More

    ಕಡೇಕೋಡಿಯಲ್ಲಿ ಟ್ಯಾಂಕರ್​ನಿಂದ ಅನಿಲ ಸೋರಿಕೆ

    ಕುಮಟಾ: ತಾಲೂಕಿನ ಕಡೇಕೋಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥದಲ್ಲಿ ಟ್ಯಾಂಕರ್​ವೊಂದರಿಂದ ಅನಿಲ ಸೋರಿಕೆಯಾಗಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.

    ಗೋವಾ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಟ್ಯಾಂಕರ್ ಹಿಂಭಾಗದ ಪೈಪ್​ಗಳ ಮೂಲಕವೇ ಸೋರುತ್ತಿದ್ದ ಬಿಳಿ ಬಣ್ಣದ ದ್ರವವು ತಕ್ಷಣ ಮೋಡದಂತೆ ಸುತ್ತಲೂ ಪಸರಿಸತೊಡಗಿತ್ತು. ಜನ ಗಾಬರಿಯಾಗಿ ಮನೆಗಳಿಂದ ಹೊರಬಂದು ನಿಂತರೆ, ವಾಹನಗಳು ಅಲ್ಲಲ್ಲೇ ನಿಂತು ಹಿಂತಿರುಗಿ ದೂರ ಸರಿಯತೊಡಗಿದವು. 15 ವರ್ಷದ ಹಿಂದೆ ಬರ್ಗಿಯಲ್ಲಿ ನಡೆದ ಟ್ಯಾಂಕರ್ ದುರಂತವೂ ಜನರ ಸ್ಮರಣೆಗೆ ಬಂದು ಏನಾಗಿದೆ ಎಂದು ಟ್ಯಾಂಕರ್ ಚಾಲಕನನ್ನು ಭಯದಿಂದಲೇ ವಿಚಾರಿಸಿದರು.

    ಬಳಿಕ ಸೋರುತ್ತಿದ್ದ ಟ್ಯಾಂಕರ್ ಚಾಲಕ ಜನರಿಗೆ ಮಾಹಿತಿ ನೀಡಿ, ಇದು ಲಿಕ್ವಿಡ್ ನೈಟ್ರೋಜನ್ ದ್ರವವಾಗಿದ್ದು ಅಪಾಯವಿಲ್ಲ. ತಂತ್ರಜ್ಞರಿಗೆ ಕರೆ ಮಾಡಿದ್ದೇನೆ. ಬಂದು ಸರಿಪಡಿಸುತ್ತಾರೆ. ಯಾರೂ ಹೆದರಬೇಕಾಗಿಲ್ಲ ಎಂದು ತಿಳಿಸಿದನು.

    ಇದರಿಂದ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸ ತೊಡಗಿ, ಸಾರ್ವಜನಿಕರು ಸಮಾಧಾನದ ನಿಟ್ಟುಸಿರು ಬಿಟ್ಟರು. ಬಳಿಕ ಚಾಲಕ ಟ್ಯಾಂಕರ್ ಅನ್ನು ಹೊಳೆಗದ್ದೆ ಟೋಲ್ ನಾಕಾದತ್ತ ಮುಂದಕ್ಕೆ ಸಾಗಿಸಿದನು ಎಂಬ ಮಾಹಿತಿ ಲಭಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts