

ಬೆಂಗಳೂರು: ನಮ್ಮ ತಂದೆ ಬಂಗಾರಪ್ಪ ಅವರು ಇದ್ದ ಪಕ್ಷವನ್ನು ನಾನು ಸೇರಿದ್ದೇನೆ. ಪಕ್ಷಕ್ಕೆ ನಾನು ಬದ್ಧಳಾಗಿರುತ್ತೇನೆ ಎಂದು ನಟ ಶಿವರಾಜ್ಕುಮಾರ್ ಅವರ ಧರ್ಮಪತ್ನಿ ಗೀತಾ ಶಿವರಾಜ್ಕುಮಾರ್ ಅವರು ಹೇಳಿದರು.
ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೀತಾ ಶಿವರಾಜ್ಕುಮಾರ್, ಐತಿಹಾಸಿಕ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ನನ್ನ ತಮ್ಮ ಮಧು ಬಂಗಾರಪ್ಪ ಕಾಂಗ್ರೆಸ್ ಸೇರಿದ್ದಾಗಿನಿಂದ ನಾನು ಕಾಂಗ್ರೆಸ್ ಸೇರಿದ್ದೆ. ಇದೀಗ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಿದ್ದೇನೆ ಎಂದರು.
ನಮ್ಮ ತಮ್ಮನ ಪರವಾಗಿ ಪ್ರಚಾರ ಮಾಡಿದ್ದೇನೆ. ಶಿವರಾಜ್ಕುಮಾರ್ ಕೂಡ ಕೆಲ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಾರೆ. ಶೂಟಿಂಗ್ನಲ್ಲಿ ಬ್ಯೂಸಿ ಇರುವ ಕಾರಣ ಸದ್ಯಕ್ಕೆ ಪ್ರಚಾರದಲ್ಲಿ ಭಾಗಿಯಾಗಿಲ್ಲ. ನಾನು ಪ್ರಚಾರದಲ್ಲಿ ತೊಡಗಿಕೊಂಡಿದ್ದೇನೆ. ಪಕ್ಷ ಹೇಳಿದ ಕಡೆ ನಾನು ಪ್ರಚಾರ ಮಾಡುತ್ತೇನೆ. ಕುಮಾರ ಬಂಗಾರಪ್ಪ ಬಗ್ಗೆ ನಾನು ಮಾತನಾಡಲ್ಲ ಎಂದರು.
ಗೀತಾ ಶಿವರಾಜ್ಕುಮಾರ್ ಅವರು 2014 ರಲ್ಲಿ ಜೆಡಿಎಸ್ ಪಕ್ಷದಿಂದ ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಸ್ಫರ್ಧೆ ಮಾಡಿದ್ದರು. ಬಿಎಸ್ವೈ ವಿರುದ್ಧ ಸ್ಪರ್ಧಿಸಿದ್ದ ಅವರು ಸೋಲುಂಡಿದ್ದರು. ಆಗ ಸಹೋದರ ಮಧು ಬಂಗಾರಪ್ಪ ಅವರು ಜೆಡಿಎಸ್ ಪಕ್ಷದಲ್ಲಿದ್ದರು. ಇದೀಗ ಇಬ್ಬರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. (ದಿಗ್ವಿಜಯ ನ್ಯೂಸ್)