More

    ತೂಗುಸೇತುವೆ ಸರದಾರಗೆ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ

    ಕೋಟ: ಕೋಟತಟ್ಟು ಗ್ರಾಮಪಂಚಾಯಿತಿ, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಸಹಯೋಗದಲ್ಲಿ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ತೂಗುಸೇತುವೆಗಳ ಸರದಾರ, ಸುಳ್ಯದ ಗಿರೀಶ್ ಭಾರದ್ವಾಜ್ ಅವರಿಗೆ ಭಾನುವಾರ ಪ್ರದಾನಿಸಲಾಯಿತು.
    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾರದ್ವಾಜ್, ಹಳ್ಳಿಗಳಲ್ಲಿ ಸಾಕಷ್ಟು ಪ್ರತಿಭೆಗಳು ಇರುತ್ತದೆ ಅದನ್ನು ಹೊರಗೆಳೆಯಲು ಪ್ರಯತ್ನಿಸಬೇಕು. ಇದಕ್ಕೆ ಕಾರಂತರಂಥವರು ಪ್ರೇರಣೆಯಾಗುತ್ತಾರೆ ಎಂದರು. ಕಾರಂತರ ಪ್ರತಿ ಕಾದಂಬರಿಯಲ್ಲಿ ಅರ್ಥಪೂರ್ಣ ಜೀವನದ ಕಲೆಗಳಿವೆ. ಪಡೆದ ಅನುಭವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ನನ್ನ ಸಾಧನೆಗೆ ತಂದೆ -ತಾಯಿ, ಗುರುಗಳು ಮತ್ತು ಸಹೋದ್ಯೋಗಿಗಳು ಕಾರಣ ಎಂದರು.
    ಸಮಾಧಿ ನಿರ್ಮಾಣ: ಕಾರ್ಯಕ್ರಮ ಉದ್ಘಾಟಿಸಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಹಾನ್ ಚೇತನ ಡಾ.ಶಿವರಾಮ ಕಾರಂತರ ಹೆಸರನ್ನು ಚಿರಸ್ಥಾಯಿಯಾಗಿಸಲು ಪಣತೊಟ್ಟಿದ್ದೇವೆ. ಕುವೆಂಪು ಮಾದರಿಯಲ್ಲಿ ಡಾ.ಶಿವರಾಮ ಕಾರಂತರ ಸಮಾಧಿ ನಿರ್ಮಾಣವಾಗಲಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿಯಿಂದ ಕಾರಂತ ಥೀಂ ಪಾರ್ಕ್‌ಗೆ ಬರುವ ರಸ್ತೆಯ ಅಭಿವೃದ್ಧಿ ಮತ್ತು ಥೀಂ ಪಾರ್ಕ್ ಇನ್ನಷ್ಟು ಅಭಿವೃದ್ಧಿ ಪಡಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
    ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೂರ್ಮಾ ರಾವ್ ಪ್ರಶಸ್ತಿ ಪ್ರದಾನ ಮಾಡಿದರು.
    ಪ್ರಗತಿಪರ ಕೃಷಿಕ ರವೀಂದ್ರ ಐತಾಳ್ ಪಾರಂಪಳ್ಳಿ, ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕ ಯು.ಎಸ್ ಶೆಣೈ, ಯುವ ಗಾಯಕ ಸುರೇಶ್ ಕಾರ್ಕಡ, ಹಾಡು ರಚನೆಗಾರ ಹರೀಶ್ ವಡ್ಡರ್ಸೆ ಅವರನ್ನು ಗೌರವಿಸಲಾಯಿತು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಕುಮಾರ್ ಬೆಕ್ಕೇರಿ, ಬ್ರಹ್ಮಾವರ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಎಚ್.ಆರ್. ಇಬ್ರಾಹಿಂಪುರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ನಿಲಾವರ ಸುರೇಂದ್ರ ಅಡಿಗ, ಥೀಂ ಪಾರ್ಕ್ ನಿರ್ವಾಹಕಿ ಪೂರ್ಣಿಮಾ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಲತಾ ಹೆಗ್ಡೆ , ಕೋಟ ಗ್ರಾಮಪಂಚಾಯಿತಿ ಅಧ್ಯಕ್ಷ ಅಜಿತ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
    ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ. ಕುಂದರ್ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಸ್ತಾವಿಸಿದರು. ಪ್ರತಿಷ್ಠಾನದ ಟ್ರಸ್ಟಿ ರವಿ ಕಾರಂತ್ ಆಶಯಗೀತೆ ಹಾಡಿದರು.
    ಸಮಿತಿ ಸಂಚಾಲಕ ಯು.ಎಸ್.ಶೆಣೈ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಸಾಲಿಗ್ರಾಮ ಮಕ್ಕಳ ಮೇಳದ ಮುಖ್ಯಸ್ಥ ಎಚ್.ಶ್ರೀಧರ ಹಂದೆ ಯಕ್ಷಗಾನ ಶೈಲಿಯಲ್ಲಿ ಪ್ರಶಸ್ತಿ ಪುರಸ್ಕೃತ ಗುಣಗಾನ ಮಾಡಿದರು ಟ್ರಸ್ಟಿ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು. ಕೋಟತಟ್ಟು ಪಿಡಿಒ ಶೈಲಾ ಎಸ್. ಪೂಜಾರಿ ವಂದಿಸಿದರು. ಕಾರ್ಯಕ್ರಮಕ್ಕಿಂತ ಮೊದಲು ಕೋಟತಟ್ಟು ಪಂಚಾಯಿತಿ ಬಳಿಯಿಂದ ಅದ್ಧೂರಿ ಮೆರವಣಿಗೆಯ ಮೂಲಕ ಪ್ರಶಸ್ತಿ ಪುರಸ್ಕೃತರನ್ನು ಕರೆತರಲಾಯಿತು.

    Karantha huttura prashathi, Girish Bharadhwaj

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts