More

    ಬೀಗರ ಊಟದಲ್ಲಿ ಮಾಂಸಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ಬಾಲಕಿ ಸಾವು

    ಚನ್ನಪಟ್ಟಣ: ತಾಲೂಕಿನ ಮೋಳೆದೊಡ್ಡಿ ಗ್ರಾಮದಲ್ಲಿ ಮಂಗಳವಾರ ಬೀಗರ ಊಟದಲ್ಲಿ ಮಾಂಸಹಾರ ಸೇವಿಸಿ ಅಸ್ವಸ್ಥವಾಗಿದ್ದ ಆರು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಗ್ರಾಮದ ವೆಂಕಟಬೈರ ಹಾಗೂ ಸೌಮ್ಯ ಎಂಬ ದಂಪತಿಗಳ ಪುತ್ರಿ ಚೈತನ್ಯಾ ಮೃತೆ. ಬುಧವಾರ ಬೆಳಗ್ಗೆ ವಾಂತಿ ಭೇದಿಯಿಂದ ಅಸ್ವಸ್ಥಳಾದ ಈಕೆಯನ್ನು ಕೂಡಲೇ ಮಂಡ್ಯ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾಳೆ.

    ತಂದೆ ಆಟೋ ಚಾಲಕನಾಗಿದ್ದು, ಯಾವುದೇ ಕಾರ್ಯಕ್ರಮವಾದರೂ ಮಗಳನ್ನು ತಪ್ಪದೇ ಜತೆಯಲ್ಲಿ ಕರೆದೊಯ್ಯುತ್ತಿದ್ದರು. ತಂದೆ ಕೂಡ ಆಸ್ವಸ್ಥನಾಗಿದ್ದು, ನಗರದ ಸಾರ್ವಜನಿಕ ಅಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

    ಆರೋಗ್ಯದಲ್ಲಿ ಚೇತರಿಕೆ: ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದ ಹಲವರ ಅರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಮತ್ತೆ ಕೆಲವರ ಆರೋಗ್ಯದ ಬಗ್ಗೆ ಸೂಕ್ತ ನಿಗಾವಹಿಸಲಾಗಿದೆ. ಗ್ರಾಮದಲ್ಲೂ ತಾತ್ಕಾಲಿಕವಾಗಿ ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಗ್ರಾಮಕ್ಕೆ ಜಿಲ್ಲಾ ನೋಡಲ್ ಅಧಿಕಾರಿ ಡಾ. ಪದ್ಮಾ, ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಪಿ.ರಾಜು, ಜಿಪಂ ಸದಸ್ಯೆಯರಾದ ವೀಣಾಚಂದ್ರು, ಸುಗುಣ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಘಟನೆ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೂಡ ಮಾಹಿತಿ ಪಡೆದಿದ್ದು, ಶುಕ್ರವಾರ ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ಮೋಳೆದೊಡ್ಡಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

    ಆತಂಕ ಬೇಡ

    ಬೀಗರೂಟದಲ್ಲಿ ಊಟ ಸೇವಿಸಿದ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಗ್ರಾಮ ಸೇರಿದಂತೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮುನ್ನೆಚ್ಚರಿಕೆಯಾಗಿ ಜಿಲ್ಲಾ ಆಸ್ಪತ್ರೆ ಯಲ್ಲೂ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನೀರು, ಮಲಮೂತ್ರ ಹಾಗೂ ಆಹಾರವನ್ನು ಬೆಂಗಳೂರಿಗೆ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ವರದಿ ಬಂದ ನಂತರ ಸೂಕ್ತ ಕಾರಣ ತಿಳಿಯಲಿದೆ. ಅಸ್ವಸ್ಥರಿಗೆ ಬೇಕಾದ ಔಷಧ ಲಭ್ಯವಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಡಾ. ಪದ್ಮಾ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts