More

    ಖಾಲಿ ನಿವೇಶನಗಳಲ್ಲಿ ಕಸದ ದರ್ಬಾರ್

    ಕೇಶವಮೂರ್ತಿ ವಿ.ಬಿ. ಹಾವೇರಿ
    ಜಿಲ್ಲಾ ಕೇಂದ್ರ, ಯಾಲಕ್ಕಿ ಕಂಪಿನ ಹಾವೇರಿ ನಗರದಲ್ಲಿ ಓಡಾಡಿದರೆ ಯಾಲಕ್ಕಿ ಕಂಪಿಗಿಂತ ಹೆಚ್ಚಾಗಿ ಗಬ್ಬು ವಾಸನೆಯೇ ಮೂಗಿಗೆ ರಾಚುತ್ತದೆ. ಇದಕ್ಕೆ ಮುಖ್ಯ ಕಾರಣ ಜನ ಎಲ್ಲೆಂದರಲ್ಲಿ ಕಸ ಬಿಸಾಡುವುದು. ಅದಕ್ಕಿಂತ ಮುಖ್ಯವಾಗಿ ತಿಪ್ಪೆ ಗುಂಡಿಗಳಂತಾಗಿರುವ ನಗರದ ಖಾಲಿ ನಿವೇಶನಗಳು.

    ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು, 16,814 ವಸತಿ ನಿವೇಶನಗಳು, 1,479 ವಾಣಿಜ್ಯ ಬಳಕೆಯ ನಿವೇಶನಗಳು, 9,502 ಖಾಲಿ ನಿವೇಶನಗಳು ಸೇರಿ ಒಟ್ಟು 27,798 ನಿವೇಶನಗಳಿವೆ. 9,502 ಖಾಲಿ ನಿವೇಶನಗಳಲ್ಲಿ ಅರ್ಧಕ್ಕಿಂತ ಹೆಚ್ಚು ನಿವೇಶನಗಳು ಸೂಕ್ತ ನಿರ್ವಹಣೆ ಇಲ್ಲದೇ ಗಬ್ಬೆದ್ದು ನಾರುತ್ತಿವೆ. ಹಲವು ನಿವೇಶನಗಳು ಕಸ ಚೆಲ್ಲುವ ತಿಪ್ಪೆ ಗುಂಡಿಯಂತಾಗಿದ್ದು, ಇನ್ನು ಕೆಲವು ಜಾಲಿ ಗಿಡ, ಕಂಟಿ ಬೆಳೆದು ಹಂದಿ, ನಾಯಿ, ವಿಷ ಜಂತುಗಳ ವಾಸ ಸ್ಥಾನದಂತಾಗಿವೆ.

    ಕೆಲವರು ಮನೆ ನಿರ್ಮಿಸುವ ಸಲುವಾಗಿ ನಿವೇಶನ ಖರೀದಿಸಿದರೆ, ಮತ್ತೆ ಕೆಲವರು ಹೂಡಿಕೆಗಾಗಿ ನಿವೇಶನ ಖರೀದಿಸಿದ್ದಾರೆ. ಇದರಲ್ಲಿ ಹಲವರು ನಿವೇಶನಕ್ಕೆ ಕಾಂಪೌಂಡ್ ಕಟ್ಟಿಸಿ ಶುಚಿಯಾಗಿಟ್ಟುಕೊಂಡಿದ್ದಾರೆ. ಹಲವರು ತಮ್ಮ ನಿವೇಶನದತ್ತ ತಿರುಗಿಯೂ ನೋಡಿಲ್ಲ. ಈ ನಿವೇಶನಗಳಲ್ಲೇ ಅಕ್ಕಪಕ್ಕದವರು ಕಸ ಚೆಲ್ಲುತ್ತಾರೆ. ಬೇರೆಡೆಯಿಂದಲೂ ಕಟ್ಟಡದ ತ್ಯಾಜ್ಯ ತಂದು ಸುರಿಯಾಗುತ್ತಿದೆ.

    ಶಿವಾಜಿ ನಗರ, ವಿದ್ಯಾನಗರ, ಅಶ್ವಿನಿ ನಗರ, ಇಜಾರಿ ಲಕಮಾಪುರ, ಬಸವೇಶ್ವರ ನಗರ, ನಾಗೇಂದ್ರನಮಟ್ಟಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಾವಿರಾರು ಖಾಲಿ ನಿವೇಶನಗಳು ಕಂಡುಬರುತ್ತವೆ. ಇವುಗಳ ಸ್ವಚ್ಛತೆಗೂ ನಗರಸಭೆಯೂ ಆಸಕ್ತಿ ತೋರುತ್ತಿಲ್ಲ.
    ನಿಯಮದ ಪ್ರಕಾರ ಖಾಲಿ ನಿವೇಶನಗಳಲ್ಲಿ ಬೆಳೆದ ಗಿಡ-ಗಂಟಿ, ಕಸ ಸ್ವಚ್ಛಗೊಳಿಸಿ, ಅದರ ಮೊತ್ತವನ್ನು ಕರದಲ್ಲಿ ಸೇರಿಸಿ ನಗರಸಭೆ ವಸೂಲಿ ಮಾಡಬೇಕಿದೆ. ಆದರೆ, ನಗರಸಭೆ ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಈ ಕುರಿತು ನಗರಸಭೆ ಆಯುಕ್ತರು, ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ. ಖಾಲಿ ನಿವೇಶನಗಳ ಸ್ವಚ್ಛತೆಗಾಗಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

    ನಾಯಿ, ಹಂದಿಗಳ ಉಪಟಳ: ಖಾಲಿ ನಿವೇಶನಗಳಲ್ಲಿ ಕಸ ಹೆಚ್ಚಾಗಿ ಪಕ್ಕದ ಚರಂಡಿ ಹಾಗೂ ರಸ್ತೆಯ ಮೇಲೆ ಕಸ ಹರಡುತ್ತದೆ. ಇಲ್ಲಿ ನಾಯಿ, ಹಂದಿಗಳ ಉಪಟಳ ಹೆಚ್ಚಾಗುತ್ತಿದೆ. ಇದರಿಂದ ಮಕ್ಕಳು, ವೃದ್ಧರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಹೆಚ್ಚಾಗುತ್ತಿದೆ.

    ಖಾಲಿ ನಿವೇಶನಗಳಲ್ಲಿ ಕಸ, ಗಿಡ- ಗಂಟಿ ಬೆಳೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸದ್ಯಕ್ಕೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಈ ಕೂಡಲೇ ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಸ್ವಚ್ಛತೆ ಕುರಿತು ಕ್ರಮ ಜರುಗಿಸಲಾಗುವುದು.
    I ದುಗ್ಗೇಶಿ, ಬಿ.ಎಂ., ಕಂದಾಯ ಅಧಿಕಾರಿ, ಹಾವೇರಿ ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts