ನಿತ್ಯವೂ ಹೋರಾಟ ಮಾಡುತ್ತಿರುವವರು, ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿರುವವರು ಅದನ್ನೂ ಕೂಡ ಕಳೆದುಕೊಳ್ಳಲಿದ್ದಾರೆ ಎನ್ನುತ್ತಾರೆ ವಿಶ್ವ ಆಹಾರ ಯೋಜನೆಯ ಮುಖ್ಯ ಆರ್ಥಿಕ ತಜ್ಞ ಆರೀಫ್​ ಹುಸೇನ್​.
    ಇದಕ್ಕಾಗಿ ಎಲ್ಲ ರಾಷ್ಟ್ರಗಳು ಒಗ್ಗೂಡಿ ಕೆಲಸ ಮಾಡಬೇಕಿದೆ. ಇಲ್ಲದಿದ್ದರೆ ಇದಕ್ಕಾಗಿ ಭಾರಿ ಬೆಲೆಯನ್ನೇ ತೆರಬೇಕಾಗುತ್ತದೆ. ಜಾಗತಿಕವಾಗಿ ಇದರಿಂದಾಗುವ ನಷ್ಟ ಇನ್ನೂ ಹೆಚ್ಚಿನದು ಎಂದು ವಿವರಿಸಿದ್ದಾರೆ.

    ಹಸಿವನ್ನು ನೀಗಿಸಲು ತಮ್ಮಲ್ಲಿರುವ ಜೀವನಾಧಾರ ವಸ್ತುಗಳನ್ನು ಮಾರಲು ಮುಂದಾದರೆ ಮತ್ತೆ ಅದನ್ನು ಗಳಿಸಲು ವರ್ಷಗಳೇ ಬೇಕಾಗುತ್ತದೆ. ಉದಾಹರಣೆಗೆ ರೈತನೊಬ್ಬ ಜಾನುವಾರುಗಳು, ಕೃಷಿ ಸಲಕರಣೆಗಳನ್ನು ಮಾರಿದರೆ ಸದ್ಯದಲ್ಲಿ ಮತ್ತೆ ಅವನ್ನು ಪಡೆಯಲಾಗುವುದಿಲ್ಲ. ಇದು ಆಹಾರ ಉತ್ಪಾದನೆ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ.

    ಆಹಾರ ಮತ್ತು ಜೀವನಾಶ್ಯಕ ವಸ್ತುಗಳ ತೀವ್ರ ಕೊರತೆಯು ವಿಶ್ವಸಂಸ್ಥೆ ಗುರುತಿಸಿರುವ ಐದು ಹಂತಗಳಲ್ಲಿ ಮೂರನೇಯದ್ದಾಗಿದೆ. ಐದನೇ ಹಂತವು ಸಾಮೂಹಿಕ ಹಸಿವನ್ನು ಸೂಚಿಸುತ್ತದೆ.

    ಜಾಗತಿಕ ಹಸಿವನ್ನು ನೀಗಿಸಲು 10-12 ಬಿಲಿಯನ್​ ಡಾಲರ್​ಗಳ ಅಗತ್ಯವಿದೆ. ಕಳೆದ ಬಾರಿ ವಿಶ್ವ ಆಹಾರ ಯೋಜನೆಗಾಗಿ 8.3 ಬಿಲಿಯನ್​ ಡಾಲರ್​ಗಳ ಯೋಜನೆ ರೂಪಿಸಲಾಗಿತ್ತು ಎಂದು ವಿಶ್ವಸಂಸ್ಥೆ ತಿಳಿಸಿದೆ.

    ಕೆಲಸ ಹುಡುಕುತ್ತಿದ್ದೀರಾ? ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​​ ರಾಜ್​ ಇಲಾಖೆಯಲ್ಲಿ ಸಮಾಲೋಚಕರಾಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts