More

    ಷರತ್ತಿಲ್ಲದೆ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲಿ

    ಸೋಮವಾರಪೇಟೆ; ಕಾಫಿ ಬೆಳೆಗಾರರ 10 ಎಚ್‌ಪಿ ಪಂಪ್‌ಸೆಟ್‌ಗಳಿಗೆ ಷರತ್ತಿಲ್ಲದೆ ಉಚಿತ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ತಾಲೂಕು ಘಟಕ ವತಿಯಿಂದ ಪಟ್ಟಣ ಜೇಸಿ ವೇದಿಕೆಯಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

    ಜಿಲ್ಲೆಯಲ್ಲಿ ರೈತರೇ ಕಾಫಿ ಬೆಳೆಯುತ್ತಿದ್ದಾರೆ. ನಿಗದಿತ ಸಮಯದಲ್ಲಿ ಮುಂಗಾರು ಮಳೆಯಾಗದೆ ಕಾಫಿ ಫಸಿಲಿಗೆ ಹಾನಿಯಾಗುತ್ತಿದೆ. ಕೊಳವೆಬಾವಿ, ಹೊಂಡ, ಕೆರಗಳಿಂದ ನೀರು ಹರಿಸಿ ಕಾಫಿ ಬೆಳೆಯಬೇಕಾದ ಅನಿವಾರ್ಯತೆ ಇದೆ. ಸರ್ಕಾರ ಉಚಿತ ವಿದ್ಯುತ್ ನೀಡಿದರೆ, ಹೆಚ್ಚಿನ ಕಾಫಿಯನ್ನು ರೈತರು ಉತ್ಪಾಸಿಸುತ್ತಾರೆ. ಕಾಫಿ ವಿದೇಶ ವಿನಿಮಯ ಮತ್ತು ತೆರಿಗೆಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಆದಾಯ ಬರುತ್ತದೆ. ಲಾಭದಲ್ಲಿ ಸಣ್ಣ ಪಾಲನ್ನು ಉಚಿತ ವಿದ್ಯುತ್‌ಗೆ ನೀಡಬೇಕೆಂದು ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಆಗ್ರಹಿಸಿದರು.

    2006ರಿಂದಲೂ ಉಚಿತ ವಿದ್ಯುತ್‌ಗಾಗಿ ರೈತ ಸಂಘ ಹೋರಾಟ ಮಾಡುತ್ತಿದೆ. ಕಳೆದ ವರ್ಷದ ಬೆಳಗಾವಿ ಅಧಿವೇಶನದಲ್ಲಿ ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಅನೇಕ ಷರತ್ತುಗಳನ್ನು ಹಾಕಿ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದ್ದರು. ಆದರೆ ಕೊನೆಗೂ ಸರ್ಕಾರದ ಅದೇಶ ಜಾರಿಯಾಗಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದು, ಬೆಳಗಾವಿ ಅಧಿವೇಶನದಲ್ಲೇ ಉಚಿತ ವಿದ್ಯುತ್ ನೀಡುವ ಅದೇಶ ಹೊರಬೀಳಬೇಕು. ಈ ಬಗ್ಗೆ ಜಿಲ್ಲೆಯ ಶಾಸಕರಾದ ಡಾ.ಮಂತರ್‌ಗೌಡ ಮತ್ತು ಎ.ಎಸ್.ಪೊನ್ನಣ್ಣ ಕಾಫಿ ಬೆಳೆಯುವ ಜಿಲ್ಲೆಗಳ ಶಾಸಕರ ಸಹಕಾರದೊಂದಿಗೆ ಹೋರಾಟ ಮಾಡಿಯಾದರೂ ಉಚಿತ ವಿದ್ಯುತ್ ಸೌಲಭ್ಯ ಪಡೆಯಲೇಬೇಕು ಎಂದು ಒತ್ತಾಯಿಸಿದರು.

    ಉಚಿತ ವಿದ್ಯುತ್ ಸಿಗುವ ನಿರೀಕ್ಷೆಯಿಂದ ಸಣ್ಣ ರೈತರು ಪಂಪ್‌ಸೆಟ್‌ಗಳ ವಿದ್ಯುತ್ ಬಿಲ್ ಪಾವತಿಸಿಲ್ಲ. ಐದಾರು ವರ್ಷಗಳಿಂದ ಅಕಾಲಿಕ ಮಳೆಯಿಂದ ಕಾಫಿ ಫಸಲಿಗೆ ಹಾನಿಯಾಗಿದೆ. ಅವೈಜ್ಞಾನಿಕ ವಿದ್ಯುತ್ ಬಿಲ್, ಶುಲ್ಕ, ಬಿಲ್ ಮೇಲಿನ ಬಡ್ಡಿ, ಚಕ್ರಬಡ್ಡಿ ಸೇರಿ, ಬಡ ರೈತರ ಪಂಪ್‌ಸೆಟ್‌ಗಳು ವಿದ್ಯುತ್‌ಬಿಲ್ ಲಕ್ಷ ರೂ. ದಾಟಿದೆ. ಬರಪೀಡಿತ ಜಿಲ್ಲೆ ಎಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಬಾಕಿ ವಿದ್ಯುತ್ ಬಿಲ್ ಮೊತ್ತವನ್ನು ಸರ್ಕಾರ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.

    ರೈತರ ಬೇಡಿಕೆಯನ್ನು ಬೆಳಗಾವಿ ಅಧಿವೇಶನದಲ್ಲಿ ಈಡೇರಿಸದಿದ್ದರೆ ಮುಂದಿನ ಸ್ಥಳೀಯ ಪಂಚಾಯಿತಿ ಹಾಗೂ ಲೋಕಾಸಭಾ ಚುನಾವಣೆಯನ್ನು ಬಹಿಷ್ಕರಿಸುವ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಎಚ್ಚರಿಸಿದರು.

    ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಪಡೆದಿರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಸೋಮವಾರಪೇಟೆ ತಾಲೂಕನ್ನು ಪೋಡಿಮುಕ್ತ ತಾಲೂಕಾಗಿ ಮಾಡಬೇಕು. ರೈತರಿಗೆ ನಿರಂತರ ವಿದ್ಯುತ್ ನೀಡಬೇಕು. ರೈತರ ಮಕ್ಕಳನ್ನು ಮದುವೆಯಾಗುವ ವಧುವಿನ ಖಾತೆಗೆ 5 ರೂ. ಪ್ರೋತ್ಸಾಹ ಧನವಾಗಿ ಸರ್ಕಾರ ನೀಡಬೇಕು ಎಂದು ಸಂಘದ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ಆಗ್ರಹಿಸಿದರು.

    ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಎನ್.ಎಸ್.ನರಗುಂದ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು. ಧರಣಿಯಲ್ಲಿ ಸಂಘದ ಪದಾಧಿಕಾರಿಗಳಾದ ಎ.ಆರ್.ಕುಶಾಲಪ್ಪ, ಮಚ್ಚಂಡ ಅಶೋಕ್, ಲಕ್ಷ್ಮಣ, ಮಂದಣ್ಣ, ಪ್ರಸನ್ನ ಕೊಡಿಪೇಟೆ, ಐ.ಎಚ್.ನಿಂಗಪ್ಪ, ರಾಜೇಶ್ ಲಿಂಗೇರಿ, ಉಮಾಶಂಕರ್, ರಾಜಶೇಖರ್, ಸಂದೀಪ್ ಕೂಗೂರು, ಎಚ್.ಈ. ರಮೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts