More

    ಕಂದಾಯ ಇಲಾಖೆ ಸೇವೆಗಳನ್ನು ತ್ವರಿತವಾಗಿ ಪಡೆದುಕೊಳ್ಳಿ

    ತಿ.ನರಸೀಪುರ: ಕಂದಾಯ ಅದಾಲತ್ ಮೂಲಕ ಸಾರ್ವಜನಿಕರು ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ತ್ವರಿತವಾಗಿ ಪಡೆದುಕೊಳ್ಳಬಹುದು ಎಂದು ತಹಸೀಲ್ದಾರ್ ಟಿ.ಜೆ.ಸುರೇಶ್ ಆಚಾರ್ ತಿಳಿಸಿದರು.

    ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸೋಮವಾರ ಹಮ್ಮಿಕೊಂಡಿದ್ದ ಕಂದಾಯ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಈ ಕಾರ್ಯಕ್ರಮದಿಂದ ಸಾರ್ವಜನಿಕರಿಗೆ ಅನಗತ್ಯವಾಗಿ ಕಚೇರಿಗೆ ಅಲೆಯುವುದು ತಪ್ಪಲಿದೆ. ಅಧಿಕಾರಿಗಳು, ಸಿಬ್ಬಂದಿ ಹಾಗೂ ಸೇವೆ ಪಡೆಯುವ ಸಾರ್ವಜನಿಕರು ಮುಖಾಮುಖಿಯಾಗಿ ಸಂಪರ್ಕ ಸಾಧಿಸಿ ಕೆಲಸ ಮಾಡಿಸಿಕೊಳ್ಳಲು ಅವಕಾಶವಿರುತ್ತದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

    ಕಂದಾಯ ಇಲಾಖೆಯ ಕಾರ್ಯ ಒತ್ತಡದಿಂದ ಸಕಾಲದಲ್ಲಿ ಜನರಿಗೆ ಸ್ಪಂದಿಸಲು ಸಾಧ್ಯವಾಗದ ಕಾರಣ ಅದಾಲತ್ ಮೂಲಕ ಅರ್ಜಿಗಳ ವಿಲೇವಾರಿ ಮಾಡಲಾಗುತ್ತಿದೆ. ಕೆಲವೊಂದು ಖಾತೆಗಳು 3 ಅಥವಾ 4ನೇ ತಲೆಮಾರಿನ ಹೆಸರಿನಲ್ಲಿರುತ್ತವೆ. ಇದನ್ನು ಬದಲಾವಣೆ ಮಾಡಲು ಮರಣ ಪ್ರಮಾಣ ಪತ್ರದ ಅವಶ್ಯಕತೆ ಇರುತ್ತದೆ. ಅದು ದೊರಕದಿದ್ದರೂ ನಮ್ಮ ಅಧಿಕಾರಿಗಳು ವಾಸ ಸ್ಥಳದ ಮಹಜರು ಮಾಡುತ್ತಾರೆ. ಅದರ ಆಧಾರದ ಮೇಲೆ ಖಾತೆ ಬದಲಾವಣೆ ಮಾಡಲು ಅವಕಾಶ ಇರುತ್ತದೆ. ಆದರೆ ಅದಕ್ಕೆ ಸಂಬಂಧಿಸಿದ ಅಫಿಡವಿಟ್‌ಅನ್ನು ಒದಗಿಸಿಕೊಟ್ಟರೆ ಹಾಲಿ ಖಾತೆದಾರರಿಂದ ಪ್ರಸ್ತುತ ಜೀವಂತ ಇರುವ ಖಾತೆದಾರರ ಹೆಸರಿಗೆ ವರ್ಗಾವಣೆ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.

    ರೈತರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ಅದಾಲತ್‌ನ ಪ್ರಯೋಜನ ಪಡೆಯಬೇಕು. ಕೆಲವರು ಅದಾಲತ್ ಸೋಮವಾರವೇ ಕೊನೇ ದಿನ ಎಂಬ ಆತಂಕದಲ್ಲಿದ್ದಾರೆ. ಆದರೆ ಅದಾಲತ್ ನಿರಂತರ ಪ್ರಕ್ರಿಯೆಯಾಗಿದೆ. ತಾಲೂಕಿನಲ್ಲಿ 25 ಸಾವಿರ ಪೌತಿ ಖಾತೆಗಳಿವೆ. ಅದರಲ್ಲಿ ಕೆಲವೊಂದು ತಕರಾರಿನಲ್ಲಿ, ಕೆಲವು ನ್ಯಾಯಾಲಯದಲ್ಲಿವೆ. ಅಂತಹ ಖಾತೆಗಳನ್ನು ಪರಿಶೀಲಿಸಿ ಸಾಧ್ಯವಾದರೆ ಅನುಕೂಲ ಕಲ್ಪಿಸಿಕೊಡಲಾಗುತ್ತದೆ ಎಂದರು.

    ಇದೇ ವೇಳೆ 2023ರ ನವೆಂಬರ್ 6ರಿಂದ ನವೆಂಬರ್ 22ರವರೆಗೆ ಸಲ್ಲಿಕೆಯಾಗಿದ್ದ 374 ಅರ್ಜಿಗಳ ಪೈಕಿ ಅರ್ಹ 350 ಅರ್ಜಿಗಳನ್ನು ಪರಿಶೀಲಿಸಿ ಸ್ಥಳದಲ್ಲೇ ಪೌತಿ ಖಾತೆ ಹಾಗೂ ತಿದ್ದುಪಡಿ ಮಾಡಲು ತಹಸೀಲ್ದಾರರರು ಆದೇಶ ನೀಡಿದರು. ಕಂದಾಯ ಅದಾಲತ್‌ನಿಂದ 1,250 ಫಲಾನುಭವಿಗಳು ಪ್ರಯೋಜನ ಪಡೆದುಕೊಂಡರು.

    ಕಸಬಾ ಹೋಬಳಿಯ 45, ತಲಕಾಡಿನ 106, ಬನ್ನೂರು ಪುರಸಭೆ ವ್ಯಾಪ್ತಿಯ 100, ಮೂಗೂರು ಗ್ರಾಮದ 45, ಸೋಸಲೆಯ 54 ಅರ್ಜಿಗಳು ಸೇರಿದಂತೆ ಒಟ್ಟು 350 ಅರ್ಜಿಗಳನ್ನು ಅದಾಲತ್‌ನಲ್ಲಿ ವಿಲೇವಾರಿ ಮಾಡಲಾಯಿತು.

    ಗ್ರೇಡ್-2 ತಹಸೀಲ್ದಾರ್ ರಾಜಕಾಂತ್, ಕಸಬಾ ರೆವಿನ್ಯೂ ಇನ್ಸ್‌ಪೆಕ್ಟರ್ ಮಹೇಂದ್ರ, ಟಿ.ಪಿ.ನಾಗೇಶ್, ಪ್ರಥಮ ದರ್ಜೆ ಗುಮಾಸ್ತರಾದ ಚೆಲುವರಾಜು, ಮಂಜುಳಾ, ಗ್ರಾಮ ಲೆಕ್ಕಿಗರಾದ ಸೋಮಶೇಖರ್, ಆನಂದ್, ಪ್ರಮೋದ್, ಶ್ರೀನಿವಾಸ್‌ಮೂರ್ತಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts