More

    ರಸ್ತೆಗೆ ಹರಿಯುತ್ತಿದೆ ರೇಷ್ಮೆತ್ಯಾಜ್ಯ ನೀರು ; ಕೆಸರುಗದ್ದೆಯಂತಾದ ನಲ್ಲೀಮರದಹಳ್ಳಿ ಮಾರ್ಗ 

    ಶಿಡ್ಲಘಟ್ಟ: ರೇಷ್ಮೆ ಕಾರ್ಖಾನೆಯ ತ್ಯಾಜ್ಯ ನೀರನ್ನು ರಸ್ತೆಗೆ ಹರಿಸುತ್ತಿರುವ ಕಾರಣ ನಗರ ಸಮೀಪದ ನಲ್ಲೀಮರದಹಳ್ಳಿ ಮಾರ್ಗ ಕೆಸರುಗದ್ದೆಯಂತಾಗಿದ್ದು, ಸಾರ್ವಜನಿಕರು ಮೂಗುಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

    ನಗರಕ್ಕೆ ಹೊಂದಿಕೊಂಡಂತಿರುವ ನಲ್ಲಿಮರದಹಳ್ಳಿಯ ಮುಖ್ಯರಸ್ತೆಯ ಪಕ್ಕದಲ್ಲೇ ರೇಷ್ಮೆ ಕಾರ್ಖಾನೆ ಇದೆ. ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಹರಿಬಿಡಬೇಕು, ಆದರೆ ಇಲ್ಲಿ ನೇರವಾಗಿ ರಸ್ತೆಗೆ ಹರಿಸುತ್ತಿದ್ದು ತ್ಯಾಜ್ಯದ ದುರ್ನಾತದಿಂದ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಗಿದೆ.

    ಸಮಸ್ಯೆ ಬಗ್ಗೆ ಈಗಾಗಲೇ ತಾಲೂಕು ಕಚೇರಿ, ನಗರಸಭೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸ್ಥಳಿಯರು ಮನವಿ ಸಲ್ಲಿಸಿದ್ದಾರಾದರೂ ಇದುವರೆಗೂ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ. ಮನವಿ ನೀಡಿದ ನಂತರ ಒಂದೆರಡು ದಿನಗಳು ನಿಲ್ಲಿಸುತ್ತಾರೆ, ಮತ್ತೆ ಎಂದಿನಂತೆ ರಸ್ತೆಗೆ ತ್ಯಾಜ್ಯ ನೀರನ್ನು ಹರಿಸುತ್ತಾರೆ ಎನ್ನುವುದು ಗ್ರಾಮಸ್ಥರ ಆರೋಪ.

    ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲೇ ದಿನ ದೂಡುತ್ತಿದ್ದೇವೆ, ಈಗಾಗಲೇ ಕೆಲವರು ಅನಾರೋಗ್ಯದಿಂದ ಆಸ್ಪತ್ರೆಗಳಿಗೂ ದಾಖಲಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ರೇಷ್ಮೆ ಕಾರ್ಖಾನೆಯನ್ನು ಬೇರೆಡೆಗೆ ಸ್ಥಳಾಂತರಿಸಿ, ರಸ್ತೆ ದುರಸ್ತಿ ಮಾಡಿಸಲು ಒತ್ತಾಯಿಸಿದ್ದಾರೆ.

    ನಲ್ಲಿಮರದಹಳ್ಳಿ ಶಿಡ್ಲಘಟ್ಟ ನಗರಕ್ಕೆ ಹೊಂದಿಕೊಂಡಂತಿದ್ದರೂ ಇಲ್ಲಿ ಮೂಲಸೌಲಭ್ಯಗಳ ಕೊರತೆಯಿದೆ. ಕುಡಿಯುವ ನೀರಿನ ಕೊರತೆಯ ಜತೆಗೆ ರಸ್ತೆಯಲ್ಲಿ ತ್ಯಾಜ್ಯ ನೀರು ಹರಿಯುವುದರಿಂದ ದುರ್ನಾತಕ್ಕೆ ರಸ್ತೆಯಲ್ಲಿ ಓಡಾಡಲಾಗದು, ಸಾಲದ್ದಕ್ಕೆ ಬಹಳಷ್ಟು ಅನಾರೋಗ್ಯ ಸಮಸ್ಯೆ ಕಾಡುತ್ತಿದೆ.
    ಯಶೋದಾ, ಸ್ಥಳೀಯ ನಿವಾಸಿ

    ನಲ್ಲಿಮರದಹಳ್ಳಿ ರಸ್ತೆಯಲ್ಲಿ ಹರಿಯುತ್ತಿರುವ ತ್ಯಾಜ್ಯ ನೀರಿನಿಂದ ಬಹಳಷ್ಟು ಜನ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗಲು ಸಹ ಆಗದ ಸ್ಥಿತಿ ನಿಮಾರ್ವಾಣವಾಗಿದೆ. ಈ ಬಗ್ಗೆ ತಹಸೀಲ್ದಾರ್ ಸೇರಿದಂತೆ ನಗರಸಭೆ ಆಯುಕ್ತರಿಗೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.
    ಕೃಷ್ಣಪ್ಪ, ಸ್ಥಳೀಯ ನಿವಾಸಿ

    ಶಿಡ್ಲಟ್ಟ ನಗರಸಭೆ ಪೌರಾಯುಕ್ತರಾಗಿ ಇತ್ತೀಚೆಗಷ್ಟೇ ಬಂದಿದ್ದೇನೆ. ನಲ್ಲಿಮರದಹಳ್ಳಿಯ ರಸ್ತೆಯಲ್ಲಿ ರೇಷ್ಮೆ ಕಾರ್ಖಾನೆಯ ತ್ಯಾಜ್ಯ ನೀರು ಹರಿಯುತ್ತಿರುವ ಸಮಸ್ಯೆ ಗಮನಕ್ಕೆ ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ರೇಷ್ಮೆ ಕಾರ್ಖಾನೆಯವರಿಗೆ ತ್ಯಾಜ್ಯ ನೀರು ರಸ್ತೆಗೆ ಬಿಡದಂತೆ ತಾಕೀತು ಮಾಡಲಾಗಿದೆ.
    ಆರ್.ಶ್ರೀಕಾಂತ್, ನಗರಸಭೆ ಪೌರಾಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts