More

    ಅನಿವಾಸಿ ಉದ್ಯಮಿಯಿಂದ ಮನೆ ಉಡುಗೊರೆ

    ಮೋಹನದಾಸ್ ಮರಕಡ, ಬಂಟ್ವಾಳ
    ಎತ್ತಣ ಅಮೆರಿಕ… ಎತ್ತಣ ಮೇರಮಜಲು…. ಮೇರಮಜಲು ಗ್ರಾಮದ ಪಕ್ಕಲಪಾದೆ ಎಂಬಲ್ಲಿ ತೀರ ಬಡತನದಲ್ಲಿ ವಾಸಿಸುತ್ತಿರುವ ಚಂದ್ರಹಾಸ ಎಂಬುವರ ಕುಟುಂಬಕ್ಕೆ ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಅನಿವಾಸಿ ಭಾರತೀಯ ಉದ್ಯಮಿ ಗಿಲ್ಬರ್ಟ್ ಎಂ.ಎನ್.ಡಿಸೋಜ ಸುಂದರವಾದ ಮನೆ ನಿರ್ಮಿಸಿಕೊಟ್ಟಿದ್ದಾರೆ. ಪಕ್ಕಲಪಾದೆಯಲ್ಲಿ ಶನಿವಾರ ಭಗವತಿ ನಿಲಯದ ಗೃಹಪ್ರವೇಶ ನಡೆಯಲಿದೆ.

    ಚಂದ್ರಹಾಸ ಪತ್ನಿ ಮತ್ತು ಪುತ್ರಿ ಜತೆ ವಾಸವಿದ್ದು, ಎಂಟು ವರ್ಷಗಳ ಹಿಂದೆ ಅರ್ಧ ಕಟ್ಟಿದ್ದ ಮನೆಯಲ್ಲಿದ್ದರು. ಚಂದ್ರಹಾಸ ಅವರು ಹೋಟೆಲ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಮಗಳು ಒಂಬತ್ತನೆ ತರಗತಿ ಶಾಲೆಯಲ್ಲಿ ಓದುತ್ತಿದ್ದಾರೆ. ಅವರ ಕಷ್ಟದ ಬಗ್ಗೆ ಅರಿವಿದ್ದ ಮೇರಮಜಲು ಗ್ರಾಪಂ ಮಾಜಿ ಅಧ್ಯಕ್ಷ ಯೋಗೀಶ್ ಪ್ರಭು ಮನೆ ಕೆಲಸ ಪೂರ್ಣಗೊಳಿಸುವ ಸಂಕಲ್ಪ ಮಾಡಿದರು. ಇದಕ್ಕೆ ಪೂರಕವಾಗಿ ಜೆನ್ವೀನ್ ಫ್ರೆಂಡ್ಸ್ ಗ್ರೂಪಿನಲ್ಲಿ ಚರ್ಚಿಸಿ ಧನ ಸಂಗ್ರಹಕ್ಕೆ ಮುಂದಾದರು. ಆಗ ನೆರವಿಗೆ ಬಂದವರು ಅಮೆರಿಕ ನಿವಾಸಿ ಗಿಲ್ಬರ್ಟ್ ಎಂ.ಎನ್.ಡಿಸೋಜ.

    ಮೂಲತಃ ಮೇರಮಜಲು ಮಾಸ್ಟರ್ ಮಹಲ್ ನಿವಾಸಿಯಾಗಿರುವ ಗಿಲ್ಬರ್ಟ್ ಡಿಸೋಜ 17 ವರ್ಷಗಳಿಂದ ಅಮೆರಿಕದಲ್ಲಿದ್ದಾರೆ. ತಮ್ಮ ಆಪ್ತ ಸ್ನೇಹಿತ ಯೋಗೀಶ್ ಪ್ರಭು ಅವರಲ್ಲಿ ಚಂದ್ರಹಾಸರ ಮನೆಯ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡು ಕಳೆದ ತಿಂಗಳು ಊರಿಗೆ ಬಂದಿದ್ದರು. ನಂತರ ಮನೆಗೆ ಬೇಕಾದ ಎಲ್ಲ ವಸ್ತುಗಳನ್ನು ಪೂರೈಸಿ ಒಂದೊಂದೇ ಕೆಲಸಗಳನ್ನು ಮಾಡುತ್ತ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟಿದ್ದಾರೆ. 4 ಲಕ್ಷ ರೂ.ಗೂ ಅಧಿಕ ವೆಚ್ಚವಾಗಿದ್ದು ಜೆನ್ವೀನ್ ಫ್ರೆಂಡ್ಸ್ ಗ್ರೂಪ್‌ನ ಸರ್ವಧರ್ಮದ ಸದಸ್ಯರು ಕೂಡ ಕೈಜೋಡಿಸಿದ್ದಾರೆ. ಮೇರಮಜಲು ಹೋಲಿ ಫ್ಯಾಮಿಲಿ ಚರ್ಚ್ ವತಿಯಿಂದಲೂ ಹಣಕಾಸಿನ ನೆರವು ಲಭಿಸಿದೆ. ಜತೆಗೆ ಮುಸ್ಲಿಮರೂ ಹಣಕಾಸಿನ ನೆರವು ನೀಡಿ ಸಹಕರಿಸಿದ್ದಾರೆ.
    ಸ್ವಂತ ಮನೆಯ ಕೆಲಸ ಅರ್ಧಕ್ಕೆ ಬಾಕಿಯಾಗಿದ್ದರಿಂದ ಹತಾಶರಾಗಿದ್ದ ಚಂದ್ರಹಾಸರ ಮೊಗದಲ್ಲಿ ಈಗ ಮಂದಹಾಸ ಮೂಡಿದೆ. ನಗು ಅರಳಿದೆ. ಹತಾಶ ಭಾವ ತೊಲಗಿದೆ.

    ಜಾತಿ, ಧರ್ಮ ಮೀರಿದ ಕೆಲಸ

    ಕ್ರೈಸ್ತ ಧರ್ಮದವರಾದರೂ ಕಷ್ಟದಲ್ಲಿರುವ ಹಿಂದುವಿನ ಮನೆ ನಿರ್ಮಿಸಿಕೊಟ್ಟಿರುವ ಗಿಲ್ಬರ್ಟ್ ಎಂ.ಎನ್.ಡಿಸೋಜ ಅವರು ದೀಪಾವಳಿ ಉಡುಗೊರೆ ನೀಡಿದ್ದಾರೆ. ತನ್ನ ದುಡಿಮೆಯ ಒಂದು ಅಂಶವನ್ನು ಸಮಾಜಕ್ಕೆ ಅರ್ಪಿಸಿದ್ದೇನೆ ಎಂಬ ವಿನೀತ ಭಾವ ವ್ಯಕ್ತಪಡಿಸುತ್ತಾರೆ. ಜಾತಿ, ಧರ್ಮ ಯಾವುದೇ ಇರಲಿ ಮಾನವೀಯ ಸೇವೆ ದೇವರ ಸೇವೆ ಎಂದು ಪರಿಗಣಿಸಿ ಸೇವಾ ಕಾರ್ಯ ಮಾಡಿದ್ದಾಗಿ ತಿಳಿಸಿದ್ದಾರೆ.

    ಕಷ್ಟದಲ್ಲಿರುವ ಚಂದ್ರಹಾಸರ ಮನೆಯ ಬಗ್ಗೆ ಮಾಹಿತಿ ಪಡೆದು ಸ್ಪಂದಿಸಿದ್ದೇನೆ. ಜಾತಿ, ಧರ್ಮಕ್ಕಿಂತ ಮಾನವೀಯತೆ ಮುಖ್ಯ ಎಂಬುದು ನನ್ನ ಅನಿಸಿಕೆ. ಮನೆ ನಿರ್ಮಾಣ ಕಾರ್ಯದಲ್ಲಿ ಹಲವು ಜನ ನೆರವಾಗಿದ್ದಾರೆ. ಅವರಿಗೂ ಕೃತಜ್ಞತೆ.
    -ಗಿಲ್ಬರ್ಟ್ ಎಂ.ಎನ್.ಡಿಸೋಜ
    ಅನಿವಾಸಿ ಭಾರತೀಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts