More

    ಸರ್ಕಾರದ ವಿರುದ್ಧ ಚಳವಳಿಗೆ ಸಿದ್ಧರಾಗಿ

    ಬ್ಯಾಡಗಿ: ರೈತರು ಕೃಷಿ ಭೂಮಿ ಕಳೆದುಕೊಂಡು ಬೀದಿ ಪಾಲಾಗುವ ಮುನ್ನವೇ ಸರ್ಕಾರದ ವಿರುದ್ಧ ಚಳವಳಿಗೆ ಸಿದ್ಧರಾಗಬೇಕಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.

    ತಾಲೂಕಿನ ಮೊಟೇಬೆನ್ನೂರು ಗ್ರಾಮದ ನವೋದಯ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ರೈತ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತ ವಿರೋಧಿ ಕಾನೂನುಗಳ ಕುರಿತ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

    ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತರು ಬಂಡವಾಳಶಾಹಿಗಳಿಗೆ ಭೂಮಿ ಮಾರಿ, ಪುನಃ ಬಂಡವಾಳಶಾಹಿಗಳಿಂದ ಅನ್ನಬೇಡುವ ಪರಿಸ್ಥಿತಿ ಬರಲಿದೆ. ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ರೈತರು ಎಂದಿಗೂ ಒಪ್ಪುವುದಿಲ್ಲ ಎಂದು ಅರಿತ ಸರ್ಕಾರ, ಕರೊನಾ ರೋಗದತ್ತ ಜನರ ಚಿತ್ತ ಸೆಳೆದು, ಕಾಯ್ದೆ ತಿದ್ದುಪಡಿಗೆ ಸುಗ್ರಿವಾಜ್ಞೆ ತಂದಿದೆ ಎಂದು ಆರೋಪಿಸಿದರು.

    5 ವರ್ಷಗಳಲ್ಲಿ ಗೊಬ್ಬರದ ಬೆಲೆ ದುಪ್ಪಟ್ಟಾಗಿದ್ದು, ಧಾನ್ಯಗಳ ಬೆಲೆ ಮಾತ್ರ ಅಷ್ಟೇ ಇದೆ. ಬೆಳೆ ಖರ್ಚು- ವೆಚ್ಚ ಹೆಚ್ಚಾಗಿ, ಆದಾಯ ಇಳಿಮುಖದಿಂದ ರೈತರು ನಲುಗಿ ಹೋಗಿದ್ದಾರೆ ಎಂದರು.

    ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯುವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂದು ಹೇಳಿದರು.

    ಪ್ರಗತಿಪರ ಚಿಂತಕ ಶಿವಸುಂದರ, ರೈತ ಮುಖಂಡರಾದ ಕೆ.ಟಿ. ಗಂಗಾಧರ, ರುದ್ರಗೌಡ್ರ ಕಾಡನಗೌಡ್ರ, ಗಂಗಣ್ಣ ಎಲಿ, ಕಿರಣಕುಮಾರ ಗಡಿಗೋಳ, ಡಾ. ಪಿ.ಟಿ. ಲಕ್ಕಣ್ಣನವರ, ಮಲ್ಲೇಶ ಡಂಬಳ, ಜಾನ್ ಪುನೀತ್ ಇದ್ದರು.

    ವಿವಿಧ ತಾಲೂಕುಗಳ ರೈತ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

    15ರಂದು ಮೌನ ಪ್ರತಿಭಟನೆ: ಭೂ ಸುಧಾರಣೆ, ಎಪಿಎಂಸಿ ಮತ್ತು ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಾರ್ಯಾಲಯ ಎದುರು ಸ್ವಾತಂತ್ರ್ಯೊತ್ಸವ ದಿನ ಆ. 15ರಂದು ರೈತರು ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಲಿದ್ದಾರೆ ಎಂದು ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ ಹೇಳಿದರು.

    ತಾಲೂಕಿನ ಮೋಟೆಬೆನ್ನೂರಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಸುಧಾರಣೆ ಕಾಯ್ದೆ ಮೂಲಕ ಸರ್ಕಾರಗಳು ರೈತರ ಹಕ್ಕನ್ನು ಕಿತ್ತುಕೊಳ್ಳುವ ಮೂಲಕ ಕೃಷಿಯನ್ನು ಸಂಪೂರ್ಣ ನಾಶ ಮಾಡಲು ಹೊರಟಿವೆ. ರಾಜ್ಯದಲ್ಲಿ 1.5 ಲಕ್ಷ ಹೆಕ್ಟೇರ್ ಡೀಮ್್ಡ ಫಾರೆಸ್ಟ್ ಸರ್ಕಾರಿ ಭೂಮಿಯಿದ್ದು, ಅದನ್ನು ಉದ್ದಿಮೆಗಳಿಗೆ, ಬಂಡವಾಳಶಾಹಿಗಳಿಗೆ ಕೊಡಲಿ, ಫಲವತ್ತಾದ ಕೃಷಿಭೂಮಿಯೇ ಏಕೆ ಬೇಕು ಎಂದು ಸರ್ಕಾರಕ್ಕೆ ಪ್ರಶ್ನಿಸಿದರು. ರೈತರಿಗೆ ಮೋಸವೆಸಗುವ ಸರ್ಕಾರಕ್ಕೆ ತಕ್ಕಪಾಠ ಕಲಿಸಲಿದ್ದೇವೆ. ಕಾಯ್ದೆ ವಿರೋಧಿಸಿ ರಾಜ್ಯಾದ್ಯಂತ ದೊಡ್ಡ ಮಟ್ಟದ ಚಳವಳಿ ನಡೆಯಲಿದೆ ಎಂದರು.

    ಊರ ಬಾಗಿಲಿಗೆ ನಾಮಫಲಕ: ಕೃಷಿ ಭೂಮಿ ಮಾರಾಟದ ಸರಕಲ್ಲ, ಬಂಡವಾಳಶಾಹಿಗಳಿಗೆ ಹಾಗೂ ಭೂ ಕಳ್ಳರಿಗೆ ಗ್ರಾಮದೊಳಗೆ ಪ್ರವೇಶವಿಲ್ಲ ಎಂಬ ನಾಮಫಲಕವನ್ನು ರಾಜ್ಯದ ಎಲ್ಲ ಗ್ರಾಮಗಳಲ್ಲಿ ಅಳವಡಿಸಲು ರೈತ ಸಂಘ ನಿರ್ಧರಿಸಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts