More

    ಭ್ರಷ್ಟಾಚಾರ ಆರೋಪದಡಿ ವಶಪಡಿಸಿಕೊಂಡಿದ್ದ 12.15 ಲಕ್ಷ ರೂ. ಹಿಂದಿರುಗಿಸಿ: ಹೈಕೋರ್ಟ್​ ಆದೇಶ

    ಬೆಂಗಳೂರು: ಭ್ರಷ್ಟಾಚಾರ ಆರೋಪದಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶಿವಲಿಂಗಮೂರ್ತಿ ಮನೆ ಮೇಲೆ 20 ವರ್ಷಗಳ ಹಿಂದೆ ದಾಳಿ ನಡೆಸಿ, ವಶಪಡಿಸಿಕೊಂಡಿದ್ದ ಒಟ್ಟು 12.15 ಲಕ್ಷ ರೂಪಾಯಿ ಹಿಂದಿರುಗಿಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

    ಭ್ರಷ್ಟಚಾರ ಪ್ರಕರಣದಿಂದ ಶಿವಲಿಂಗಮೂರ್ತಿ ಅವರನ್ನು ಖುಲಾಸೆಗೊಳಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶ ರದ್ದು ಕೋರಿ ಸರ್ಕಾರ (ಲೋಕಾಯುಕ್ತ ಪೊಲೀಸರು) ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಮತ್ತೊಂದೆಡೆ, ಲೋಕಾಯುಕ್ತ ಪೊಲೀಸರು ವಶ ಪಡಿಸಿಕೊಂಡಿದ್ದ 12.15 ಲಕ್ಷ ರೂ. ಹಿಂದಿರುಗಿಸಲು ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಕೋರಿ ಶಿವಲಿಂಗಮೂರ್ತಿ ಸಹ ಮೇಲ್ಮನವಿ ಸಲ್ಲಿಸಿದ್ದರು.

    ಎರಡೂ ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ, ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿದೆಯಲ್ಲದೆ, ಶಿವಲಿಂಗಮೂರ್ತಿ ಅವರನ್ನು ಭ್ರಷ್ಟಾಚಾರ ಪ್ರಕರಣದಿಂದ ಖುಲಾಸೆಗೊಳಿಸಿ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶ ಎತ್ತಿ ಹಿಡಿದಿದೆ.

    ಆರೋಪ ಸಾಬೀತಾಗಿಲ್ಲ: ಶಿವಲಿಂಗಮೂರ್ತಿ ಮೇಲ್ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ಹಣ ಶಿವಲಿಂಗ ಮೂರ್ತಿಯವರ ಆದಾಯಕ್ಕೂ ಮೀರಿದ್ದಾಗಿದೆ ಎಂಬುದನ್ನು ಸಾಬೀತುಪಡಿಸಲು ಲೋಕಾಯುಕ್ತ ಪೊಲೀಸರು ಯಾವುದೇ ತನಿಖೆ ನಡೆಸಿಲ್ಲ. ವಿಶೇಷ ನ್ಯಾಯಾಲಯ ಈಗಾಗಲೇ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಆದ್ದರಿಂದ, ಅವರ ಮನೆಯಿಂದ ವಶಪಡಿಸಿಕೊಂಡಿರುವ 12.15 ಲಕ್ಷ ರೂ. ಹಿಂದಿರುಗಿಸಬೇಕು ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿದೆ.

    20 ವರ್ಷಗಳ ಹಿಂದೆ ನಡೆದಿದ್ದ ದಾಳಿ: 2003ರಲ್ಲಿ ಐಟಿಐ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮತ್ತು ಐಟಿಐ ಕಾಲೇಜುಗಳಿಂದ ಲಂಚ ಪಡೆದು, ಅವ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪದಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆಯ ನಿರ್ದೇಶಕರ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಕಚೇರಿ ಆವರಣದಲ್ಲಿ ಖಾಸಗಿ ವ್ಯಕ್ತಿಗಳಿಬ್ಬರು ಶಿವಲಿಂಗಮೂರ್ತಿ ಪರ ಹಣ ಸ್ವೀಕರಿಸುತ್ತಿರುವುದಾಗಿ ತಿಳಿದು 7 ಲಕ್ಷ ರೂ. ವಶಕ್ಕೆ ಪಡೆದಿದ್ದರು. ಅದೇ ಸಂದರ್ಭದಲ್ಲಿ ಶಿವಲಿಂಗಮೂರ್ತಿ ಮನೆ ಮೇಲೆಯೂ ದಾಳಿ ನಡೆಸಿದ್ದರು. ಈ ವೇಳೆ, ಮನೆಯಲ್ಲಿ 12.15 ಲಕ್ಷ ರೂ. ದೊರೆತಿತ್ತು. ಹಣದ ಮೂಲದ ಬಗ್ಗೆ ಶಿವಲಿಂಗಮೂರ್ತಿ ಸಮರ್ಪಕ ವಿವರಣೆ ನೀಡಿಲ್ಲ ಎಂಬ ಕಾರಣಕ್ಕೆ ಅದನ್ನು ವಶಪಡಿಸಿಕೊಳ್ಳಲಾಗಿತ್ತು. ಆ ಹಣ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಸುಪರ್ದಿಯಲ್ಲಿತ್ತು.

    ಖುಲಾಸೆಗೊಳಿಸಿದ್ದ ವಿಶೇಷ ಕೋರ್ಟ್: ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ವಿಶೇಷ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಆರೋಪಿ ವಿರುದ್ಧ ಆರೋಪಗಳನ್ನು ಸಾಬೀತುಪಡಿಸುವ ಸಾಕ್ಷ್ಯಾಧಾರವಿಲ್ಲ ಎಂಬ ಕಾರಣ ನೀಡಿ, ಶಿವಲಿಂಗಮೂರ್ತಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಆದರೆ, ವಶಪಡಿಸಿಕೊಂಡಿದ್ದ 12.15 ಲಕ್ಷ ರೂ. ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಆದೇಶ ಮಾಡಿರಲಿಲ್ಲ. ಇದರಿಂದ, ಶಿವಲಿಂಗಮೂರ್ತಿ ಹಣ ಹಿಂದಿರುಗಿಸಲು ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮಧ್ಯೆ ಖುಲಾಸೆ ಆದೇಶ ರದ್ದುಕೋರಿ ಲೋಕಾಯುಕ್ತ ಪೊಲೀಸರೂ ಹೈಕೋರ್ಟ್ ಮೆಟ್ಟಿಲೇರಿದ್ದರು.

    ಗರ್ಲ್​​ಫ್ರೆಂಡ್​ ತಾಯಿಗೆ ಹೆದರಿ ಸತ್ತೇ ಹೋದ; ಆಗಿದ್ದಾದರೂ ಏನು?

    ಮೊಮ್ಮಗಳ ಮೇಲೇ ಲೈಂಗಿಕ ದೌರ್ಜನ್ಯ ಎಸಗಿದ್ದವನಿಗೆ 20 ವರ್ಷ ಶಿಕ್ಷೆ; ಅಜ್ಜ ಹಾಕಿದ್ದ ಬೆದರಿಕೆಯಾದರೂ ಎಂಥದ್ದು!?

    ಐವತ್ತಕ್ಕೂ ಅಧಿಕ ಜನರಿಂದ ಚೀಟಿ ಕಟ್ಟಿಸಿಕೊಂಡು ಪರಾರಿಯಾದ ದಂಪತಿ; ಕೋಟಿಗಟ್ಟಲೆ ರೂ. ವಂಚನೆ, ಪೊಲೀಸರಿಗೆ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts