More

    ಮಳೆ ಹಾನಿಗೆ ಸಂತ್ರಸ್ತರಿಗೆ ಮೊದಲು ಪರಿಹಾರ ಕೊಡಿ: ಗೋಪಾಲಕೃಷ್ಣ ಬೇಳೂರು

    ಸಾಗರ: ತಾಲೂಕಿನಲ್ಲಿ ವಿಪರೀತ ಮಳೆಯಿಂದಾಗಿ ಸಾಕಷ್ಟು ಕಡೆಗಳಲ್ಲಿ ಮನೆ ಬಿದ್ದಿದ್ದು, ಮನೆ ಕಳೆದುಕೊಂಡವರಿಗೆ ತಕ್ಷಣ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮೊದಲೇ ಜನ ಸಂಕಟದಲ್ಲಿರುತ್ತಾರೆ, ಅಂತಹವರಿಗೆ ದಾಖಲೆಗಳನ್ನು ಕೇಳಿ ಸುತ್ತಾಡಿಸಬೇಡಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಎಚ್ಚರಿಕೆ ನೀಡಿದರು.

    ಮಳೆಯಿಂದ ಕಾಂಪೌಂಡ್ ಕುಸಿದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ನಗರ ವ್ಯಾಪ್ತಿಯಲ್ಲಿ 3-4 ಮನೆಗಳು ಬಿದ್ದಿದ್ದು, ಉರ್ದು ಶಾಲೆ ಕಾಂಪೌಂಡ್ ಕುಸಿದಿದೆ. ಮಾಸೂರು ಮತ್ತು ಆನಂದಪುರದಲ್ಲೂ ಮನೆ ಕುಸಿದಿದೆ ಎಂದರು.
    ಪರಿಹಾರ ಕೊಡುವಾಗ ಎ, ಬಿ, ಸಿ ಎಂಬ ವಿಂಗಡಣೆ ಮಾಡುವುದು ಅವೈಜ್ಞಾನಿಕ ಕ್ರಮ. ಇದರಿಂದ ಮನೆ ಕಳೆದುಕೊಂಡವರಿಗೆ ನಷ್ಟವಾಗುತ್ತಿದೆ. ಪರಿಹಾರ ಕೊಡುವಾಗ ನ್ಯಾಯಸಮ್ಮತವಾಗಿರಬೇಕು. ಈ ಬಗ್ಗೆ ಸರ್ಕಾರದ ಜತೆ ಸಹ ಮಾತುಕತೆ ನಡೆಸಲಾಗುತ್ತದೆ. ನಗರ ವ್ಯಾಪ್ತಿಯಲ್ಲಿ ಮನೆ ಬಿದ್ದವರಿಗೆ ನಗರಸಭೆಯಿಂದ ತಕ್ಷಣ 10 ಸಾವಿರ ರೂ. ಪರಿಹಾರ ನೀಡುತ್ತಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಮಳೆಯಿಂದ ಮನೆ ಗೋಡೆ ಕುಸಿದವರಿಗೆ ಗ್ರಾಪಂನಿಂದ ಪರಿಹಾರ ಕೊಡಿಸಲಾಗುತ್ತದೆ. ನಂತರ ಸರ್ಕಾರದ ಪರಿಹಾರ ಧನವನ್ನು ಕಂದಾಯ ಇಲಾಖೆ ಮೂಲಕ ನೀಡಲಾಗುತ್ತದೆ ಎಂದು ವಿವರಿಸಿದರು.
    ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಸಹ ಶಿಥಿಲಾವಸ್ಥೆಯಲ್ಲಿವೆ. ಈ ಹಿನ್ನೆಲೆಯಲ್ಲಿ ನಗರಸಭೆಯಿಂದ ಕಾಂಪೌಂಡ್ ನಿರ್ಮಿಸಲು ಸೂಚಿಸಲಾಗಿದೆ. ತರಗತಿಗಳಿಗೆ ತೊಂದರೆ ಆಗದಂತೆ ಐದು ಕೊಠಡಿಗಳನ್ನು ತಾತ್ಕಾಲಿಕವಾಗಿ ರಿಪೇರಿ ಮಾಡಲು ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಉರ್ದು ಶಾಲೆಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
    ಇದೇ ಸಂದರ್ಭದಲ್ಲಿ ನಿರ್ಮಾಣ ಹಂತದಲ್ಲಿರುವ ಮೀನು ಮಾರುಕಟ್ಟೆಯನ್ನು ಪರಿಶೀಲನೆ ನಡೆಸಿದ ಗೋಪಾಲಕೃಷ್ಣ ಬೇಳೂರು, ಮುಂದಿನ ಮೂರು ತಿಂಗಳೊಳಗೆ ಮೀನು ಮಾರುಕಟ್ಟೆ ಲೋಕಾರ್ಪಣೆ ಆಗಬೇಕೆಂದು ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts