More

    ಲಿಂಗಾಯತರ ಓಲೈಸಲು ಶೆಟ್ಟರ್‌ಗೆ ಮಣೆ

    ಹುಬ್ಬಳ್ಳಿ: ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಮತಗಳು ಕಾಂಗ್ರೆಸ್‌ನತ್ತ ವಾಲಿದ್ದರೂ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಲಿಂಗಾಯತರಿಗೆ ನಿರೀಕ್ಷಿತ ಅವಕಾಶ ಸಿಕ್ಕಿಲ್ಲ ಎನ್ನುವ ಅಸಮಾಧಾನ ಸಮಾಜದಿಂದ ವ್ಯಕ್ತವಾಗಿತ್ತು. ಆಕ್ರೋಶ ಶಮನಗೊಳಿಸಲು ಇದೀಗ ವಿಧಾನ ಪರಿಷತ್‌ಗೆ ಪ್ರಕಟವಾದ ಕಾಂಗ್ರೆಸ್ ಟಿಕೆಟ್ ಪಟ್ಟಿಯಲ್ಲಿ ಲಿಂಗಾಯತ ಮುಖಂಡ ಜಗದೀಶ ಶೆಟ್ಟರ್‌ಗೆ ಅವಕಾಶ ಕಲ್ಪಿಸಲಾಗಿದೆ.
    ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ವಂಚಿತರಾಗಿದ್ದರಿಂದ ಜಗದೀಶ ಶೆಟ್ಟರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಆಗ ‘ಬಿಜೆಪಿಯು ಲಿಂಗಾಯತರನ್ನು ಕಡೆಗಣಿಸುತ್ತಿದೆ’ ಎಂದು ಶೆಟ್ಟರ್ ಗುರುತರ ಆರೋಪ ಮಾಡಿದ್ದರು. ಲಿಂಗಾಯತ ಮತಗಳು ಕಾಂಗ್ರೆಸ್‌ನಲ್ಲಿ ಧ್ರುವೀಕರಣಗೊಳ್ಳಲಿವೆ ಎನ್ನುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದರು. ಚುನಾವಣೆಯ ಫಲಿತಾಂಶವೂ ಬಂತು. ಆದರೆ, ಜಗದೀಶ ಶೆಟ್ಟರ್ ಸೋಲುಂಡರು. ‘ತಾವು ಸೋತಿದ್ದರೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಂಡು ಬರಲು ತಾವೇ ಕಾರಣ’ ಎಂದು ಶೆಟ್ಟರ್ ಸಮರ್ಥಿಸಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಪಕ್ಷ ವಿಧಾನ ಪರಿಷತ್ ಸದಸ್ಯತ್ವ ಕಲ್ಪಿಸಿ ಸಚಿವ ಸ್ಥಾನ ನೀಡುವ ಆಶಯವನ್ನೂ ಹೊಂದಿದ್ದರು. ಈ ವಿಚಾರವನ್ನು ಮಾಧ್ಯಮದ ಎದುರು ಹಂಚಿಕೊಂಡಿದ್ದರು. ಆದರೆ, ಅವರಿಟ್ಟುಕೊಂಡ ನಿರೀಕ್ಷೆಯಂತೆ ಸಚಿವ ಸ್ಥಾನ ಸಿಗಲಿಲ್ಲ. ಇದು ಸಹಜವಾಗಿ ಶೆಟ್ಟರ್ ಅವರಿಗೆ ಬೇಸರ ತಂದಿತ್ತು.
    ಈ ಮಧ್ಯೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗಿದೆ ಎಂದು ಲಿಂಗಾಯತ ಸಮಾಜದ ಕೆಲ ಮುಖಂಡರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಈ ಕಾವು ಇರುವಾಗಲೇ ವಿಧಾನ ಪರಿಷತ್‌ನ ಕಾಂಗ್ರೆಸ್ ಟಿಕೆಟ್ ಶೆಟ್ಟರ್‌ಗೆ ಸಿಗಲಿದೆ ಎನ್ನುವ ಸುದ್ದಿ ಹರಿದಾಡಿತ್ತು. ಹಾಗಂತ ವಿಧಾನ ಪರಿಷತ್ ಸ್ಥಾನ ಕಲ್ಪಿಸುವ ಬಗ್ಗೆ ಪಕ್ಷದ ಮುಖಂಡರಾರೂ ತಮ್ಮೊಂದಿಗೆ ಮಾತನಾಡಿಲ್ಲವೆಂದು ಮಾಧ್ಯಮದ ಎದುರು ಶೆಟ್ಟರ್ ಹೇಳಿಕೊಂಡಿದ್ದರು. ಆದರೀಗ ಶೆಟ್ಟರ್ ಅವರಿಗೆ ಅವಕಾಶ ಕಲ್ಪಿಸಿ ಲಿಂಗಾಯತ ಆಕ್ರೋಶ ಸ್ಫೋಟಗೊಳ್ಳುವುದನ್ನು ಕಾಂಗ್ರೆಸ್ ವರಿಷ್ಠರು ತಡೆದಿದ್ದಾರೆ ಎಂದೇ ವಿಶ್ಲೇಷಲಾಗುತ್ತಿದೆ.

    ಅದೃಷ್ಟದ ರಾಜಕಾರಣಿ: ಜಗದೀಶ ಶೆಟ್ಟರ್ ಅವರನ್ನು ಅದೃಷ್ಟದ ರಾಜಕಾರಣಿ ಎಂದೇ ಕರೆಯಲಾಗುತ್ತದೆ. 1994ರಿಂದ ಅಧಿಕಾರ ರಾಜಕೀಯದಿಂದ ದೂರ ಉಳಿಯದ ಶೆಟ್ಟರ್ ಪ್ರಸಕ್ತ ಚುನಾವಣೆಯಲ್ಲಿ ಸೋಲುಣ್ಣುವಂತಾಯಿತು. ಇನ್ನೇನು ರಾಜಕೀಯ ಭವಿಷ್ಯ ಮುಗಿಯಿತು ಎಂದು ಅನೇಕರು ಆಡಿಕೊಂಡಿದ್ದರು. ಆದರೀಗ ಪುನಃ ಶೆಟ್ಟರ್ ಅವರ ಅದೃಷ್ಟ ಮತ್ತೆ ಖುಲಾಯಿಸಿದೆ.

    ಮತಕ್ಕಾಗಿ ಗಾಳ: ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್‌ಗೆ ಮುಂಬರುವ ಲೋಕಸಭೆ ಚುನಾವಣೆ ದೊಡ್ಡ ಟಾಸ್ಕ್ ಆಗಿದೆ. ಲಿಂಗಾಯತರ ಕಡೆಗಣನೆ ಎನ್ನುವ ಅಸಮಾಧಾನ ಶಮನಗೊಳಿಸಲು ಶೆಟ್ಟರ್‌ಗೆ ಮಣೆ ಹಾಕಲಾಗಿದೆ. ತನ್ಮೂಲಕ ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತ ಮತಕ್ಕಾಗಿ ಗಾಳ ಹಾಕುವ ಪ್ರಯತ್ನವೂ ಇದಾಗಿದೆ ಎನ್ನಲಾಗಿದೆ.

    ಯಾವುದೇ ಶರತ್ತಗಳನ್ನು ಹಾಕದೆ ನಾನು ಕಾಂಗ್ರೆಸ್ ಸೇರಿದ್ದೆ. ಪಕ್ಷ ಗೌರವದಿಂದ ನಡೆಸಿಕೊಳ್ಳಬೇಕೆಂದು ಕೇಳಿಕೊಂಡಿದ್ದೆ. ಅದೇ ರೀತಿಯಾಗಿ ಗೌರವ ನೀಡಲಾಗುತ್ತಿದೆ. ಮುಂದಿನ ಲೋಕಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ಇನ್ನೂ ಹೆಚ್ಚಿನ ಸ್ಥಾನಮಾನ ನೀಡುವುದಾಗಿ ವರಿಷ್ಠರು ಹೇಳಿದ್ದಾರೆ. ವರಿಷ್ಠರಿಗೆ ನಾನು ಆಭಾರಿಯಾಗಿದ್ದೇನೆ.

    I ಜಗದೀಶ ಶೆಟ್ಟರ್, ಮಾಜಿ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts