More

    ನಗರಸಭೆ ನಿರ್ಲಕ್ಷ್ಯಕ್ಕೆ ಕಸದ ಬುಟ್ಟಿಗಳು ಮಾಯ!

    ಕಿರುವಾರ ಎಸ್.ಸುದರ್ಶನ್ ಕೋಲಾರ
    ನಗರವನ್ನು ಕಾಡುತ್ತಿರುವ ಕಸದ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಅಳವಡಿಸಲಾಗಿದ್ದ ಸ್ಟೀಲ್ ಕಸದ ಬುಟ್ಟಿಗಳ ಸಮಸ್ಯೆಯೂ ಈಗ ಕಾಡತೊಡಗಿದೆ. ಅಲ್ಲಲ್ಲಿ ಅಳವಡಿಸಲಾಗಿದ್ದ ಕಸದ ಬುಟ್ಟಿಗಳು ಕೆಲವೆಡೆ ಕಾಣೆಯಾಗಿದ್ದರೆ, ಇನ್ನು ಕೆಲವೆಡೆ ಮುರಿದುಬಿದ್ದಿವೆ.
    ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 35 ವಾರ್ಡ್‌ಗಳಿವೆ. 15ನೇ ಹಣಕಾಸು ಯೋಜನೆಯಡಿ 13 ಲಕ್ಷ ರೂ. ವೆಚ್ಚದಲ್ಲಿ, ಒಟ್ಟು 69 ಜೋಡಿ ಸ್ಟೀಲ್ ಕಸದ ಬುಟ್ಟಿಗಳನ್ನು ಅಳವಡಿಸಲಾಗಿದೆ. ಆದರೆ ಅವೆಲ್ಲ ಈಗ ಅಸಮರ್ಪಕ ನಿರ್ವಹಣೆಗೆ ಸಾಕ್ಷಿಯಾಗಿ ನಿಂತುಬಿಟ್ಟಿವೆ.

    ಪತ್ರಕರ್ತರ ಭವನ, ನಗರಸಭೆ ಆವರಣ, ಜಯನಗರ, ರೈಲು ನಿಲ್ದಾಣ, ಪಿಸಿ ಬಡಾವಣೆ, ಕಾಲೇಜು ವೃತ್ತ, ಪ್ರಭಾತ್ ಟಾಕೀಸ್ ಹತ್ತಿರ ಸೇರಿದಂತೆ ವಿವಿಧೆಡೆ ಅಳವಡಿಸಲಾಗಿದೆ. ಇಲ್ಲಿನ ಪಿಸಿ ಹಳ್ಳಿ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ಅಳವಡಿಸಿರುವ ಬುಟ್ಟಿಗಳೇ ಕಾಣೆಯಾಗಿವೆ. ಪ್ರಭಾತ್ ಟಾಕೀಸ್ ಮುಂಭಾಗದ ಬುಟ್ಟಿಗಳು ಮುರಿದು ಬಿದ್ದಿವೆ. ಬುಟ್ಟಿಗಳಲ್ಲಿ ಕಸವನ್ನು ನಾಗರಿಕರು ತುಂಬಿಸಿದ್ದರೂ ಪೌರಕಾರ್ಮಿಕರು ಸಕಾಲಕ್ಕೆ ತೆರವುಗೊಳಿಸುತ್ತಿಲ್ಲ. ಇದರಿಂದಾಗಿ ಬುಟ್ಟಿ ತುಂಬಿ ಗಾಳಿಬೀಸಿದಾಗಲೆಲ್ಲ ಕಸವು ಚೆಲ್ಲಾಪಿಲ್ಲಿಯಾಗಿ ಹಾರಿ ಹೋಗುತ್ತಿವೆ.
    ನಗರದಲ್ಲಿ ಕಸವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು, ಅದನ್ನು ನಿಯಂತ್ರಿಸಬೇಕು ಎಂಬ ಕಾರಣದಿಂದ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಬುಟ್ಟಿಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಒಣ ಹಾಗೂ ಹಸಿ ಕಸ ಎಂದು ಎರಡು ರೀತಿಯಲ್ಲಿ ಅಳವಡಿಕೆ ವಾಡಲಾಗಿದೆ. ನಾಗರಿಕರು ಬುಟ್ಟಿಗೆ ಹಾಕುವ ಕಸವನ್ನು ತೆಗೆದುಕೊಂಡು ಹೋಗುವ ಜವಾಬ್ದಾರಿ ನಗರಸಭೆಯದಾಗಿತ್ತು. ಆದರೆ ಬುಟ್ಟಿಗಳು ಕಳವಾದರೆ ಪೌರಕಾರ್ಮಿಕರು ಏನು ವಾಡಲು ಸಾಧ್ಯ? ಬುಟ್ಟಿಗಳನ್ನು ಅಳವಡಿಸುವ ವೇಳೆ ಭದ್ರವಾಗಿರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿತ್ತು.
    ಜನರ ಅನುಕೂಲಕ್ಕಾಗಿ ಕಸದ ಬುಟ್ಟಿಗಳನ್ನು ಹಾಕಲಾಗಿದೆ. ಆದರೆ ಕೆಲವರು ಇದನ್ನು ಕಳವು ವಾಡಿಕೊಂಡು ಹೋಗಿರುವುದರಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಉಳಿದಿರುವ ಬುಟ್ಟಿಗಳನ್ನಾದರೂ ಭದ್ರಪಡಿಸಲು ಕ್ರಮಕೈಗೊಳ್ಳಬೇಕಿದೆ.
    ನಗರದಲ್ಲಿ ಎಲ್ಲೆಂದರಲ್ಲಿ ಕಸವನ್ನು ರಾಶಿ ರಾಶಿಯಾಗಿ ನಗರವಾಸಿಗಳು ಹಾಕುತ್ತಿದ್ದಾರೆ. ಅದನ್ನು ನಗರಸಭೆಯಿಂದ ಸಮರ್ಪಕವಾಗಿ ತೆರವು ಮಾಡುವ ಕೆಲಸ ನಡೆಯುತ್ತಿಲ್ಲ. ಕಸ ವಿಲೇವಾರಿ ಹಳಿತಪ್ಪಿದ್ದು ಅಧಿಕಾರಿಗಳನ್ನು ಪ್ರಶ್ನಿಸಿದರೆ ಪೌರಕಾರ್ಮಿಕರ ಕೊರತೆಯ ನೆಪಹೇಳಿ ತಪ್ಪಿಸಿಕೊಳ್ಳುತ್ತಾರೆ.

    ನಗರದಲ್ಲಿ ಕಸದ ಬುಟ್ಟಿಗಳನ್ನು ಅಳವಡಿಸಿದ ಆರಂಭದಲ್ಲಿ ಜನರನ್ನು ಆಕರ್ಷಿಸಿತ್ತು. ತೂಗು ಕಸದ ಜೋಡಿ ಬುಟ್ಟಿಗಳ ಬಗ್ಗೆ ನಗರಸಭೆಯಿಂದ ಅಳವಡಿಸಲಾಗಿದೆ ಎಂದು ಲಕಗಳನ್ನು ಹಾಕಲಾಗಿತ್ತು. ಆರಂಭದಲ್ಲಿ ಪ್ರತಿನಿತ್ಯ ಪೌರಕಾರ್ಮಿಕರು ಕಸವನ್ನು ತೆಗೆದುಕೊಂಡು ಹೋಗುತ್ತಿದ್ದರು. ಇತ್ತೀಚೆಗೆ ಬುಟ್ಟಿಗಳಲ್ಲಿದ್ದ ಕಸ ಹಾಗೇ ಉಳಿದುಕೊಳ್ಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ನಗರದಲ್ಲಿ ತೆರವುಗೊಳಿಸುವ ಕಸವನ್ನು ನಗರಸಭೆಯ ಚಾಲಕರೇ ನಗರ ಸುತ್ತಮುತ್ತ ಎಲ್ಲೆಂದರಲ್ಲಿ ರಾಶಿ ಹಾಕಿ ಬರುತ್ತಾರೆ. ಶ್ರೀನಿವಾಸಪುರ ರಸ್ತೆಯ ಬಾರಂಡಹಳ್ಳಿ, ಕೋಲಾರಮ್ಮ ಕೆರೆಯ ಸುತ್ತಮುತ್ತ, ಕೋಟಿಕಣ್ಣೂರು ಕೆರೆ ಕಟ್ಟೆಯ ಮೇಲೆ ಹಾಕಿ ಸೌಂದರ್ಯ ಹಾಳು ಮಾಡುತ್ತಿದ್ದಾರೆ. ಇದರ ಅರಿವು ಇರುವ ಅಧಿಕಾರಿಗಳು ಜಾಣ ಮೌನ ಅನುಸರಿಸುತ್ತಿದ್ದಾರೆ.

    ನಗರಸಭೆ ಆವರಣದಲ್ಲಿ ಅಳವಡಿಸಲಾಗಿರುವ ಜೋಡಿ ಕಸದ ಬುಟ್ಟಿಯಲ್ಲೇ ಕಸ ತುಂಬಿ ತುಳುಕುತ್ತಿದೆ. ಕಚೇರಿಯ ಆವರಣದಲ್ಲೇ ಹೀಗಾದರೆ ಸಾರ್ವಜನಿಕರ ಸ್ಥಳಗಳಲ್ಲಿ ನಿರ್ವಹಣೆ ಹೇಗೆ ಸಾಧ್ಯ? ಕಸದ ಬುಟ್ಟಿ ಪಕ್ಕದಲ್ಲಿಯೇ ಆರೋಗ್ಯ ನಿರೀಕ್ಷಕರು ಕಣ್ಣಿಗೆ ಕಾಣದಂತೆ ಓಡಾಡುತ್ತಿರುತ್ತಾರೆ.

    • ಮಾಹಿತಿ ನೀಡಲು ಅಧಿಕಾರಿಗಳ ನಿರ್ಲಕ್ಷ್ಯ
      ನಗರದಲ್ಲಿ ಕಸದ ಬುಟ್ಟಿಗಳನ್ನು ಅಳವಡಿಸಿರುವ ಕುರಿತು ಮಾಹಿತಿ ಕೇಳಿದಾಗ ನಗರಸಭೆಯ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡಲು ಹಿಂದೇಟು ಹಾಕಿದರು. ಜೋಡಿ ಕಸದ ಬುಟ್ಟಿಗಳನ್ನು ಅಳವಡಿಸಿದ ಕೆಲವೇ ತಿಂಗಳಲ್ಲಿ ಬುಟ್ಟಿಗಳು ಕಳವು ಆಗಿರುವುದು ಅಧಿಕಾರಿಗಳಿಗೆ ಮುಜುಗರ ಉಂಟು ಮಾಡುತ್ತಿದೆ. ಪೌರಾಯುಕ್ತರನ್ನು ಮಾಹಿತಿ ಕೇಳಿದಾಗ ಪರಿಸರ ವಿಭಾಗದ ಅಧಿಕಾರಿಗಳನ್ನು ಕೇಳಿ ಅಂದರು, ಅಲ್ಲಿನ ಅಧಿಕಾರಿಗಳನ್ನು ಕೇಳಿದಾಗ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇಂಜಿನಿಯರಿಂಗ್ ವಿಭಾಗವನ್ನು ಕೇಳಿ ಅಂದರು, ಇಂಜಿನಿಯರ್‌ಗಳನ್ನು ಕೇಳಿದಾಗ ಅಕೌಂಟ್ಸ್‌ನವರನ್ನು ಕೇಳಿ ಎಂದು ಸುತ್ತಾಡಿಸಿ, ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದರು.
    • ಕಳಪೆ ಕೆಲಸಕ್ಕೆ ಬಿಲ್ ಪಾವತಿ
    • ನಗರದಲ್ಲಿ ಬುಟ್ಟಿಗಳನ್ನು ಅವೈಜ್ಞಾನಿಕವಾಗಿ ಅಳವಡಿಸಲಾಗಿದ್ದು, ಈ ಬಗ್ಗೆ ನಗರಸಭೆ ಸದಸ್ಯರ ಗಮನಕ್ಕೆ ತರದೆ ಕೆಲಸ ಕೈಗೊಂಡಿದ್ದಾರೆ. ಕಳಪೆ ಗುಣಮಟ್ಟದ ಕಸದ ಬುಟ್ಟಿಗಳನ್ನು ಅಳವಡಿಸಿದ್ದಾರೆ. ಅಧಿಕಾರಿಗಳು ಗುಣಮಟ್ಟ ಪರಿಶೀಲನೆ ಮಾಡದೆ ಬಿಲ್ ಪಾವತಿ ಮಾಡಿದ್ದಾರೆ. ಅಳವಡಿಸಿರುವ ಕೆಲವೇ ದಿನಗಳಿಗೆ ಕಳವಾಗಿವೆ. ಇನ್ನು ಕೆಲವು ಮುರಿದು ಬಿದ್ದಿವೆ. ಕಳಪೆ ಕೆಲಸಕ್ಕೆ ಲಕ್ಷ ಲಕ್ಷ ಬಿಲ್ ಪಾವತಿ ಮಾಡುವ ಅಗತ್ಯವೇನಿತ್ತು..? ಎಂದು ನಗರಸಭೆ ಸದಸ್ಯ ರಾಕೇಶ್ ಪ್ರಶ್ನಿಸಿದ್ದಾರೆ.
    ನಗರಸಭೆ ನಿರ್ಲಕ್ಷ್ಯಕ್ಕೆ ಕಸದ ಬುಟ್ಟಿಗಳು ಮಾಯ!
    ರಾಕೇಶ್

    ಅಧಿಕಾರಿಗಳಿಗೆ ಮುಂದಾಲೋಚನೆ ಇಲ್ಲ
    ನಗರದಲ್ಲಿನ ಜನಸಂಖ್ಯೆಗೆ ತಕ್ಕಂತೆ ಕ್ರಿಯಾಯೋಜನೆಗಳನ್ನು ತಯಾರಿಸಿ ಅನುದಾನವನ್ನು ವೆಚ್ಚ ಮಾಡಬೇಕು. ಅಧಿಕಾರಿಗಳಿಗೆ ಅಭಿವೃದ್ಧಿಗಿಂತ ಹಣ ಪೋಲು ಮಾಡುವುದು ಮುಖ್ಯವಾಗಿದೆ. ಸರ್ಕಾರದ ಅನುದಾನದ ವೆಚ್ಚ ಮಾಡುವಾಗ ಮುಂದಾಲೋಚನೆ ಇಟ್ಟುಕೊಂಡು ಕೆಲಸ ಮಾಡಬೇಕು. ಯಾವುದೇ ಕೆಲಸಕ್ಕೆ ಕ್ರಿಯಾ ಯೋಜನೆ ತಯಾರಿಸುವಾಗ ಅಧಿಕಾರಿಗಳು ಸದಸ್ಯರನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಸ್ವಂತ ನಿರ್ಣಯಗಳನ್ನು ಕೈಗೊಂಡು ಹಣ ಪೋಲು ಮಾಡುತ್ತಿದ್ದಾರೆ. ನಗರದ ಬಹುತೇಕ ಕಡೆ ಕೋಟ್ಯಂತರ ರೂ. ವೆಚ್ಚ ಮಾಡಿ ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಾಣ ಮಾಡಿದ್ದರು ನಿರ್ವಹಣೆ ಮಾಡುತ್ತಿಲ್ಲ ಎಂದು ನಗರಸಭೆ ಮಾಜಿ ಉಪಾಧ್ಯಕ್ಷ ಪ್ರವೀಣ್ ಗೌಡ ಆರೋಪಿಸಿದರು.

    ನಗರಸಭೆ ನಿರ್ಲಕ್ಷ್ಯಕ್ಕೆ ಕಸದ ಬುಟ್ಟಿಗಳು ಮಾಯ!
    ಪ್ರವೀಣ್ ಗೌಡ
    ನಗರಸಭೆ ನಿರ್ಲಕ್ಷ್ಯಕ್ಕೆ ಕಸದ ಬುಟ್ಟಿಗಳು ಮಾಯ!
    ಕೋಲಾರ ನಗರದ ಪಿಸಿ ಬಡಾವಣೆಯ ಸರ್ಕಾರಿ ಶಾಲೆಯ ಮುಂದೆ ಅಳವಡಿಸಿರುವ ಕಸದ ಬುಟ್ಟಿಗಳು ಕಳವಾಗಿರುವುದು.
    ನಗರಸಭೆ ನಿರ್ಲಕ್ಷ್ಯಕ್ಕೆ ಕಸದ ಬುಟ್ಟಿಗಳು ಮಾಯ!
    ಕೋಲಾರ ನಗರಸಭೆ ಆವರಣದಲ್ಲಿನ ಕಸದ ಬುಟ್ಟಿ ತುಂಬಿದ್ದರು ಕಸ ವಿಲೇವಾರಿಯಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts